Advertisement

ಗೆಲ್ಲಬೇಕಾಗಿದ್ದ ಪಂದ್ಯದಲ್ಲೇ ಡ್ರಾ ಮಾಡಿಕೊಂಡ ಭಾರತ

06:20 AM Mar 05, 2018 | Team Udayavani |

ಇಪೋ (ಮಲೇಶ್ಯ): ಸುಲ್ತಾನ್‌ ಅಜ್ಲಾನ್‌ ಷಾ ಹಾಕಿ ಪಂದ್ಯಾವಳಿಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಶನಿವಾರ ಆರ್ಜೆಂಟೀನಾ ವಿರುದ್ಧ ಎಡವಿದ ಸರ್ದಾರ್‌ ಸಿಂಗ್‌ ಪಡೆ ರವಿವಾರದ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಲಭಿಸಿದ ಅವಕಾಶಗಳನ್ನೆಲ್ಲ ಕೈಚೆಲ್ಲಿ 1-1 ಡ್ರಾಗೆ ಸಮಾಧಾನಪಟ್ಟಿದೆ.

Advertisement

ಯುವ ಆಟಗಾರ ಶೈಲೇಂದ್ರ ಲಾಕ್ರಾ ಪಂದ್ಯದ 14ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದು ಭಾರತಕ್ಕೆ ಮುನ್ನಡೆ ಒದಗಿಸಿದರು. ಇದು ಶೈಲೇಂದ್ರ ಬಾರಿಸಿದ ಮೊದಲ ಅಂತಾರಾಷ್ಟ್ರೀಯ ಗೋಲೆಂಬುದು ವಿಶೇಷ. 53ನೇ ನಿಮಿಷದ ತನಕ ಭಾರತ ಈ ಮುನ್ನಡೆಯನ್ನು ಉಳಿಸಿಕೊಂಡಿತ್ತು. ಆದರೆ ಈ ಅವಧಿಯಲ್ಲಿ ಲಭಿಸಿದ ಕನಿಷ್ಠ 9 ಪೆನಾಲ್ಟಿ ಕಾರ್ನರ್‌ ಹಾಗೂ ಕೆಲವು ಫೀಲ್ಡ್‌ ಗೋಲ್‌ ಅವಕಾಶಗಳನ್ನು ವ್ಯರ್ಥಗೊಳಿಸಿತು. 

ಇದರಿಂದ ಭಾರತದ ಗೈಲುವು ಕೈಜಾರಿತು.53ನೇ ನಿಮಿಷದಲ್ಲಿ ಇಂಗ್ಲೆಂಡಿನ ಮಾರ್ಕ್‌ ಗ್ಲೆಗ್‌ಹೋಮ್‌ ಪೆನಾಲ್ಟಿ ಸ್ಟ್ರೋಕ್‌ ಮೂಲಕವೇ ಗೋಲೊಂದನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಈ ಫ‌ಲಿತಾಂಶದಿಂದ ಭಾರತ 6 ತಂಡಗಳ ಈ ಪಂದ್ಯಾವಳಿಯಲ್ಲಿ 4ನೇ ಸ್ಥಾನಕ್ಕೆ ಇಳಿದಿದೆ. ಮಂಗಳವಾರ ವಿಶ್ವದ ಅಗ್ರಮಾನ್ಯ ತಂಡವಾದ ಆಸ್ಟ್ರೇಲಿಯವನ್ನು ಸರ್ದಾರ್‌ ಪಡೆ ಎದುರಿಸಲಿದೆ.

