Advertisement

ಗರಿಷ್ಠ ಫ‌ಲಿತಾಂಶ ಬರುವ ಶಾಲೆಯಲ್ಲಿ ಶೆಡ್‌ನ‌ಲ್ಲೆ ಶಿಕ್ಷಣ!

05:04 AM Mar 07, 2019 | Team Udayavani |

ಸುಳ್ಯ : ತಾಲೂಕಿನಲ್ಲೇ ಗರಿಷ್ಠ ಫಲಿತಾಂಶ ದಾಖಲಿಸುವ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 10 ತರಗತಿ ಕೊಠಡಿಗಳಿಗೆ ತಾತ್ಕಾಲಿಕ ಶೆಡ್‌ನಿಂದ ಮುಕ್ತಿ ಸಿಕ್ಕಿಲ್ಲ. ಎಸೆಸೆಲ್ಸಿ ಮಕ್ಕಳು ಶೆಡ್‌ನ‌ಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ.

Advertisement

ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ವಿದ್ಯಾಸಂಸ್ಥೆ ಸುಳ್ಯ ನಗರದಿಂದ 2 ಕಿ.ಮೀ. ದೂರದ ಕೊಡಿಯಾಲಬೈಲಿನಲ್ಲಿ ಇದೆ. ಸಂಪರ್ಕ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಕಟ್ಟಡದ ವ್ಯವಸ್ಥೆ ಒದಗಿಸಿದರೆ ಈ ಸಂಸ್ಥೆ ಮಂಗಳೂರು ವಿ.ವಿ. ಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಅವಕಾಶವಿದೆ.

ಮೂರು ಜಿಲ್ಲೆಗಳ ವಿದ್ಯಾರ್ಥಿಗಳು ಸರಕಾರಿ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎನ್ನುವ ಆಪಾದನೆಗೆ ತದ್ವಿರುದ್ಧ ಎನ್ನುವಂತೆ ಇಲ್ಲಿನ ಚಿತ್ರಣವಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಬಿಎ, ಬಿಬಿಎ, ಬಿಕಾಂ, ಬಿಎಸ್ಸಿ ತರಗತಿಗಳಿವೆ. ಕೆಲವೊಂದರಲ್ಲಿ ಎ, ಬಿ ಸೆಕ್ಷನ್‌ಗಳಿವೆ. ಪ್ರತಿ ತರಗತಿಯಲ್ಲಿ 60ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಪ್ರಸ್ತುತ 722 ವಿದ್ಯಾರ್ಥಿಗಳಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಈ ಸಂಸ್ಥೆ ಮಂಗಳೂರು ವಿ.ವಿ. ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. 

ಹನ್ನೊಂದರ ಹೊತ್ತು
ಸುಳ್ಯಕ್ಕೆ 2007ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿತ್ತು. ಶಾಸಕ ಎಸ್‌.ಅಂಗಾರ ಅವರು ಅಂದಿನ ಉನ್ನತ ಶಿಕ್ಷಣ ಸಚಿವ ಡಿ.ಎಚ್‌. ಶಂಕರಮೂರ್ತಿ ಅವರ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಿದ್ದರು. ಪ್ರಥಮವಾಗಿ ಸುಳ್ಯದ ಜ್ಯೋತಿ ವೃತ್ತದ ಬಳಿಯ ಅಮೃತ ಭವನದಲ್ಲಿ ಕಾಲೇಜು ಆರಂಭಗೊಂಡಿತು. 6 ವರ್ಷಗಳ ಅನಂತರ 2013ರಲ್ಲಿ ಕೊಡಿಯಾಲಬೈಲಿನ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡಿತ್ತು.

ಕೊಠಡಿ, ರಸ್ತೆ ಸಮಸ್ಯೆ
ಆರಂಭದಲ್ಲಿ 5 ಕೊಠಡಿಗಳಿದ್ದ ಕಾರಣ, ತಾತ್ಕಾಲಿಕ ತಗಡು ಶೆಡ್‌ ನಿರ್ಮಿಸಿ ಉಳಿದ ತರಗತಿಗಳನ್ನು ನಡೆಸಲಾಯಿತು. 

