Advertisement
ಚಿತ್ರ ನಿರ್ಮಾಣದ ಅನುಭವ ಹೇಗಿದೆ? ಮಹಿಳೆಯರು ಈ ಕ್ಷೇತ್ರ ಆಯ್ದುಕೊಳ್ಳುವ ಬಗ್ಗೆ ನಿಮ್ಮ ಸಲಹೆ ಏನು?ಮಹಿಳೆಯರು ನಿರ್ಮಾಣದಲ್ಲಿ ತೊಡಗುವುದು ಅಷ್ಟೇನೂ ಕಷ್ಟದ ಕೆಲಸ ಎಂದು ನನಗೆ ಅನ್ನಿಸಿಲ್ಲ. ಆದರೆ ದೃಢವಾಗಿ ಇರುವುದು ಬಹಳಾ ಮುಖ್ಯ. ಮಹಿಳೆ ಎಷ್ಟೇ ಉತ್ತಮ ಕೆಲಸಗಾರ್ತಿಯಾದರೂ, ಎಷ್ಟೇ ಸ್ಟ್ರಿಕ್ಟ್ ಆಗಿ ಇದ್ದರೂ “ಹೆಂಗಸಲ್ಲವಾ’ ಎಂದು ಸದರ ತಗೆದುಕೊಳ್ಳುವವರೇ ಹೆಚ್ಚಿರುತ್ತಾರೆ. ಪ್ರೊಡಕ್ಷನ್ ವಿಚಾರದಲ್ಲಿ ನಾನು ಕೂಡ ತುಂಬಾ ಸ್ಟ್ರಾಂಗ್ ಆಗಿಯೇ ಇರುತ್ತೇನೆ. ಜೊತೆಗೆ ನನ್ನ ಗಂಡ ಕೂಡ ನನ್ನ ಜೊತೆ ಈ ಕೆಲಸ ಹಂಚಿಕೊಂಡಿರುವುದರಿಂದ ಕಷ್ಟ ಅಂತೇನೂ ಅನ್ನಿಸುತ್ತಿಲ್ಲ. ಆರಾಮಾಗಿ ಮಹಿಳೆಯರು ಈ ಕ್ಷೇತ್ರವನ್ನು ಆಯ್ದುಕೊಳ್ಳಬಹುದು.
ಮದುವೆಯಾಗಿ ಅಮೆರಿಕಕ್ಕೆ ಹೊರಡುವಾಗ ಚಿತ್ರರಂಗಕ್ಕೆ ಮರಳುವ ಬಗ್ಗೆ ನಿರ್ದಿಷ್ಟ ಯೋಚನೆ ಮಾಡಿರಲಿಲ್ಲ. ಬಹುಷಃ 2-3 ವರ್ಷ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂದು ಊಹಿಸಿದ್ದೆ. ಅದು 15 ವರ್ಷ ಆಯಿತು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕಕ್ಕೆ ಬಂದಾಗ ನಮ್ಮ ಮನೆಯಲ್ಲಿ ಉಳಿದಿದ್ದರು. ಆಗ, ನೀವು ಏಕೆ ಮತ್ತೆ ನಟಿಸುವ ಯೋಚನೆಯನ್ನೇ ಮಾಡಿಲ್ಲ ಎಂದರು. ಭಾರತಕ್ಕೆ ಹೋದ ಬಳಿಕ ಅವರೇ “ಇಷ್ಟಕಾಮ್ಯ’ದಲ್ಲಿ ಒಂದು ಪಾತ್ರ ಕೊಟ್ಟರು. ಪಾತ್ರ ಚೆನ್ನಾಗಿತ್ತು. ಮತ್ತೆ ಕ್ಯಾಮರಾ ಮುಂದೆ ನಿಂತೆ. “ಜೀರ್ಜಿಂಬೆ’ಯಲ್ಲೂ ಒಬ್ಬ ಜವಾಬ್ದಾರಿಯುತ ಪ್ರಜೆಯ ಪಾತ್ರ. ಅವಕಾಶಗಳು ಬರುತ್ತಲೇ ಇವೆ. ಆದರೆ ನನಗೆ ಅಮ್ಮ, ಅಕ್ಕನ ಪಾತ್ರ ಮಾಡಲು ಇಷ್ಟ ಇಲ್ಲ. ನಾನು ಈಗಲೂ ಮೊದಲಿನಂತೆಯೇ ಪಾತ್ರಗಳ ವಿಷಯದಲ್ಲಿ ಚೂಸಿ. ಮಾಡುವ ಪಾತ್ರ ಚಿಕ್ಕದಾದರೂ ತೂಕದ ಪಾತ್ರವಿರಬೇಕು. ನಟನೆಯನ್ನು ಮಿಸ್ ಮಾಡಿಕೊಳ್ಳಲಿಲ್ಲವಾ, ಚಿತ್ರರಂಗಕ್ಕೆ ಹಿಂದಿರುಗುವ ತುಡಿತ ಇರಲಿಲ್ವಾ?
