Advertisement

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆ; ಮೂಲ ಸೌಕರ್ಯ ಅಭಿವೃದ್ಧಿಗೆ 2.20 ಕೋಟಿ ರೂ. ಅನುದಾನ

01:21 PM Oct 18, 2022 | Team Udayavani |

ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರದಿಂದ 1.92 ಕೋಟಿ ರೂ. ಅನುದಾನ ಮಂಜೂರಾಗಿದೆ. ಅಲ್ಲದೆ ಸರಕಾರದ ವತಿಯಿಂದ ಆಸ್ಪತ್ರೆಗೆ ಮತ್ತೂಂದು ಆಮ್ಲಜನಕ ಘಟಕ ನಿರ್ಮಾಣವಾಗಲಿದ್ದು 28 ಲಕ್ಷ ರೂ. ಮಂಜೂರಾಗಿದೆ. ಒಟ್ಟು 2.20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ಉಪ ವಿಭಾಗದ ಮೂಲಕ ಸರಕಾರದಿಂದ ಎಸ್‌ ಸಿಎಸ್‌ಪಿ ಫ‌ಂಡ್‌ನಿಂದ ಮೂಲ ಸೌಕರ್ಯ ಅಭಿವೃದ್ಧಿಗೆ 1.92 ಕೋಟಿ ರೂ. ಅನುದಾನ ಬಂದಿದೆ. ಮುಂದಿನ ಮಾರ್ಚ್‌ಗೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಬೇಕಾಗಿದೆ. ಈ ಕುರಿತು ಆಗಬೇಕಾದ ಅಗತ್ಯಗಳ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ಪ್ರಭಾರ) ರಾಜೇಶ್‌ ರೈ, ಕಿರಿಯ ಎಂಜಿನಿಯರ್‌ ರಾಘ ವೇಂದ್ರ ಅವರು ಸುಳ್ಯಕ್ಕೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ, ಜಿ.ಪಂ. ಮಾಜಿ ಸದಸ್ಯ ಹರೀಶ್‌ ಕಂಜಿಪಿಲಿ, ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಚಾ ಸಮಿತಿ ಸದಸ್ಯ ಸುನಿಲ್‌ ಕೇರ್ಪಳ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ಅಭಿವೃದ್ಧಿ

1.92 ಕೋಟಿ ರೂ. ಮೊತ್ತದಲ್ಲಿ ಆಸ್ಪತ್ರೆಗೆ ಸುಸಜ್ಜಿತ ಶವಾಗಾರ, ಆಸ್ಪತ್ರೆಗೆ ಬರುವ ರಸ್ತೆಯ ಅಭಿವೃದ್ಧಿ, ಡಯಾಲಿಸಿಸ್‌ ಕೇಂದ್ರಕ್ಕೆ ಎಸಿ ಅಳವಡಿಕೆ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಾಗಿರುವ ಬಗ್ಗೆ ಸಲಹೆಗಳು ಕೇಳಿ ಬಂದಿದೆ.

ಅದರಂತೆ ಕ್ರಿಯಾಯೋಜನೆ ತಯಾ ರಾಗುವ ನಿರೀಕ್ಷೆ ಇದೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಕರುಣಾಕರ ಕೆ.ವಿ. ಅವರೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯ ಬೇಡಿಕೆಗಳ ಪಟ್ಟಿ ಪಡೆದು ಸಚಿವ ಅಂಗಾರ ಅವರಲ್ಲಿ ಮಾತುಕತೆ ನಡೆಸಿ ಕ್ರಿಯಾ ಯೋಜನೆ ಅಂತಿಮ ಮಾಡಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು ಎಂದು ಎಂಜಿನಿ ಯರ್‌ ರಾಜೇಶ್‌ ತಿಳಿಸಿದ್ದಾರೆ.

