ನವದೆಹಲಿ: ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ಪ್ರತಿಯೊಬ್ಬರ ಗಮನ ಸೆಳೆಯುತ್ತಿದ್ದ 21 ಕೋಟಿ ರೂಪಾಯಿ ಮೌಲ್ಯದ ಸುಲ್ತಾನ್ ಎಂಬ ದೈತ್ಯ ಕೋಣ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹರ್ಯಾಣದ ಕೈತಾಲ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಖಾದಿ ಮಳಿಗೆಯಲ್ಲಿ ಪತ್ನಿಗಾಗಿ ಸೀರೆ ಖರೀದಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಈ ಹಿಂದೆ ರಾಜಸ್ಥಾನದ ಪುಷ್ಕರ್ ನಲ್ಲಿ ನಡೆದಿದ್ದ ಪಶು ಮೇಳದಲ್ಲಿ ಸುಲ್ತಾನ್ (ಕೋಣ) ಗೆ ಬಂದ ಬಿಡ್ ನಲ್ಲಿ 21 ಕೋಟಿ ರೂಪಾಯಿಗೆ ಖರೀದಿಸಲು ಮುಂದಾಗಿದ್ದರೂ ಕೂಡಾ, ಮಾಲೀಕ ನರೇಶ್ ಬೇನಿವಾಲ್ ಅದನ್ನು ನಿರಾಕರಿಸಿ, ಸುಲ್ತಾನ್ ನನ್ನು ತನ್ನ ಮಗುವಿನಂತೆ ಸಾಕುವುದಾಗಿ ತಿಳಿಸಿದ್ದರು.
ಅಜಾನುಬಾಹು ಗಾತ್ರದ ಕೋಣ ಸುಲ್ತಾನ್ ಆಕಸ್ಮಿಕ ನಿಧನದಿಂದ ಮಾಲೀಕ ನರೇಶ್ ಬೇನಿವಾಲ್ ತೀವ್ರ ದುಃಖಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ. ಇಡೀ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ಜನಪ್ರಿಯಗೊಂಡಿದ್ದ ಸುಲ್ತಾನ್ ಇನ್ನು ನೆನಪು ಮಾತ್ರ ಎಂದು ನರೇಶ್ ತಿಳಿಸಿದ್ದಾರೆ.
ಸುಲ್ತಾನ್ ಸಾಮಾನ್ಯ ಕೋಣವಲ್ಲ, ಬರೋಬ್ಬರಿ 1,200 ಕೆಜಿ ತೂಕ ಹೊಂದಿತ್ತು. ಯಾವುದೇ ಮೇಳವಾಗಲಿ ಅಥವಾ ಹೊರ ಪ್ರದೇಶಕ್ಕೆ ಸುಲ್ತಾನ್ ಆಗಮಿಸಿದರೆ ರಾಜಕಾರಣಿಗಳು, ಸಿನಿಮಾ ನಟರು ಆಗಮಿಸಿದಾಗ ಸೇರುವುದಕ್ಕಿಂತಲೂ ಹೆಚ್ಚು ಜನರು ಸೇರುತ್ತಿದ್ದರು. ನುಣುಪಾದ ಚರ್ಮ, ಹೊಳೆಯುವ ದೇಹ ಹೊಂದಿದ್ದ ಸುಲ್ತಾನ್ 12 ಕೆಜಿ ಒಣ ಹುಲ್ಲು, 10 ಕೆಜಿ ಸೊಪ್ಪು, 20 ಕೆಜಿ ಕ್ಯಾರಟ್ ಸೇವಿಸುತ್ತಿತ್ತು.
ಪ್ರತಿ ವರ್ಷ ಸುಲ್ತಾನ್ ಕೋಣದ ವೀರ್ಯಕ್ಕೆ ವಿಶೇಷ ಬೇಡಿಕೆ ಇದ್ದಿದ್ದು, ಮಾಲೀಕ ನರೇಶ್ ಕೋಣದ ವೀರ್ಯದಿಂದ 90 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದರು. ಸುಲ್ತಾನ್ ಮುರ್ರಾ ತಳಿಗೆ ಸೇರಿದ್ದ ಕೋಣವಾಗಿದ್ದರಿಂದ ಅದರ ವೀರ್ಯಕ್ಕೆ ಬೇಡಿಕೆ ಇದ್ದಿರುವುದಾಗಿ ವರದಿ ತಿಳಿಸಿದೆ.