Advertisement

ಸುಮಲತಾ ಸ್ವಾಭಿಮಾನದ ಅಸ್ತ್ರ ಪ್ರಯೋಗ

12:12 AM Feb 23, 2019 | Team Udayavani |

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯಕ್ಕೆ ಸುಮಲತಾ ಅಂಬರೀಷ್‌ ಪ್ರವೇಶ ಬಹುತೇಕ ಖಚಿತವಾಗುತ್ತಿದ್ದಂತೆ ಮಂಡ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ಹೊಸ ತಿರುವು ಪಡೆಯುತ್ತಿವೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿಯವರು ಜೆಡಿಎಸ್‌ ಅಭ್ಯರ್ಥಿಯಾಗುವುದಾರೆ, ಮಂಡ್ಯದಲ್ಲಿ ಸುಮಲತಾ ಪರವಾಗಿ ಸ್ವಾಭಿಮಾನದ ಅಸ್ತ್ರಪ್ರಯೋಗಿಸುವ ಮಾತುಗಳು ಕೇಳಿ ಬರುತ್ತಿವೆ. ಮೈತ್ರಿ ಪಕ್ಷಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸುಮಲತಾ ಅಂಬರೀಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದರೂ, ಪಕ್ಷೇತರರಾಗಿ ಸ್ಪರ್ಧಿಸುವಂತೆ ಅಂಬರೀಶ್‌ ಅಭಿಮಾನಿಗಳು ಹಾಗೂ ಪರೋಕ್ಷವಾಗಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸುಮಲತಾ ಕೂಡ ಅಭಿಮಾನಿಗಳ ಅಭಿಪ್ರಾಯವೇ ಅಂತಿಮ ಎಂದು ಹೇಳುವ ಮೂಲಕ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ನೀಡಿರುವುದು, ಈ ಬಾರಿಯ ಮಂಡ್ಯ ರಾಜಕೀಯದ ರಂಗೇರಿಸಿದೆ.

ಮಂಡ್ಯದಲ್ಲಿ ಎಲ್ಲರೂ ಜೆಡಿಎಸ್‌ನ ಶಾಸಕರಿದ್ದು, ಹಾಲಿ ಸಂಸದರಿದ್ದರೂ ಹಾಸನದಿಂದ ದೇವೇಗೌಡರ ಕುಟುಂಬದವರೇ ಬಂದು ಸ್ಪರ್ಧೆ ಮಾಡುವುದಾದರೆ, ಮಂಡ್ಯದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವವರು ಯಾರೂ ಇಲ್ಲವೇ ಎಂಬ ಅಭಿಪ್ರಾಯ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಸಾವುಕಾರ ಚೆನ್ನಯ್ಯ, ಎಚ್‌.ಕೆ.ವೀರಣ್ಣಗೌಡ, ಕೆ.ವಿ.ಶಂಕರೇಗೌಡ, ಎಸ್‌.ಎಂ.ಕೃಷ್ಣ , ಜಿ.ಮಾದೇಗೌಡ, ಅಂಬರೀಶ್‌, ಪುಟ್ಟಣ್ಣಯ್ಯ ಅವರಂತಹ ಘಟಾನುಘಟಿ ನಾಯಕರನ್ನು ನೀಡಿರುವ ಮಂಡ್ಯ ಜಿಲ್ಲೆಗೆ ಸ್ಥಳೀಯ ಅಭ್ಯರ್ಥಿ ಇಲ್ಲವೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ದೇವೇಗೌಡರ ಕುಟುಂಬದವರು ನಿಖೀಲ್‌ ಕುಮಾರ್‌ ಅವರನ್ನು ಪಕ್ಷದ ವತಿಯಿಂದ ಗೆಲ್ಲಿಸಬೇಕೆಂದರೆ, ಉತ್ತರ ಕರ್ನಾಟಕದ ಯಾವುದಾದರೂ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರಬೇಕು. ಮಂಡ್ಯದಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ದೇವೇಗೌಡರ ಕುಟುಂಬದಲ್ಲಿ ದೇವೇಗೌಡರು, ಎಚ್‌.ಡಿ.ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಶಾಸಕ, ಸಂಸದರಾಗಿದ್ದಾರೆ. ಜತೆಗೆ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಮಂಡ್ಯದಲ್ಲಿ ನಿಖೀಲ್‌ ಕುಮಾರ್‌, ಕೆ.ಆರ್‌.ಪೇಟೆಗೆ ಭವಾನಿ ರೇವಣ್ಣ, ಚಿಕ್ಕಬಳ್ಳಾಪುರಕ್ಕೆ ಬಾಲಕೃಷ್ಣ, ತುಮಕೂರಿಗೆ ರಮೇಶ್‌ ಗೌಡರನ್ನು ಸ್ಪರ್ಧೆಗಿಳಿಸುವ ಲೆಕ್ಕಾಚಾರ ಹೊಂದಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತವಾಗುತ್ತಿವೆ.

ಒಳ ಹೊಡೆತದ ಭಯ
ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಪಕ್ಷಗಳು ಸೀಟು ಹೊಂದಾಣಿಕೆ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿದರೆ, ಕಾಂಗ್ರೆಸ್‌ನ ಮುಖಂಡರು ಹಾಗೂ ಕಾರ್ಯಕರ್ತರು, ಮೈತ್ರಿ ಧರ್ಮದ ಅಭ್ಯರ್ಥಿಯನ್ನು ಬೆಂಬಲಿಸುವ ಬದಲು, ಸುಮಲತಾ ಅಂಬರೀಶ್‌ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ, ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ದೇವೇಗೌಡರು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next