Advertisement

ಬಳಿಕ ವಿವಿಧ ಹಂತದಲ್ಲಿ ಅಭಿವೃದ್ಧಿಗೊಂಡು ಈಗ 15ಕ್ಕೂ ಅಧಿಕ ಕೊಠಡಿಗಳು ಇವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅದು ಸಾಲುತ್ತಿಲ್ಲ. ಇನ್ನೂ ಕೂಡ 12 ಕೊಠಡಿಗಳ ಆವಶ್ಯಕತೆ ಇದೆ. ಹಾಗಾಗಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಶೆಡ್‌ನ‌ಲ್ಲಿಯೇ ಪಾಠ ಹೇಳುವ ಸ್ಥಿತಿ ಶಿಕ್ಷಕರದ್ದು. ಪಾಠ ಕೇಳುವ ಸ್ಥಿತಿ ಮಕ್ಕಳದ್ದು ಆಗಿದೆ. ಮಳೆಗಾಲದಲ್ಲಿ ಇಲ್ಲಿನ ಗೋಳು ಒಂದೆರಡಲ್ಲ. ಇದಕ್ಕಾಗಿ ಶಾಶ್ವತ ಕಟ್ಟಡ ಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆ. ಜತೆಗೆ ನಗರದಿಂದ ಕಾಲೇಜಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟಿದೆ. ಬಸ್‌ ಓಡಾಟವು ಕಡಿಮೆಯಿದ್ದು, ಹೆಚ್ಚುವರಿ ಬಸ್‌ ಓಡಾಟಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಕಚೇರಿ ಸಿಬಂದಿ ಇಲ್ಲ
ಕಾಲೇಜಿನಲ್ಲಿ ಪ್ರಾಂಶುಪಾಲ ಸಹಿತ 20 ಮಂಜೂರಾತಿ ಉಪನ್ಯಾಸಕ ಹುದ್ದೆಗಳಿವೆ. ಅದರಲ್ಲಿ ನಾಲ್ಕು ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. 33 ಅತಿಥಿ ಉಪನ್ಯಾಸಕರು ಇದ್ದಾರೆ. ಕನ್ನಡ ವಿಭಾಗದಲ್ಲಿ 3 ಮಂಜೂರಾತಿ ಹುದ್ದೆಯ ಪೈಕಿ ಇಬ್ಬರು ಕರ್ತವ್ಯದಲ್ಲಿದ್ದರು. ತಿಂಗಳ ಹಿಂದೆ ಒಬ್ಬರು ಕೊಪ್ಪಳ ಜಿಲ್ಲೆಯ ಹಿಟ್ನಾಳ ಕಾಲೇಜಿಗೆ ನಿಯೋಜನೆಗೊಂಡಿದ್ದಾರೆ. ಇನ್ನೊಬ್ಬರು ಹೆರಿಗೆ ರಜೆಯಲ್ಲಿ ತೆರಳಿದ್ದಾರೆ. ಕನ್ನಡ ಪಾಠಕ್ಕೆ ಅತಿಥಿ ಉಪನ್ಯಾಸಕರನ್ನೇ ಆಶ್ರಯಿಸಬೇಕಿದೆ. ಇಲ್ಲಿ ಗ್ರಂಥಪಾಲಕರು ಇಲ್ಲ.

ಕಚೇರಿ ಸಿಬಂದಿಯೂ ಇಲ್ಲ. ಕಚೇರಿ ಸೂಪರಿಂಟೆಂಡೆಂಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕ ಹುದ್ದೆ ಖಾಲಿ ಇವೆ. ಕಚೇರಿ ನಿರ್ವಹಣೆ ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಮೂಲಕ ಇಬ್ಬರನ್ನು ನಿಯೋಜಿಸಲಾಗಿದೆ.

ಕಾಡಿದೆ ನೀರಿನ ಸಮಸ್ಯೆ
ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ಲಭ್ಯ ಇರುವ ಒಂದು ಕೊಳವೆಬಾವಿಯಲ್ಲಿ 10 ನಿಮಿಷ ಮಾತ್ರ ನೀರು ಸಿಗುತ್ತಿದೆ. 300 ಅಡಿ ಆಳ ಇರುವ ಈ ಕೊಳವೆ ಬಾವಿಯನ್ನು ಇನ್ನಷ್ಟು ಆಳಕ್ಕೆ ಕೊರೆಸಬೇಕು ಅಥವಾ ಹೊಸ ಕೊಳವೆಬಾವಿ ಕೊರೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇಲ್ಲಿ ಬಹುವಾಗಿ ಕಾಡಬಹುದು. 

2.65 ಕೋಟಿ ರೂ. ಮಂಜೂರು
ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 2.65 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ ಕೆಲವು ಕೊಠಡಿಗಳನ್ನು ನಿರ್ಮಿಸಬಹುದು. ನೀರಿನ ಸಮಸ್ಯೆಗೆ ಸಂಬಂಧಿಸಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಜಿ.ಪಂ. ಎಂಜಿನಿಯರ್‌ ಅವರಿಗೆ ತತ್‌ಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.
– ಡಾ| ಅಚ್ಯುತ ಪೂಜಾರಿ
ಪ್ರಾಂಶುಪಾಲರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next