ಇಲ್ಲ. ಸಮಯ ಹೇಗೆ ಹೋಯಿತು ಎಂದೇ ತಿಳಿಯಲಿಲ್ಲ. ದೇಶ ನೋಡುವುದು, ಸುತ್ತಾಡುವುದು. ಮ್ಯಾರಥಾನ್, ಕನ್ನಡ, ಭಾರತೀಯ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರ ಜೊತೆ ಎಂಜಾಯ್ ಮಾಡುವುದರಲ್ಲಿ 18 ವರ್ಷಗಳು ಹೇಗೆ ಕಳೆದವು ಎಂದು ತಿಳಿಯಲೇ ಇಲ್ಲ. ಮೂರು ವರ್ಷಗಳಿಂದ ಮತ್ತೆ ಚಿತ್ರರಂಗದಲ್ಲಿ ತೊಡಗಿದ್ದೇನೆ. ನನ್ನ ಸ್ನೇಹಿತರು ರೇಗಿಸುತ್ತಿರುತ್ತಾರೆ, ಅಮೆರಿಕ-ಭಾರತದ ನಡುವೆ ಓಡಾಡೋದು ಅಂದ್ರೆ ನಿನಗೆ ಮಂಡ್ಯ-ಬೆಂಗಳೂರು ಪ್ರಯಾಣದ ಥರಾ ಆಗಿದೆ ಅಲ್ವಾ ಅಂತ. ಅಷ್ಟು ಬಾರಿ ಅಮೆರಿಕ-ಬೆಂಗಳೂರಿನ ಮಧ್ಯೆ ಪ್ರಯಾಣ ಮಾಡುತ್ತಿದ್ದೇನೆ. ನಾನು ಅಮೆರಿಕದಲ್ಲಿ ತುಂಬಾ ಗಿಡಗಳನ್ನು ಬೆಳೆಸಿದ್ದೇನೆ. ಅಲ್ಲಿಂದ ಬರುವಾಗ ಗಿಡಗಳ ಬಗ್ಗೆಯೇ ಚಿಂತೆಯಾಗುತ್ತದೆ.
