ನಟಿ ಸುಮನ್ ನಗರ್ಕರ್ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿದ್ದಾರೆ. ಇಲ್ಲಿಯವರೆಗೆ ನಟಿಯಾಗಿ ಗುರುತಿಸಿಕೊಂಡಿದ್ದ ಸುಮನ್ ನಗರ್ಕರ್, ಈಗ ನಿರ್ಮಾಪಕಿಯ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. “ಸುಮನ್ ನಗರ್ಕರ್ ಪ್ರೊಡಕ್ಷನ್ಸ್’ ಹೆಸರಿನಲ್ಲಿ ಸುಮನ್ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ತಮ್ಮ ಸಂಸ್ಥೆಯ ಮೂಲಕ “ಬಬ್ರೂ’ ಎನ್ನುವ ಚೊಚ್ಚಲ ಕನ್ನಡ ಚಿತ್ರವನ್ನು ಸುಮನ್ ನಿರ್ಮಿಸಿದ್ದಾರೆ.
ಈಗಾಗಲೇ ಅಮೆರಿಕಾದಲ್ಲೇ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿರುವ “ಬಬ್ರೂ’ ಚಿತ್ರದ ಮೊದಲ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಿಸಿರುವ ಸುಜಯ್ ರಾಮಯ್ಯ “ಬಬ್ರೂ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು “ಬಬ್ರೂ’ ಚಿತ್ರಕ್ಕೆ ನಿರ್ಮಾಣಕ್ಕೆ ಸುಮನ್ ಅವರ ಜೊತೆಗೆ “ಯುಗ ಕ್ರಿಯೇಷನ್ಸ್’ ಸಂಸ್ಥೆ ಕೂಡ ಕೈ ಜೋಡಿಸಿದೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರ ಸಂಪೂರ್ಣವಾಗಿ ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ಸುಮನ್ ನಗರ್ಕರ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ಮಾಹಿ ಹಿರೇಮಠ, ರೇ ತೊಸ್ತಾಡೋ, ಸನ್ನಿ ಮೋಜ, ಪ್ರಕೃತಿ ಕಶ್ಯಪ್, ಅಶ್ವಿನಿ ಶರ್ಮ, ಭರತ್.ಕೆ.ಎಸ್, ಆದಿತ್ಯ ರಾವ್, ಮಿಕ್ಕಿ ವಾಹ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಇದಕ್ಕೆ ಸಂಗೀತ ನೀಡಿದ್ದಾರೆ. ಸದ್ಯ ಟೀಸರ್ ಮೂಲಕ ಹೊರಬಂದಿರುವ ಬಬ್ರೂ ವನ್ನು ಮುಂದಿನ ಏಪ್ರಿಲ್ ಅಥವಾ ಮೇ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದಾರೆ.
ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಕಾರು ಪ್ರಯಾಣ ಮಾಡುವುದರಿಂದ ಈ ಪ್ರಯಾಣದಲ್ಲಿ ಅಮೆರಿಕಾದ ಜೀವನ ಶೈಲಿ ಜೊತೆಗೆ ಗ್ರಾಂಡ್ ಕ್ಯಾನ್ಸನ್, ಡೆತ್ ವ್ಯಾಲಿ, ಜಿಯಾನ್, ಅವಿನ್ಯೂ ಆಫ್ ಜಿಯಾಂಟ್ಸ್ ಸೇರಿದಂತೆ ಸಾಕಷ್ಟು ರಮಣೀಯ ಸ್ಥಳಗಳನ್ನು “ಬಬ್ರೂ’ ಚಿತ್ರದ ದೃಶ್ಯಗಳಲ್ಲಿ ಸೆರೆಹಿಡಿಯಲಾಗಿದೆಯಂತೆ. ಸದ್ಯ ಬಿಡುಗಡೆಯಾಗಿರುವ “ಬಬ್ರೂ’ ಚಿತ್ರದ ಟೀಸರ್‌ಗೆ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.