Advertisement

ರೆಬಲ್ ಮುಖಂಡರ ಜತೆ ಸುಮಲತಾ ಔತಣಕೂಟ

11:04 AM May 02, 2019 | Team Udayavani |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌ನ ಮಾಜಿ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

Advertisement

ಬೆಂಗಳೂರಿನ ಏಟ್ರಿಯಾ ಹೋಟೆಲ್ನಲ್ಲಿ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ನ ಪರಾಜಿತ ಶಾಸಕರೊಂ ದಿಗೆ ಭೋಜನ ಸೇವಿಸುವುದರೊಂದಿಗೆ ಎಲ್ಲರೊಂದಿಗೆ ಸಭೆ ನಡೆಸಿ ಔಪಚಾರಿಕವಾಗಿ ಮಾತುಕತೆ ನಡೆಸಿದರು. ಎಲ್ಲರ ಕುಶಲೋಪರಿ ವಿಚಾರಿಸುವುದರೊಂದಿಗೆ ಚುನಾವಣೆ ಫ‌ಲಿತಾಂಶದ ವಿಚಾರವೂ ಮಾತುಕತೆ ವೇಳೆ ಚರ್ಚೆಯಾಯಿತು ಎಂದು ಗೊತ್ತಾಗಿದೆ.

ಚುನಾವಣಾ ಪೂರ್ವದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರೊಂದಿಗೆ ಪ್ರಚಾರದ ಅಖಾಡದಲ್ಲೆಲ್ಲೂ ಬಹಿರಂಗವಾಗಿ ಗುರುತಿಸಿಕೊಳ್ಳದಿದ್ದ ಕಾಂಗ್ರೆಸ್‌ನ ಮಾಜಿ ಶಾಸಕರು ಚುನಾವಣೆ ನಂತರದಲ್ಲಿ ಒಬ್ಬೊಬ್ಬರಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಭಾನುವಾರವಷ್ಟೇ ಮಂಡ್ಯದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಸುಮಲತಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಪರಸ್ಪರ ಚರ್ಚೆಯನ್ನೂ ನಡೆಸಿದ್ದರು.

ಮಾಹಿತಿ ಸಂಗ್ರಹ: ಇದೀಗ ಕಾಂಗ್ರೆಸ್‌ನ ಪರಾಜಿತ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸುಮಲತಾ ಅವರೊಟ್ಟಿಗೆ ಕುಳಿತು ಮಾತುಕತೆ ನಡೆಸಿರುವುದು ಹೊಸದೊಂದು ರಾಜಕೀಯ ಬೆಳವಣಿಗೆಗೆ ಕಾರಣವಾಗಿರುವುದಲ್ಲದೆ, ಮಂಡ್ಯ ಚುನಾವಣಾ ಫ‌ಲಿತಾಂಶದ ಬಗೆಗಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಸಭೆಯಲ್ಲಿ ಮಂಡ್ಯ ಕ್ಷೇತ್ರದ ಚುನಾವಣಾ ಫ‌ಲಿತಾಂಶದ ವಿಚಾರವೂ ಪ್ರಸ್ತಾಪವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ವಾತಾವರಣ ಹೇಗಿದೆ. ದಾಖಲೆಯ ಮತದಾನ ನಡೆದಿರುವುದರಿಂದ ಯಾರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಬಗ್ಗೆಯೂ ಸುಮಲತಾ ಅವರು ಮಾಜಿ ಶಾಸಕರಿಂದ ಮಾಹಿತಿ ಸಂಗ್ರಹಿಸಿದರು ಎಂದು ಗೊತ್ತಾಗಿದೆ.