Related Articles
ನನ್ನ ಕೈ ಅಡುಗೆ ತಿಂದವರೆಲ್ಲಾ ನಾನು ಒಳ್ಳೆಯ ಕುಕ್ ಎಂದೇ ಹೇಳುತ್ತಾರೆ. ನನಗೆ ಅಡುಗೆ ಮಾಡಲು ತುಂಬಾ ಇಷ್ಟ. ಅಮೆರಿಕದಲ್ಲಿ ವೀಕೆಂಡ್‌ಗಳಲ್ಲಿ ಸ್ನೇಹಿತರೆಲ್ಲ ಒಂದೆಡೆ ಸೇರಿ ಅಡುಗೆ ಮಾಡಿ ತಿನ್ನುವುದು, ಪಾರ್ಟಿ ಮಾಡುವುದು ಸಾಮಾನ್ಯ. ನಾನು ಆ ತರದ ಭೋಜನ ಕೂಟಗಳನ್ನು ಹೆಚ್ಚು ಆಯೋಜಿಸುತ್ತೇನೆ. ನಾನು ಮಾಡುವ ಸಲಾಡ್ಸ್, ಚೈನೀಸ್ ತಿನಿಸು, ಗೋದಿ ತರಿಯ ಸಿಹಿ, ಮೈಸೂರ್‌ಪಾಕ್, ಪಲಾವ್ ನನ್ನ ಸ್ನೇಹಿತರಿಗೆ ಇಷ್ಟ. ಅಕ್ಕಿ ಬದಲಿಗೆ ಕಿನೊವ, ಬಾರ್ಲಿಯಂತಹ ಕಡಿಮೆ ಕ್ಯಾಲೊರಿ ಪದಾರ್ಥಗಳನ್ನು ಬಳಸುತ್ತೇನೆ. ಎಣ್ಣೆಯಲ್ಲಿ ಕರಿಯುವ ಪದಾರ್ಥ ಮಾಡುವುದು ಬಹಳ ಕಡಿಮೆ. ಕರಿದ ಪದಾರ್ಥ ಎದುರಿದ್ದರೆ ಕಂಟ್ರೋಲ್ ತಪ್ಪಿ ತಿಂದು ಬಿಡುತ್ತೇವೆ ಎಂದು ಆದಷ್ಟು ಕಮ್ಮಿ ತಯಾರಿಸುತ್ತೇನೆ.
Advertisement
ಕಾಲೇಜ್ ದಿನಗಳಲ್ಲೂ ನೀವು ಇಷ್ಟೇ ಸಿಂಪಲ್ ಆಗಿ ಇದ್ರಾ?ನಾನು ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದು. ಕಾಲೇಜು ದಿನಗಳಲ್ಲೂ ನಾನು ತುಂಬಾ ಸರಳ ಮತ್ತು ಶಾಂತ ಸ್ವಭಾವದ ಹುಡುಗಿ. ನಾವು 9 ಜನ ಸ್ನೇಹಿತೆಯರಿದ್ದೆವು. ನಮ್ಮನ್ನು ನಾವು “ನವರತ್ನಗಳು’ ಎಂದು ಕರೆದುಕೊಳ್ಳುತ್ತಿದ್ದೆವು. ಕಾಲೇಜು ಬಿಟ್ಟರೆ ಮನೆಗೆ ಬರುತ್ತಿದ್ದೆವು. ಅಪರೂಪಕ್ಕೆ ಗುರುದರ್ಶನ್ ಹೋಟೆಲ್‌ನಲ್ಲಿ ಬೈಟೂ ಟೀ ಕುಡಿಯುತ್ತಿದ್ದೆವು. ಸಿನಿಮಾ, ಶಾಪಿಂಗ್ ಅಂತಲ್ಲಾ ಸುತ್ತಾಡಿದ್ದೇ ಇಲ್ಲ. ಚನ್ನಾಗಿ ಹಾಡುತ್ತಿದ್ದೆ. ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುವುದು, ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡುವುದು ಮಾಡುತ್ತಿದ್ದೆ. ಸಿನಿಮಾ ಪ್ರವೇಶ ಆಗಿದ್ದು ಆಕಸ್ಮಿಕವಾ ಅಥವಾ ಅದಕ್ಕಾಗಿ ಏನಾದರೂ ತಯಾರಿ ಮಾಡ್ಕೊಂಡಿದ್ರಾ?
