ಸುಳ್ಯ: ತಾಲೂಕಿನ ಮಡಪ್ಪಾಡಿ ಭಾಗದಲ್ಲಿ ಉಂಟಾಗಿದ್ದ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಯ ಸುಳ್ಯ ತಾಲೂಕಿನ ಮಡಪ್ಪಾಡಿ ಭಾಗದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಕಾಳ್ಗಿಚ್ಚಿಗೆ ಭಾರೀ ಪ್ರಮಾಣದಲ್ಲಿ ಅರಣ್ಯ ಹೊತ್ತಿ ಉರಿದಿತ್ತು. ಅರಣ್ಯ ಇಲಾಖೆಯ ಸಿಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದರು. ಮಂಗಳವಾರ ಆ ಪ್ರದೇಶದಲ್ಲಿ ಬಹುತೇಕ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ.
ಹೇರ ಭಾಗದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಹರಸಾಹಸ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರ, ಎಳುವಾಳೆ ಭಾಗದಲ್ಲಿ ಕಾಳ್ಗಿಚ್ಚು ಇನ್ನೂ ಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.
ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಭಾರೀ ಪ್ರಮಾಣದಲ್ಲಿ ಉರಿಯುತ್ತಿದ್ದು, ರಾತ್ರಿ ವೇಳೆ ಬೆಂಕಿ ಉರಿಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
Related Articles
ಕಾಳ್ಗಿಚ್ಚಿನ ವ್ಯಾಪ್ತಿ ವಿಸ್ತರಿಸದಂತೆ ಇಲಾಖೆ ವತಿಯಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೊಲ್ಲೂರು: ಮೇಘನಿ ಅಭಯಾರಣ್ಯದಲ್ಲಿ ಬೆಂಕಿ
ಕೊಲ್ಲೂರು: ಇಲ್ಲಿಗೆ ಸನಿಹದ ಮೇಘನಿ ಅಭಯಾರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಎಕರೆಗಟ್ಟಲೆ ಅರಣ್ಯ ನಾಶವಾಗಿರುವುದಾಗಿ ತಿಳಿದುಬಂದಿದೆ. ಅರಣ್ಯ ಇಲಾಖೆ ಮಾಹಿತಿ ಪಡೆದಿದ್ದು, ಕಾಳ್ಗಿಚ್ಚು ಆರಿಸುವ ಪ್ರಯತ್ನಕ್ಕೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಳ್ಗಿಚ್ಚು ಕಂಡುಬಂದಿದ್ದರೂ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಇದುವರೆಗೆ ಪ್ರಕರಣ ನಡೆದಿರಲಿಲ್ಲ. ಈಗ ಕೊಲ್ಲೂರು ಭಾಗದಲ್ಲಿ ಕಾಳ್ಗಿಚ್ಚು ಸಂಭವಿಸಿದ್ದು, ಬೇಗನೆ ಮಳೆ ಬಾರದೆ ಇದ್ದರೆ ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುವ ಭೀತಿ ತಲೆದೋರಿದೆ.