Advertisement

ಜನತೆ ತೀರ್ಪು ನೀಡಿದ್ದಾರೆ: ಚುನಾವಣಾ ಫ‌ಲಿತಾಂಶ ಬರುವವರೆಗೂ ಮೌನವಾಗಿರೋಣ. ಯಾರು ಏನೇ ಹೇಳಿದರೂ ಅತಿಯಾದ ವಿಶ್ವಾಸ ತೋರ್ಪಡಿಸದೆ, ಯಾರ ಬಗ್ಗೆಯೂ ಮಾತನಾಡದೆ ಬೆಳವಣಿಗೆಗಳನ್ನು ಗಮನಿಸುತ್ತಿರೋಣ. ಫ‌ಲಿತಾಂಶದ ಬಗ್ಗೆ ನಮಗಿಂತಲೂ ಹೆಚ್ಚಾಗಿ ಸಿಎಂ ಕುಮಾರಸ್ವಾಮಿ ಅವರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಗುಪ್ತಚರ ಇಲಾಖೆಯಿಂದ ಮಾತ್ರವಲ್ಲದೆ, ಜೆಡಿಎಸ್‌ ಶಾಸಕರಿಂದಲೂ ಚುನಾವಣೋತ್ತರದ ವಾತಾವರಣ, ಕ್ಷೇತ್ರವಾರು ಮತದಾನದಲ್ಲಿ ಜೆಡಿಎಸ್‌ಗೆ ಸಿಕ್ಕಿರಬಹುದಾದ ಮತಗಳೆಷ್ಟು ಎಂಬೆಲ್ಲಾ ಅಂಕಿ-ಅಂಶಗಳನ್ನು ಕಲೆ ಹಾಕುತ್ತಿದ್ದಾರೆ. ನಾವು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಜನರು ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಅದು ಬಹಿರಂಗವಾಗಬೇಕಷ್ಟೇ. ಅಲ್ಲಿಯವರೆಗೂ ತಾಳ್ಮೆಯಿಂದ ಇರೋಣ ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸುಮಲತಾರಿಗೆ ಮನವರಿಕೆ: ಇಡೀ ರಾಜ್ಯದಲ್ಲೇ ಮಂಡ್ಯದಲ್ಲೇ ಅತಿ ಹೆಚ್ಚು ಮತದಾನ ನಡೆದು ಹೊಸ ದಾಖಲೆ ಸೃಷ್ಟಿಸಿದೆ. ಮಂಡ್ಯದಲ್ಲಿ ಮತದಾನದ ಹಕ್ಕನ್ನು ಹೊಂದಿ ಹೊರ ಜಿಲ್ಲೆಗಳಲ್ಲಿದ್ದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದಾರೆ. ಮಹಿಳೆಯರ ಶೇಕಡಾವಾರು ಮತದಾನದ ಪ್ರಮಾಣವೂ ಹೆಚ್ಚಾಗಿದೆ. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದೆ. ಜನಸಾಮಾನ್ಯರ ವಲಯದಲ್ಲಿ ಸುಮಲತಾ ಪರವಾಗಿ ಮತ ಚಲಾವಣೆ ಮಾಡಿರುವ ಬಗ್ಗೆ ಹೆಚ್ಚಿನ ಜನರು ಬಹಿರಂಗವಾಗಿ ಹೇಳುತ್ತಿರುವುದನ್ನು ನೋಡಿದಾಗ ಫ‌ಲಿತಾಂಶ ನಮ್ಮ ಪರವಾಗಿರುವ ಬಗ್ಗೆ ಹೆಚ್ಚಿನ ಆಶಾಭಾವನೆ ವ್ಯಕ್ತವಾಗುತ್ತಿದೆ ಎಂದು ಸುಮಲತಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಚುನಾವಣಾ ನಂತರದಲ್ಲಿ ಕ್ಷೇತ್ರದಲ್ಲಿರುವ ವಾತಾವರಣದ ಬಗ್ಗೆ ಎಲ್ಲರಿಂದ ಮಾಹಿತಿ ಪಡೆದುಕೊಂಡ ಬಳಿಕ ಸುಮಲತಾ ಅವರು ಖುಷಿಯಾಗಿದ್ದರು. ಅಲ್ಲದೆ, ಚುನಾವಣೆಯಲ್ಲಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ಎಲ್ಲರೊಟ್ಟಿಗೆ ಕುಳಿತು ಭೋಜನ ಸೇವಿಸಿದರು.

ಧನಾತ್ಮಕ ಫ‌ಲಿತಾಂಶದ ಬಗ್ಗೆ ಸುಮಲತಾರಿಗೆ ಮಾಹಿತಿ:

ಮಂಡ್ಯ ಕ್ಷೇತ್ರದ ಫ‌ಲಿತಾಂಶದ ಬಗ್ಗೆ ನಿಮ್ಮ (ಸುಮಲತಾ) ಪರವಾಗಿ ಎಲ್ಲೆಡೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೆಡಿಎಸ್‌ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಈಗಾಗಲೇ ಗುಪ್ತಚರ ವರದಿಯಲ್ಲಿ ಜೆಡಿಎಸ್‌ಗೆ ಹಿನ್ನಡೆ ಇರುವುದಾಗಿ ತಿಳಿಸಿರುವುದು ಸಿಎಂ ನಿದ್ದೆಗೆಡಿಸಿದೆ. ಈ ಬಾರಿ ಧನಾತ್ಮಕ ಫ‌ಲಿತಾಂಶ ಹೊರಬರುವ ಸಾಧ್ಯತೆಗಳಿವೆ. ಅಂಬರೀಶ್‌ ಕುಟುಂಬವನ್ನು ಜಿಲ್ಲೆಯ ಜನರು ಕೈಬಿಡುವುದಿಲ್ಲವೆಂಬ ನಂಬಿಕೆ ಹೆಚ್ಚಿದೆ. ಒಂದೆರಡು ಕ್ಷೇತ್ರ ಹೊರತುಪಡಿಸಿದಂತೆ ಉಳಿದ ಕ್ಷೇತ್ರಗಳಲ್ಲಿ ಲೀಡ್‌ ಸಿಗುವ ಸಂಭವವಿದೆ. ಮಹಿಳೆಯರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪರ ಒಲವು ತೋರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಕ್ಷೇತ್ರದಲ್ಲಿ ಗೆಲುವಿನ ವಾತಾವರಣವಿರುವುದಾಗಿ ಸುಮಲತಾ ಅವರಿಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಇದ್ದವರು ಯಾರ್ಯಾರು?

ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಹೊರತುಪಡಿಸಿ ಉಳಿದ ಪರಾಜಿತ ಶಾಸಕರೆಲ್ಲರೂ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ರಮೇಶ್‌ ಬಂಡಿಸಿದ್ದೇಗೌಡ ಅವರು ದೇವರ ಪೂಜಾ ಕಾರ್ಯ ನಿಮಿತ್ತ ಮಂಗಳೂರಿಗೆ ತೆರಳಿದ್ದರೆ, ಮಧು ಜಿ.ಮಾದೇಗೌಡ ಅವರು ಅಸ್ಸಾಂಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಸಭೆಯಲ್ಲಿ ಮಾಜಿ ಸಚಿವರಾದ ಎನ್‌.ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಗಣಿಗ ರವಿಕುಮಾರ್‌, ಯುವ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ, ಚಿತ್ರನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಎಸ್‌.ಸಚ್ಚಿದಾನಂದ ಇತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next