ದೂರದರ್ಶನದಲ್ಲಿ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ಕೊಡಲು ಹೋಗಿದ್ದೆ. ಅಲ್ಲಿ ನನಗೆ ನಾಟಕಕ್ಕೆ ಆಡಿಷನ್ ಕೊಡಲು ಹೇಳಿದರು. ಅದಕ್ಕೂ ಮುಂಚೆ ಸ್ಟೇಜ್ ಹತ್ತಿ ಹಾಡಿದ್ದಷ್ಟೇ ಗೊತ್ತಿತ್ತು. ಅಭಿನಯ ಮಾಡಿರಲಿಲ್ಲ. ಭಯದಲ್ಲೇ ಆಡಿಷನ್ ಕೊಟ್ಟೆ. ಅಲ್ಲಿಂದ ನನಗೆ ಸುನೀಲ್ ಕುಮಾರ್ ದೇಸಾಯಿ ಅವರ “ನಿಷ್ಕರ್ಷ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಒಂದು ಪ್ರಯತ್ನ ಮಾಡೋಣ ಎಂದು ಒಪ್ಪಿಕೊಂಡೆ. ಸಿನಿಮಾಗಾಗಿ ಯಾವ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ನನಗೆ ಅತ್ಯುತ್ತಮ ನಿರ್ದೇಶಕ, ನಟರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅನುಭವದಿಂದಲೇ ನಟನೆ ಕಲಿಯುತ್ತಾ ಹೋದೆ. ಸಹಜವಾಗಿ ಅಭಿನಯಿಸಿಕೊಳ್ಳುವುದನ್ನು ರೂಢಿಸಿಕೊಂಡೆ. ಮನೆಯಲ್ಲಿ ಪೂಜೆ- ಹಬ್ಬವನ್ನು ಹೇಗೆ ಆಚರಿಸುತ್ತೀರಿ?
ನಾನು ಪೂಜೆ ಮಾಡುವುದಿಲ್ಲ. ಹಬ್ಬ ಎಂದರೆ ನನ್ನ ಪ್ರಕಾರ ನೆಂಟರು, ಸ್ನೇಹಿತರು ಒಟ್ಟಿಗೇ ಸೇರಿ ಸಂಭ್ರಮ ಪಡುವುದು. ವಿಶೇಷ ಪೂಜೆ, ಆಚರಣೆಯನ್ನು ನಾನು ಹಬ್ಬ ಎಂದು ಪರಿಗಣಿಸುವುದಿಲ್ಲ. ಚಿಕ್ಕಂದಿನಲ್ಲಿ ಅಜ್ಜಿ ತುಳಸಿಗೆ ಪ್ರದರ್ಶನ ಹಾಕು ಎಂದಾಗ ನಾನು ಕಾರಣ ಹೇಳು ಎಂದು ಕೇಳುತ್ತಿದ್ದೆ. ಸಮರ್ಪಕ ಉತ್ತರ ದೊರೆಯದ ಇದ್ದರೆ ನಾನು ಅದನ್ನು ಆಚರಿಸುತ್ತಿರಲಿಲ್ಲ. ಪ್ರಶ್ನಿಸುವ ಮನೋಭಾವ ಚಿಕ್ಕಂದಿನಿಂದಲೂ ನನಗೆ ಇದೆ. ನನ್ನ ತಂದೆ-ತಾಯಿ, ಅತ್ತೆ ಮಾವ ಅಮೆರಿಕ ಬಂದಾಗ ಪೂಜೆ ಮಾಡುತ್ತಾರೆ. ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತೇನೆ. ಅವರ ಮೇಲೆ ನನ್ನ ಅಭಿಪ್ರಾಯ ಹೇರುವುದಿಲ್ಲ. ನಾನು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ನಿಮ್ಮಿಬ್ಬರ ಕಾಮನ್ ಇಂಟರೆಸ್ಟ್‌ಗಳು ಏನೇನು?
