ಸುಳ್ಯ : ತುಡರ್ ತುಳುಕೂಟ ಮತ್ತು ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ಸುಳ್ಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ತಾ| ತುಳು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಧ. ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ
ನಡೆಯಿತು.
ತುಳು ಸಮ್ಮೇಳನದ ಪೋಷಕಾಧ್ಯಕ್ಷ, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕ ಕೆ. ಸೀತಾರಾಮ ರೈ ಮಾತನಾಡಿ, ಸಮ್ಮೇಳನದ ರೂಪು ರೇಷೆ ತಯಾರಿ ನಿಟ್ಟಿನಲ್ಲಿ ತುಳು ಭಾಷೆ, ಸಾಹಿತ್ಯ ಮೊದಲಾದ ಕ್ಷೇತ್ರದಲ್ಲಿ ದುಡಿದ ಅನುಭವಿಗಳ ಉಪಸ್ಥಿತಿಯಲ್ಲಿ ಸಭೆ ಆಯೋಜಿಸಬೇಕು. ಅದರಂತೆ ಮುನ್ನಡೆಯಬೇಕು. ಪ್ರತಿ ಗ್ರಾಮದಲ್ಲಿ ಮನೆ ಭೇಟಿ ಮಾಡಿ, ಅಚ್ಚುಕ ಟ್ಟಾದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಮಾದರಿ ಸಮ್ಮೇಳನ ಆಗಬೇಕು ಇದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಗೌರವ ಮಾರ್ಗದರ್ಶಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಬಾರಿಗೆ ಸಮ್ಮೇಳನ ಆಯೋಜಿಸಲು ಉದ್ದೇಶಿಸಿದ್ದು, ಇದರ ಯಶಸ್ಸಿಗೆ ಪ್ರತಿಯೊಬ್ಬರ ಶ್ರಮ ಅಗತ್ಯ. ಅನ್ನದಾನ ವ್ಯವಸ್ಥೆಗೆ ಸಂಬಂಧಿಸಿ ದೇವಸ್ಥಾನದ ವತಿಯಿಂದ ಸಹಕಾರ ನೀಡುವುದಾಗಿ ನುಡಿದರು.
ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಜೆ. ಕೊಯಿಕುಳಿ ಅವರು ಸಮ್ಮೇಳನಕ್ಕೆ ಅಗತ್ಯವಿರುವ ಆರ್ಥಿಕ ಕ್ರೋಢಿಕರಣದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಧ್ಯಕ್ಷ ಗೋಕುಲ್‌ದಾಸ್, ಎನ್.ಜಿ. ಪ್ರಭಾಕರ ರೈ, ಕೆ.ಟಿ. ವಿಶ್ವನಾಥ, ಬಾಪೂ ಸಾಹೇಬ್, ಪ್ರಸಾದ್ ಎಸ್., ಸಂತೋಷ್ ರೈ, ರಘುನಾಥ ಜಟ್ಟಿಪಳ್ಳ, ಚಿದಾನಂದ ವಿದ್ಯಾನಗರ, ರಾಜು ಕೆ., ರವಿಚಂದ್ರ ಕೋಡಿಯಾಲಬೈಲು, ದೊಡ್ಡಣ್ಣ ಬರಮೇಲು, ಕೇಶವ ಜಿ.ಪಿ., ಕೇಶವ ಹೊಸೊಳಿಕೆ, ಚಂದ್ರಾವತಿ ರೈ ಪಾಲ್ತಾಡಿ, ಶಶಿಕಲಾ ಹರಪ್ರಸಾದ್, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು. ಕೋಶಾಧಿಕಾರಿ ಜೆ.ಕೆ. ರೈ ನಿರೂಪಿಸಿದರು.