ಪೆನಾಲ್ಟಿ ಕಾರ್ನರ್‌ಗಳೆಲ್ಲ ವಿಫ‌ಲ!
ಮೊದಲ ಅವಧಿಗೆ ಇನ್ನೇನು ಒಂದು ನಿಮಿಷ ಬಾಕಿ ಇರುವಾಗ ಭಾರತಕ್ಕೆ 2-0 ಮುನ್ನಡೆಯ ಸುವರ್ಣಾವಕಾಶವೊಂದಿತ್ತು. ತಲ್ವಿಂದರ್‌ ಸಿಂಗ್‌ ಬಾರಿಸಿದ ಚೆಂಡನ್ನು ಇಂಗ್ಲೆಂಡ್‌ ಗೋಲ್‌ಕೀಪರ್‌ ಹ್ಯಾರಿ ಗಿಬ್ಸನ್‌ ಅಮೋಘ ರೀತಿಯಲ್ಲಿ ತಡೆದರು.ದ್ವಿತೀಯ ಕ್ವಾರ್ಟರ್‌ನಲ್ಲಂತೂ ಭಾರತದ್ದೇ ಮೇಲುಗೈ ಆಗಿತ್ತು. ಈ ಅವಧಿಯೊಂದರಲ್ಲೇ ಭಾರತಕ್ಕೆ 8 ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದ್ದವು. ಆದರೆ ಡ್ರ್ಯಾಗ್‌ ಫ್ಲಿಕರ್‌ಗಳಾದ ವರುಣ್‌ ಕುಮಾರ್‌ ಮತ್ತು ಅಮಿತ್‌ ರೋಹಿದಾಸ್‌ ಇವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫ‌ಲರಾದರು. ಗಿಬ್ಸನ್‌ ಜಾಗಕ್ಕೆ ಬಂದ ಗೋಲಿ ಜಾರ್ಜ್‌ ಪಿನ್ನರ್‌ ಭಾರತದ ನಿರೀಕ್ಷೆಯ ಬಲೂನಿಗೆ “ಪಿನ್‌’ ಚುಚ್ಚಿದರು.

ತೃತೀಯ ಕ್ವಾರ್ಟರ್‌ನಲ್ಲಿ ಇತ್ತಂಡಗಳದ್ದೂ ಭರ್ಜರಿ ಹೋರಾಟವಾಗಿತ್ತು. ಇಂಗ್ಲೆಂಡ್‌ ಸಮಬಲಕ್ಕಾಗಿ ಭಾರೀ ಪ್ರಯತ್ನ ಪಟ್ಟಿತು. ಆದರೆ ಲಭಿಸಿದ ಪೆನಾಲ್ಟಿ ಕಾರ್ನರ್‌ ಒಂದು ಕೈಕೊಟ್ಟಿತು.

Advertisement

ಕೊನೆಗೂ ಅಂತಿಮ ಕ್ವಾರ್ಟರ್‌ನಲ್ಲಿ ಇಂಗ್ಲೆಂಡಿನ ಪ್ರಯತ್ನ ಕೈಗೂಡಿತು. ಪಂದ್ಯದ ಮುಕ್ತಾಯಕ್ಕೆ 7 ನಿಮಿಷಗಳಿರುವಾಗ ಗ್ಲೆನ್‌ಹೋಮ್‌ ಅವರ ಪೆನಾಲ್ಟಿ ಹೊಡೆದ ಭಾರತದ ಗೋಲಿ ಕೃಷ್ಣ ಬಿ. ಪಾಠಕ್‌ ಅವರನ್ನು ವಂಚಿಸಿತು. ಪಂದ್ಯ 1-1 ಸಮಬಲಕ್ಕೆ ಬಂತು. ಇಲ್ಲಿಂದ ಮುಂದೆ ಎರಡೂ ತಂಡಗಳು ಗೆಲುವಿನ ಗೋಲ್‌ಗಾಗಿ ಪ್ರಯತ್ನಿಸಿದರೂ ಯಶಸ್ಸು ಸಿಗದೇ ಹೋಯಿತು.

ಶನಿವಾರದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ 1-4 ಗೋಲುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ಇನ್ನೊಂದು ಪಂದ್ಯದಲ್ಲಿ ಮಲೇಶ್ಯ ಇಷ್ಟೇ ಅಂತರದಿಂದ ಅಯರ್‌ಲ್ಯಾಂಡನ್ನು ಮಗುಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next