ಹನೂರು: ತಾಲೂಕಿನ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಮುಖ್ಯಮಂತ್ರಿ, ಮಂತ್ರಿಗಳು ಭರವಸೆ ನೀಡಿ 2 ವರ್ಷ ಕಳೆದರೂ ಇದುಕಾರ್ಯರೂಪಕ್ಕೆ ಬಂದಿಲ್ಲ. ಸುಳ್ವಾಡಿ ಬಗ್ಗೆ 2018ರ ಡಿ.14ರವರೆಗೂ ಹೆಚ್ಚಿನ ಜನರಿಗೆ ತಿಳಿದಿರಲೇ ಇಲ್ಲ. ಆದರೆ,ಕಳೆದ 2 ವರ್ಷದ ಹಿಂದೆ ಜರುಗಿದ ವಿಷಮಿಶ್ರಿತ ಪ್ರಸಾದ ಪ್ರಕರಣದಿಂದ ಇಡೀ ರಾಜ್ಯದ ಗಮನ ಸೆಳೆದಿತ್ತು.
ಈ ದುರಂತದಿಂದ 17ಮಂದಿ ಮೃತಪಟ್ಟು, 120ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಈ ವೇಳೆ ಪ್ರಸಾದ ಸೇವಿಸಿ ನರಳಾಡುತ್ತಿದ್ದ ಭಕ್ತರನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದ ರೋಗಿಗಳನ್ನು ಚಿಕಿತ್ಸೆಗಾಗಿ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರಗೆ ರವಾನಿಸಲಾಗಿತ್ತು.
ಈ ಸಂದರ್ಭದಲ್ಲಿ ಸುಳ್ವಾಡಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ದೊರೆತಿದ್ದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಅಲ್ಲದೇಈಭಾಗದ ಜನರು ಆರೋಗ್ಯ ಸಮಸ್ಯೆ ಎದುರಾದಾಗ 50 ಕಿ.ಮೀ. ದೂರದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ, 65 ಕಿ.ಮೀ. ದೂರದ ಕೊಳ್ಳೇಗಾಲವನ್ನುಅವಲಂಬಿಸಬೇಕಿದೆ. ಇದರಿಂದಾಗಿ ಸುಳ್ವಾಡಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದರು.
ಸಿಬ್ಬಂದಿ ಕೊರತೆ: ಸುಳ್ವಾಡಿ ಆರೋಗ್ಯ ಕೇಂದ್ರದಲ್ಲಿ 12 ಮಂಜೂರಾದ ಹುಗಳಿದ್ದು, 2 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 10 ಹುದ್ದೆಗಳು ಖಾಲಿಯಿವೆ. ಇದರ ಜೊತೆಗೆ 6 ಸಿಬ್ಬಂದಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್‌ಗಳು, ಪ್ರಯೋಗಾಲಯ ತಂತ್ರಜ್ಞರು, ಆರೋಗ್ಯ ಸಹಾಯಕರು ಸೇರಿದಂತೆ ಬಹುತೇಕ ಸಿಬ್ಬಂದಿ ಹೊರ ಗುತ್ತಿಗೆ ನೌಕರರಾಗಿದ್ದಾರೆ.
ಆಸ್ಪತ್ರೆಯಲ್ಲಿ 6 ಹಾಸಿಗೆಗಳಿದ್ದು, ಈ ಭಾಗದ ಜನಸಂಖ್ಯೆಗೆ ಅನುಗುಣವಾಗಿ ನೋಡಿದಲ್ಲಿ 6 ಬೆಡ್ ಗಳು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಬೆಡ್‌ಗಳಿಗೆ ವ್ಯವಸ್ಥೆ ಕಲ್ಪಿಸಬೇಕಿದೆ. ವಿಷಪ್ರಸಾದ ದುರಂತ ಹಿನ್ನೆಲೆ 2018ರ ಡಿ.25ರಂದು ಮೃತಪಟ್ಟವರ ಕುಟುಂಬÓರು§ ಮತ್ತು ಬಾಧಿತರಿಗೆ ಸಾಂತ್ವನ ತಿಳಿಸಲು ಬಿದರಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಇಲ್ಲಿನ ಆರೋಗ್ಯ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕೂಡಲೇ ಸುಳ್ವಾಡಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದರು. ಆದರೆ, ಇದು ಹುಸಿಯಾಗಿದೆ.
ದುರಂತ ಬಳಿಕ 2019ರ ಸೆಪ್ಟೆಂಬರ್ 25ರಂದು ಅಂದು ಆರೋಗ್ಯ ಮಂತ್ರಿಗಳಾಗಿದ್ದ ಶ್ರೀರಾಮುಲು ಅವರು ಹನೂರು ಕ್ಷೇತ್ರದ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸುಳ್ವಾಡಿ ಆರೋಗ್ಯ ಕೇಂದ್ರದ ಮೇಲ್ದರ್ಜೆಗೇರಿಸುವ ಆಶ್ವಾಸನೆ ನೀಡಿದ್ದರು . ಆದರೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು,ಅಧಿಕಾರಿಗಳು ಇತ್ತ ಗಮನಹರಿಸಿ ಬಹುತೇಕ ಗುಡ್ಡಗಾಡು ಪ್ರದೇಶ, ಕಾಡಂಚಿನ ಗ್ರಾಮಗಳಿಂದ ಆವೃತ್ತವಾಗಿರುವ ಹನೂರು ತಾಲೂಕಿನ ಜನತೆಗೆಸಮರ್ಪಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.
ಸುಳ್ವಾಡಿ ಆರೋಗ್ಯ ಕೇಂದ್ರದ ಸಮಸ್ಯೆಗಳ ಸಂಬಂಧ ನನ್ನ ಗಮನಕ್ಕೆ ಬಂದಿಲ್ಲ. ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಈಗಾಗಲೇ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಈ ಬಗ್ಗೆಕೂಡಲೇ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
–ಡಾ|ಕೆ.ಸುಧಾಕರ್, ಆರೋಗ್ಯ ಸಚಿವ
–ವಿನೋದ್‌ಎನ್.ಗೌಡ