ಸುಳ್ಯ: ಇಲ್ಲಿನ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಶ್ರೀ ಶಾರದಾ ಪದವಿಪೂರ್ವ ಮಹಿಳಾ ಕಾಲೇಜಿನ ರಜತ ಮಹೋತ್ಸವ ಮತ್ತು ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.23ರಂದು ದ.ಕ. ಗೌಡ ವಿದ್ಯಾ ಸಂಘದ ಜಟ್ಟಿಪಳ್ಳದಲ್ಲಿರುವ ನಿವೇಶನದಲ್ಲಿ ನಡೆಯಲಿದೆ . ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಜಗದ್ಗುರು ಶ್ರೀಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ತಿಳಿಸಿದ್ದಾರೆ.
ಬೆಳಗ್ಗೆ ಸಮಾರಂಭದ ಉದ್ಘಾಟನೆ ನಡೆಯಲಿದ್ದು ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ನೆನಪಿನ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಸ್. ಅಂಗಾರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಕೆ.ವಿ., ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಶಾರದಾ ಪಿ.ಯು. ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಂಶುಪಾಲರಾದ ಪಿ. ಕಮಲಾ ಬಾಲಚಂದ್ರ, ಪ್ರೇಮ ಎಂ., ಪ್ರಸ್ತುತ ಪ್ರಾಂಶುಪಾಲೆ ದಯಾಮಣಿ ಕೆ. ಹಾಗೂ ಉಪನ್ಯಾಸಕರು ಮತ್ತು ಸಿಬಂದಿಗಳಿಗೆ ಸಮ್ಮಾನ ನಡೆಯಲಿದೆ. ಬಳಿಕ ಸಂಸ್ಥೆಗಳ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಸಮಾರೋಪ
ಅಪರಾಹ್ನ 2 ಗಂಟೆಗೆ ಆದಿ ಚುಂಚನಗಿರಿಶ್ರೀಗಳವರಿಂದ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿದೆ. ಕಾವೂರು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತರಿರುವರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಂಗಳೂರು ಯೇನೆಪೊಯ ವಿ.ವಿ.ಯ ಕುಲಪತಿ ವೈ. ಅಬ್ದುಲ್ ಕುಂಞಿ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ದಿ| ಎಂ.ಆರ್. ಬಾಲಕೃಷ್ಣ ಗೌಡ ದತ್ತಿ ನಿಧಿ ಸ್ಥಾಪನಾ ಕಾರ್ಯಕ್ರಮ ನಡೆಯಲಿದೆ.
ಸಮ್ಮಾನ ಕಾರ್ಯಕ್ರಮ
ದ.ಕ. ಗೌಡ ವಿದ್ಯಾ ಸಂಘದ ಮಾಜಿ ಅಧ್ಯಕ್ಷ ಪಡ್ಡಂಬೈಲು ವೆಂಕಟ್ರಮಣ ಗೌಡ ಮತ್ತು ಸಂಘದ ಹಿರಿಯ ನಿರ್ದೇಶಕ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಅವರನ್ನು ಸಮ್ಮಾನಿಸಲಾಗುವುದು.