Advertisement

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್

05:29 PM Jan 15, 2021 | Team Udayavani |

ಮಂಡ್ಯ: ದೇವರು, ಧರ್ಮ, ಸಂಪ್ರದಾಯದಂತಹ ಧಾರ್ಮಿಕ ನಂಬಿಕೆಗಳಿಗೆ ರಾಜಕೀಯ ಬಣ್ಣ ಬಳಿಯುವ ಕೆಲಸ ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

Advertisement

ಇಲ್ಲಿನ ನೆಹರು ನಗರ ಬಡಾವಣೆಯಲ್ಲಿರುವ ಕಮಲ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ದೇಣಿಗೆಯ ಚೆಕ್ ನೀಡಿ ಮಾತನಾಡಿದ ಅವರು, ಮಂದಿರ ಎಂಬುದು ಆರ್‌ಎಸ್‌ಎಸ್, ಬಿಜೆಪಿ ಅಥವಾ ಯಾವುದೋ ಪಕ್ಷ ಎಂದರೆ ಒಪ್ಪುವಂತಹುದ್ದಲ್ಲ. ನಮ್ಮ ದೇವರ ಮಂದಿರ ನಿರ್ಮಾಣ ಮಾಡುವುದರಲ್ಲಿ ಯಾವುದೇ ಪಕ್ಷ, ಜಾತಿ, ಮತ, ಪಂಥವನ್ನೂ ಮೀರಿದ್ದು, ಇದರಲ್ಲಿ ಪಕ್ಷ, ಸಂಘಟನೆಗಳನ್ನು ಸೇರಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಐತಿಹಾಸಿಕ ನಿಧಿ ಸಮರ್ಪಣ ಅಭಿಯಾನದಲ್ಲಿ ಭಾಗವಹಿಸುವುದೇ ಭಾಗ್ಯ. ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗವಹಿಸುವಂಥ ಅವಕಾಶ ಸಿಕ್ಕಿರುವುದು ನನಗೆ ವೈಯಕ್ತಿಕವಾಗಿ ಖುಷಿ ನೀಡಿದೆ. ಜಿಲ್ಲೆಯಲ್ಲಿ ಎರಡು ವಾರಗಳ ಅಭಿಯಾನ ಮಾಡಲಾಗುತ್ತಿದೆ. ಎಲ್ಲರೂ ಉದಾರವಾಗಿ ದೇಣಿಗೆ ನೀಡಲು, ಶ್ರೀರಾಮನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು, ದೇವರ ಆಶೀರ್ವಾದ ಪಡೆಯಲು ಇದೊಂದು ದಾರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  ರಾಮಮಂದಿರ ನಿರ್ಮಾಣ ದೇಶ ಒಗ್ಗೂಡಿಸುವ ಕಾರ್ಯ: ಸಚಿವ ಡಾ.ಕೆ.ಸುಧಾಕರ್

ಮಂದಿರ ನಿರ್ಮಾಣಕ್ಕೆ ಯಾರ ಒತ್ತಾಯವೂ ಇಲ್ಲ. ಅವರ ಇಷ್ಟ, ಭಕ್ತಿ, ನಂಬಿಕೆ, ಭಕ್ತಿಯಿಂದ ಕೊಡುವಂತಹುದು ಸಂತೋಷ ಕೊಡುತ್ತೆ. ನಂಬಿಕೆ ಇದ್ದರೆ ಜನತೆ ಖಂಡಿತಾ ದೇಣಿಗೆ ಕೊಡುತ್ತಾರೆ. ಮಂದಿರ ನಿರ್ಮಾಣದಲ್ಲಿ ಇಡೀ ಭಾರತೀಯರ ಕೊಡುಗೆ ಇರಬೇಕು ಎಂಬ ಉದ್ದೇಶದಿಂದ ರಾಮಮಂದಿರ ನ್ಯಾಸ ಟ್ರಸ್ಟ್ ದೇಶಾಧ್ಯಂತ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿದೆ. ಈ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವಂತೆ ನನಗೂ ತಿಳಿಸಿದ್ದರು. ಅವರ ಮನವಿ ಮೇರೆಗೆ ನಾನೂ ಸಹ ಸಂತೋಷದಿಂದ ನಿಧಿ ಸಮರ್ಪಣ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ಜನತೆಗೂ ದೇಣಿಗೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next