Advertisement

28 ಲಕ್ಷ ರೂ.ನಲ್ಲಿ ಆಮ್ಲಜನಕ ಘಟಕ

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಸರಕಾರದಿಂದ ಆಮ್ಲಜನಕ ಘಟಕ ಮಂಜೂರಾಗಿದೆ. ಅದರಂತೆ ಸುಳ್ಯ ತಾ| ಆಸ್ಪತ್ರೆಗೆ 28 ಲಕ್ಷ ರೂ. ಅನುದಾನ ಮಂಜೂ ರಾಗಿದೆ. ಆಮ್ಲಜನಕ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ ಅಂತಿಮಗೊಂಡಿಲ್ಲ. 6,000 ಲೀಟರ್‌ ಲಿಕ್ವಿಡ್‌ ಆಕ್ಸಿಜನ್‌ ಸಾಮರ್ಥ್ಯದ ಆಮ್ಲಜನಕ ಘಟಕ ನಿರ್ಮಾಣವಾಗಲಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ ವತಿಯಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಗೆ ಈ ಮೊದಲೇ ಆಮ್ಲಜನಕ ಘಟಕ ನಿರ್ಮಾಣಗೊಂಡಿದ್ದು ಕಾರ್ಯಾಚರಿಸುತ್ತಿದೆ.

ಇತರ ಮೂರು ಆಸ್ಪತ್ರೆಗಳಿಗೆ ಅನುದಾನ

ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದ ಇತರ ಮೂರು ಆಸ್ಪತ್ರೆಗೂ ಅನುದಾನ ಮಂಜೂರುಗೊಂಡಿದೆ. ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಸಂಪರ್ಕ ರಸ್ತೆ ಕಾಂಕ್ರೀಟ್‌, 45 ಲಕ್ಷ ರೂ.ನಲ್ಲಿ ವಸತಿ ಹಾಗೂ ಆಸ್ಪತ್ರೆ ನವೀಕರಣ ಕಾಮಗಾರಿ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಲಕ್ಷ ರೂ. ಅನುದಾನದಲ್ಲಿ ಆವರಣ ಗೋಡೆ ಹಾಗೂ ಇತರ ಕಾಮಗಾರಿ, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಲಕ್ಷ ರೂ. ಅನುದಾನದಲ್ಲಿ ಆವರಣ ಗೋಡೆ ಹಾಗೂ ಇತರ ಅಭಿವೃದ್ಧಿ ಕೆಲಸ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆಲ್ಲ ಮುಂದಿನ ಒಂದು ತಿಂಗಳಲ್ಲಿ ಇ-ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್‌ ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಮಾರ್ಚ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇರಿಸಲಾಗಿದೆ.

ಬೇಡಿಕೆ ಪಟ್ಟಿ ನೀಡಲಾಗಿದೆ: ಇತ್ತೀಚೆಗೆ ಎಂಜಿನಿಯರ್‌ ಅವರು ಬೇಡಿಕೆ ಪಟ್ಟಿ ಬಗ್ಗೆ ಕೇಳಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಂಪರ್ಕ ರಸ್ತೆ ಅಭಿವೃದ್ಧಿ, ಸುಸಜ್ಜಿತ ಶವಾಗಾರ ಕೊಠಡಿ, ತುರ್ತು ಘಟಕ ವಿಸ್ತರಣೆ ಮುಂತಾದ ಬೇಡಿಕೆ ಬಗ್ಗೆ ತಿಳಿಸಲಾಗಿದೆ. – ಡಾ| ಕರುಣಾಕರ, ಆಡಳಿತ ವೈದ್ಯಾಧಿಕಾರಿ, ಸುಳ್ಯ

ಸಚಿವರೊಂದಿಗೆ ಮಾತನಾಡಿ ಕಾಮಗಾರಿ: ಸುಳ್ಯ ಆಸ್ಪತ್ರೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಬೇಡಿಕೆಯನ್ನು ಪಡೆದುಕೊಳ್ಳಲಾಗಿದೆ. ಮುಂದೆ ಸಚಿವರೊಂದಿಗೆ ಮಾತನಾಡಿ ಅವರ ಬೇಡಿಕೆಗಳನ್ನೂ ಕ್ರಿಯಾಯೋಜನೆಯಲ್ಲಿ ಸೇರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. –ರಾಜೇಶ್‌ ರೈ, ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next