Advertisement

ಕಾವೇರಿ ಗದ್ದಲ: ಡಿಎಂಕೆಗೆ ಬಿಸಿ ಮುಟ್ಟಿಸಿದ ಸಂಸದೆ ಸುಮಲತಾ

01:56 AM Aug 02, 2019 | Sriram |

ನವದೆಹಲಿ: ಸಂಸತ್ತಿನಲ್ಲಿ ಗುರುವಾರ ಕಾವೇರಿ ವಿವಾದ ಪ್ರತಿಧ್ವನಿಸಿತು. ಡಿಎಂಕೆಯ ಸಂಸದ ದಯಾನಿಧಿ ಮಾರನ್‌ ಅವರು, ಕರ್ನಾಟಕವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ಪದೇಪದೆ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದಾಗ, ಮಂಡ್ಯ ಸಂಸದೆ ಸುಮಲತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Advertisement

ನ್ಯಾಯಾಧಿಕರಣದ ತೀರ್ಪನ್ನು ಕರ್ನಾಟಕ ಎಂದಿಗೂ ಉಲ್ಲಂಘಿಸಿಲ್ಲ. ನಮ್ಮ ರಾಜ್ಯವು ನ್ಯಾಯಾಲಯದ ಆದೇಶವನ್ನು ಯಾವತ್ತೂ ಪಾಲಿಸುತ್ತಲೇ ಬಂದಿದೆ. ನಾವು ಶಾಂತಿಯನ್ನು ಬಯಸುವ ಜನ. ಹಾಗಾಗಿ, ನೆರೆ ರಾಜ್ಯದವರಿಗೆ ಕಷ್ಟ ಕೊಡಲು ಒಪ್ಪುವುದಿಲ್ಲ ಎಂದರು. ಕಾವೇರಿ ಕಣಿವೆಯಲ್ಲಿನ ಸದ್ಯದ ಪರಿಸ್ಥಿತಿ ವಿವರಿಸಿದ ಅವರು, ಕೃಷ್ಣರಾಜ ಸಾಗರದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 124 ಟಿಎಂಸಿ ನೀರು ಇತ್ತು. ಈ ವರ್ಷ, 85ರಿಂದ 86 ಟಿಎಂಸಿ ನೀರು ಇದೆ. ಕರ್ನಾಟಕದ 150 ತಾಲೂಕುಗಳಲ್ಲಿ ಕುಡಿಯಲೂ ನೀರಿಲ್ಲ. ಇಡೀ ರಾಜ್ಯವೇ ಬರಪೀಡಿತವಾಗಿದೆ. ಹೀಗಿರುವಾಗ ನಿಮ್ಮ ರಾಜ್ಯಕ್ಕೆ (ತಮಿಳುನಾಡಿಗೆ) ನೀರು ಬಡಲು ಹೇಗೆ ಸಾಧ್ಯ ಎಂದರು.

ವಿಪರ್ಯಾಸವೆಂದರೆ, ಸದನದಲ್ಲಿ ಹೀಗೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾಗ ಕರ್ನಾಟಕದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಆಗ, ಸುಮಲತಾ ಅವರ ಬೆಂಬಲಕ್ಕೆ ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಬಂದರು. ಕರ್ನಾಟಕ ನೀರು ಬಿಡದಿದ್ದರೆ ನಿಮಗೆ ಹೇಗೆ ನೀರು ಸಿಗುತ್ತಿತ್ತು ಎಂದು ಮರುಪ್ರಶ್ನೆ ಎಸೆಯುವ ಮೂಲಕ ಮಾರನ್‌ ಅವರನ್ನು ತಕ್ಕಮಟ್ಟಿಗೆ ತರಾಟೆಗೆ ತೆಗೆದುಕೊಂಡರು.


Advertisement

Udayavani is now on Telegram. Click here to join our channel and stay updated with the latest news.

Next