ಸುಳ್ಯ : ಪತ್ರಕರ್ತರು ಸಮಾಜದ ಆಗು-ಹೋಗುಗಳನ್ನು ಗಮನಿಸಿ, ವರದಿ ರೂಪದಲ್ಲಿ ಬಿತ್ತರಿಸುವ ಮೂಲಕ ಸಾಮಾಜಿಕ ನ್ಯಾಯ, ಸಮಾನತೆಗೆ ಸ್ಪಂದಿಸುತ್ತಾರೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು. ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳವಾರ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಮ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುದ್ರಣ ಅಥವಾ ದೃಶ್ಯ ಮಾಧ್ಯಮಗಳಲ್ಲಿ ವ್ಯಕ್ತಿ ಪರ ಸುದ್ದಿ ಬಂದಾಗ ಸಂಭ್ರಮಿಸುವ, ವಿರುದ್ಧ ಬಂದಾಗ ಸಿಟ್ಟಾಗುವ ಪ್ರವೃತ್ತಿ ಇದೆ. ವಾಸ್ತವವಾಗಿ ಪತ್ರಕರ್ತರಾದವರು ಪರ-ವಿರೋಧದ ಕಲ್ಪನೆ ಇಲ್ಲದೆ, ಸತ್ಯ, ನ್ಯಾಯದ ಪರಿಕಲ್ಪನೆಯಲ್ಲಿ ಧ್ವನಿಯಾಗಿ ಸಮಾಜದ ಒಳಿತಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ನುಡಿದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಉಪನ್ಯಾಸ ನೀಡಿ, ಸುದ್ದಿಯ ಬೆನ್ನತ್ತಿ, ಸತ್ಯವನ್ನು ಸಮಾಜದ ಮುಂದಿಟ್ಟು ನ್ಯಾಯ ಒದಗಿಸಲು ಪತ್ರಕರ್ತರು ಪ್ರಯತ್ನಿಸುತ್ತಾರೆ ಎಂದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಖಾದರ್ ಶಾ, ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಪತ್ರಕರ್ತರ ಸಂಘದ ಗೌರವಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕೋಶಾಧಿಕಾರಿ ವಿಶ್ವನಾಥ ಮೋಟುಕಾನ ಉಪಸ್ಥಿತರಿದ್ದರು.
ತಾ|ಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೃಷ್ಣಪ್ರಸಾದ್ ಕೋಲ್ಚಾರು ಬಹುಮಾನಿತರ ಪಟ್ಟಿ ವಾಚಿಸಿದರು. ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ಪ್ರಸ್ತಾವನೆಗೈದರು. ಪತ್ರಕರ್ತ ಜಯಪ್ರಕಾಶ್ ಕುಕ್ಕೇಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ನಿರೂಪಿಸಿದರು.
ಸಮ್ಮಾನ ಸಮಾರಂಭ
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಸಮ್ಮಾನಿಸಲಾಯಿತು. 28 ವರ್ಷ ಪತ್ರಕರ್ತರಾಗಿ ಹಾಗೂ 43 ವರ್ಷಗಳಿಂದ ಸಾಂಸ್ಕೃತಿಕ, ಸಾಹಿತ್ಯ ರಂಗದಲ್ಲಿ ಸಲ್ಲಿಸಿದ ಗಂಗಾಧರ ಮಟ್ಟಿ ಅವರ ಸೇವೆಯನ್ನು ಅತಿಥಿಗಳು ಶ್ಲಾಘಿಸಿದರು. ಚಿತ್ರಾ ಮಟ್ಟಿ ಅವರನ್ನೂ ಗೌರವಿಸಲಾಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಅಭಿನಂದನ ನುಡಿಗಳನ್ನಾಡಿದರು.