ಇಬ್ಬರಿಗೂ ಪ್ರವಾಸ ತುಂಬಾ ಇಷ್ಟ. ಇಬ್ಬರೂ ಮ್ಯಾರಥಾನ್ ರನ್ನರ್. 42 ಕಿ.ಮೀ. ಮ್ಯಾರಥಾನ್ ಓಡುತ್ತೇವೆ. ವಿವಿಧ ಆಹಾರ ರುಚಿ ನೋಡಲು ಇಷ್ಟ. ಅದು ಬಿಟ್ಟರೆ ಸಿನಿಮಾ, ಸಾಹಿತ್ಯ ಅಂತೆಲ್ಲಾ ತುಂಬಾ ಹರಟುತ್ತೇವೆ. ನಿಮ್ಮ ಫಿಟ್ನೆಸ್ ಮಂತ್ರ?
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತೇನೆ. ಜಾಗಿಂಗ್, ವಾಕಿಂಗ್ ಮಾಡುತ್ತೇನೆ. ಆರೋಗ್ಯಕರ ಆಹಾರವನ್ನೇ ತಿನ್ನುತ್ತೇನೆ. ಹೆಚ್ಚಾಗಿ ಸಲಾಡ್ಸ್, ಕಿನೊವ ಬಾರ್ಲಿ ಬಳಸುತ್ತೇನೆ. ಚರ್ಮಕ್ಕಾಗಿ ವಿಶೇಷ ಕಾಳಜಿಯೇನೂ ತೆಗೆದುಕೊಳ್ಳುವುದಿಲ್ಲ. ಮುಖ್ಯವಾಗಿ ನಾನು ಅಗತ್ಯವಿಲ್ಲದೇ ಮೇಕಪ್ ಮಾಡುವುದಿಲ್ಲ. ಐಲೈನರ್ ಹಾಕಿದರೆ ಅದೇ ದೊಡ್ಡ ಮೇಕಪ್. ಚಿತ್ರಗಳಲ್ಲೂ ನ್ಯಾಚುರಲ್ ಸ್ಕಿನ್ ಟೋನೇ ಇರಲಿ ಎಂದು ಬಯಸುತ್ತೇನೆ. ನಾನು ಚಿನ್ನವನ್ನೇ ಧರಿಸೋಲ್ಲ!
ನನಗೆ ಬುದ್ಧಿ ಬಂದಾಗಿನಿಂದಲೂ ನಾನು ಚಿನ್ನ ಕೊಂಡಿಲ್ಲ ಮತ್ತು ಧರಿಸಿಲ್ಲ. ನನ್ನ ಬಳಿ ಚಿನ್ನವೇ ಇಲ್ಲ ಎಂದಮೇಲೆ ಪ್ಲಾಟಿನಂ, ವಜ್ರ, ಬೆಳ್ಳಿ ಎಲ್ಲ ಹೇಗೆ ಇರಲು ಸಾಧ್ಯ? ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಅಗತ್ಯವಿದ್ದರೆ ಫ್ಯಾಷನ್ ಜ್ಯುವೆಲರಿ ಧರಿಸುತ್ತೇನಷ್ಟೇ. ಒಮ್ಮೆ ಹೀಗಾಯಿತು; ಕುಟುಂಬ ಸಮೇತ ದುಬೈಗೆ ಹೋಗಿದ್ದೆವು. ದುಬೈಗೆ ಹೋದವರು ಚಿನ್ನ ಖರೀದಿಸುತ್ತಾರಲ್ಲ, ಹಾಗೆಯೇ ನಾವೂ ಒಂದು ಚಿನ್ನದಂಗಡಿಗೆ ಹೋಗಿದ್ದೆವು. ನನ್ನ ಅಮ್ಮ, ಅತ್ತಿಗೆ ಎಲ್ಲಾ ಚಿನ್ನ ಕೊಳ್ಳುತ್ತಿದ್ದರು. ಅಂಗಡಿಯಾತ ನನ್ನ ಬಳಿ ಬಂದು, “ನಿಮಗೇನು ಕೊಡಲಿ?’ ಎಂದು ಕೇಳಿದ. “ನಾನು ಏನೂ ಕೊಳ್ಳುವುದಿಲ್ಲ’ ಎಂದೆ. 1 ಗಂಟೆಯ ಬಳಿಕ ಮತ್ತೆ ಬಂದು ನೀವೇನಾದರೂ ಕೊಳ್ಳುತ್ತೀರಾ? ಎಂದು ಕೇಳಿದ. “ಆಗಲೇ ಹೇಳಿದೆನಲ್ಲಾ, ನಾನು ಚಿನ್ನ ಕೊಳ್ಳುವುದಿಲ್ಲ’ ಎಂದೆ. ಅದಕ್ಕವರು, “1 ಗಂಟೆಯ ಬಳಿಕ ಮನಸ್ಸು ಬದಲಿಸಿರುತ್ತೀರೇನೋ ಅಂತ ಕೇಳಿದೆ’ ಎಂದರು. ನಾನು ಜೋರಾಗಿ ನಕ್ಕುಬಿಟ್ಟೆ. ಇಷ್ಟು ವರ್ಷಗಳಲ್ಲೇ ಮನಸ್ಸು ಬದಲಿಸದೇ ಇರುವವಳು 1 ಗಂಟೆಯೊಳಗೆ ಬದಲಿಸಿಬಿಡ್ತೀನಾ ಅಂತ. ನಮ್ಮದು ಸರಳ ವಿವಾಹ
ನಾನು ಮದುವೆ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಅದರ ಬಗ್ಗೆ ಆಸಕ್ತಿಯೂ ಇರಲಿಲ್ಲ. ನಾನು ಮತ್ತು ಗುರು ಮೊದಲಿನಿಂದಲೂ ಸ್ನೇಹಿತರು. ಒಮ್ಮೆ ಅವರೇ, ಮದುವೆಯ ಪ್ರಸ್ತಾಪ ಇರಿಸಿದರು. ನಮ್ಮಿಬ್ಬರ ಜೀವನ ಶೈಲಿ, ಜೀವನವನ್ನು ನೋಡುವ ಕ್ರಮ ಒಂದೇ ರೀತಿಯಾಗಿದ್ದರಿಂದ ಅವರನ್ನು ಮದುವೆಯಾಗುವುದೇ ಸರಿಯಾದ ನಿರ್ಧಾರ ಅನ್ನಿಸಿ ಮದುವೆಗೆ ಸಮ್ಮತಿ ನೀಡಿದೆ. ನಾವು ಸರಳವಾಗಿ ರಿಜಿಸ್ಟರ್ ಮದುವೆಯಾದೆವು. ನನ್ನ ತಂದೆ ತಾಯಿ, ಅಣ್ಣ ಮತ್ತು ಅವರ ತಂದೆ, ತಾಯಿ, ಅತ್ತಿಗೆ- ಇಷ್ಟೇ ಜನ ನಮ್ಮ ಮದುವೆಗೆ ಇದ್ದವರು. ಅದಾದ ಬಳಿಕ ಕುಟುಂಬದವರನ್ನು ಮಾತ್ರ ಕರೆದು ಒಂದು ಗೆಟ್ ಟುಗೆದರ್ ಮಾಡಿದ್ವಿ. ನಾನು ಮದುವೆಯಲ್ಲಿ ತಾಳಿ ಕಟ್ಟಿಸಿಕೊಂಡಿರಲಿಲ್ಲ. ಈಗಲೂ ನಾನು ತಾಳಿ ಹಾಕಿಕೊಂಡಿಲ್ಲ. ಪ್ರೀತಿ, ಬಾಂಧವ್ಯಕ್ಕೆ ಈ ಸಂಪ್ರದಾಯಗಳ ಕಟ್ಟುಪಾಡಿನ ಅಗತ್ಯವಿಲ್ಲ ಎಂಬುದು ನಮ್ಮಿಬ್ಬರ ನಂಬಿಕೆ. ಆಗಲೂ, ಈಗಲೂ ಆ ನಂಬಿಕೆಗೆ ಬದ್ಧರಾಗಿಯೇ ಬದುಕುತ್ತಿದ್ದೇವೆ. ಚೇತನ ಜೆ.ಕೆ.