ನಿರ್ದೇಶಕ ಪ್ರದೀಪ್ ವರ್ಮ “ಉರ್ವಿ’ ಚಿತ್ರದ ಬಳಿಕ ರವಿಚಂದ್ರನ್ ಪುತ್ರ ಮನೋರಂಜನ್ ಅವರಿಗೊಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಈಗ ಪ್ರದೀಪ್ ವರ್ಮ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಬ್ರಾಹ್ಮಿ’ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಸಣ್ಣದ್ದೊಂದು ಪೂಜೆ ಕೂಡ ನೆರವೇರಿದೆ. ಈ ಚಿತ್ರವನ್ನು ಸುಮನ್ ನಗರ್‌ಕರ್ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿರುವುದು ವಿಶೇಷ.
ಪ್ರಯೋಗ್ ಸ್ಟುಡಿಯೋಸ್ ಹಾಗೂ ಮಯೂರ್ ಸಿನಿಮಾಸ್ ಮೂಲಕ ತಯಾರಾಗುತ್ತಿರುವ ಚಿತ್ರವಿದು. “ಬ್ರಾಹ್ಮಿ’ ಅಂದರೆ, ಸರಸ್ವತಿ ಎಂದರ್ಥ. ಅಲ್ಲಿಗೆ ಇದೊಂದು ಸಂಗೀತಮಯ ಚಿತ್ರ ಎಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. ಚಿತ್ರದಲ್ಲಿ ಅನೂಷಾ ಕೃಷ್ಣ ಮತ್ತು ಸುಮನ್ ನಗರ್‌ಕರ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಹ ಮಹಿಳಾ ಪ್ರಧಾನ ಚಿತ್ರ. ಇಡೀ ಚಿತ್ರದಲ್ಲಿ ಸಂಗೀತದ ಪಯಣವಿದೆ.
ಸಂಗೀತಕ್ಕೆ ಮಾರುಹೋಗಿರುವ ಇಬ್ಬರು ಅಭಿಮಾನಿಗಳ ಕಥೆ ಇಲ್ಲಿದೆ. ಸಂಗೀತ ಕ್ಷೇತ್ರದಿಂದ ದೂರ ಆದಾಗ, ಏನೆಲ್ಲಾ ನಡೆದುಹೋಗುತ್ತೆ ಎಂಬ ಕಥಾಹಂದರದ ಜೊತೆಗೆ ಇಬ್ಬರು ಸಂಗೀತಗಾರರ ನಡುವಿನ ಹೊಸತನದ ಕಥೆ ಹೇಳಹೊರಟಿದ್ದೇನೆ. ಇದೊಂದು ರೀತಿಯ ಮ್ಯೂಸಿಕಲ್ ಸೈಕಲಾಜಿಕಲ್ ಥ್ರಿಲ್ಲರ್ ಎನ್ನುತ್ತಾರೆ ನಿರ್ದೇಶಕರು. “ಈ ಹಿಂದೆ “ಉರ್ವಿ’ ಮೂಲಕ ಪ್ರೇಕ್ಷಕರನ್ನು ಅಳಸಿ, ಒಂದಷ್ಟು ಬೇಸರ ಮಾಡಿಸಲಾಗಿತ್ತು.
ಈ ಬಾರಿ “ಬ್ರಾಹ್ಮಿ’ ಮೂಲಕ ನೋಡುಗರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದೇನೆ. ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನ ಮಾಡುತ್ತಿದ್ದು, ಇಲ್ಲಿ ರಂಗಭೂಮಿ ಪ್ರತಿಭೆ ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ರಮೇಶ್ ಭಟ್ ಹಾಗೂ ಸತ್ಯಬಿಜಿ ಸೇರಿದಂತೆ ಒಂದಷ್ಟು ಪಾತ್ರಗಳು ಬಂದು ಹೋಗುತ್ತವೆ. ಈ ಹಿಂದೆ ಕೂಡ “ಉರ್ವಿ’ ಮೂಲಕ ಮಹಿಳಾ ಪ್ರಧಾನ ಚಿತ್ರ ಕಟ್ಟಿಕೊಟ್ಟಿದ್ದೆ. ಇಲ್ಲೂ ಅದೇ ಅಂಶಗಳಿದ್ದರೂ, ಔಟ್ ಅಂಡ್ ಔಟ್ ಮ್ಯೂಸಿಕಲ್ ಥ್ರಿಲ್ಲರ್ ಅಂಶಗಳು ಇಲ್ಲಿರಲಿವೆ.
ಈವರೆಗೆ ಯಾರೂ ಸೃಷ್ಟಿಸದ ನಾಲ್ಕು ಪಾತ್ರಗಳನ್ನು ಮಾಡಿದ್ದೇನೆ’ ಎಂದು ವಿವರ ಕೊಡುತ್ತಾರೆ ಪ್ರದೀಪ್ ವರ್ಮ. ವಾಸು ದೀಕ್ಷಿತ್ ಅವರ ಪತ್ನಿ ಬಿಂದು ಮಾಲಿನಿ ಅವರು ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಗುರುಪ್ರಸಾದ್ ನರ್‍ನಾಡ್ ಛಾಯಾಗ್ರಹಣವಿದೆ. ಬೆಂಗಳೂರು, ಚಿಕ್ಕಮಗಳೂರು ಮತ್ತು ಕಳಸ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಜುಲೈ 18 ರಿಂದ “ಬ್ರಾಹ್ಮಿ’ ಚಿತ್ರೀಕರಣ ಶುರುವಾಗಲಿದೆ.