Advertisement

ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಆತ್ಮವಿದ್ದಂತೆ: ಡಾ|ತೇಜಸ್ವಿನಿ

07:48 PM Mar 20, 2018 | Karthik A |

ಕಡಬ: ಅಖಂಡ ಭಾರತದ ಅಸ್ಮಿತೆ ಉಳಿಯಬೇಕಾದರೆ ಬಿಜೆಪಿ ಗೆಲ್ಲಲೇಬೇಕು. ಬಿಜೆಪಿಯ ಮೂಲಬೇರು ಸುಳ್ಯದಲ್ಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಆತ್ಮವಿದ್ದಂತೆ ಎಂದು ಬಿಜೆಪಿ ರಾಜ್ಯ ಸಮಿತಿಯ ವಕ್ತಾರೆ, ಮಾಜಿ ಸಂಸದೆ ಡಾ| ತೇಜಸ್ವಿನಿ ಶ್ರೀರಮೇಶ್‌ ನುಡಿದರು. ಅವರು ರವಿವಾರ ಬಿಳಿನೆಲೆಯಲ್ಲಿ ಬಿಜೆಪಿ ಸುಳ್ಯ ಮಂಡಲ, ಕಡಬ ಮಹಾ ಶಕ್ತಿ ಕೇಂದ್ರ ಹಾಗೂ ಬಿಳಿನೆಲೆ ಶಕ್ತಿ ಕೇಂದ್ರದ ಆಶ್ರಯದಲ್ಲಿ ಜರಗಿದ ಭಾರತಮಾತಾ ಪೂಜನ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಿಜೆಪಿಯ ಹಿರಿಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಅವರಂಥವರು ಸುಳ್ಯ ಕ್ಷೇತ್ರದ ಹೆಸರನ್ನು ಉಲ್ಲೇಖೀಸಬೇಕಾದರೆ ಸುಳ್ಯದ ಬಿಜೆಪಿ ಕಾರ್ಯಕರ್ತರ ಬಗ್ಗೆ ನಾವು ಹೆಮ್ಮೆಪಡಲೇಬೇಕು. ಅಂಗಾರ ಅವರಂತಹ ಅತ್ಯಂತ ಸಜ್ಜನ ಶಾಸಕರನ್ನು ಕೊಟ್ಟ ಸುಳ್ಯದಲ್ಲಿ ಬಿಜೆಪಿಯ ನಂದಾದೀಪ ಇನ್ನಷ್ಟು ಪ್ರಜ್ವಲಿಸಬೇಕು ಎಂದು ಕರೆಕೊಟ್ಟರು.

Advertisement

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರುವಾಗ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಬೇಕು. ಆಗ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ದೇಶದ ಅಭ್ಯುದಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ಮಹಾಯಜ್ಞದಲ್ಲಿ ನಾವೂ ಪಾಲ್ಗೊಳ್ಳೋಣ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ತಂದುಕೊಡಲು ಕಟಿಬದ್ಧರಾಗೋಣ ಎಂದು ಹೇಳಿದರು.

ಆಂದೋಲನವಾಗಿ ಪರಿವರ್ತನೆ
ಬಿಜೆಪಿ ದ.ಕ. ಜಿಲ್ಲಾ ಸಂಘಟನ ಕಾರ್ಯದರ್ಶಿ ಯತೀಶ್‌ ಆರ್ವಾರ ಮಾತನಾಡಿ, ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ದೇಶದ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ಒಂದು ಆಂದೋಲನವಾಗಿ ರೂಪುಗೊಂಡಿದೆ. ಒಂದು ಕಾಲದಲ್ಲಿ ಮೈಲಿಗಲ್ಲನ್ನು ಚುನಾವಣೆಗೆ ನಿಲ್ಲಿಸಿದರೂ ಜನರು ಗೆಲ್ಲಿಸುತ್ತಾರೆ ಎಂದು ಬೀಗುತ್ತಿದ್ದ ಕಾಂಗ್ರೆಸ್‌ ಇಂದು ದೇಶದಲ್ಲಿ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದರೆ ಅದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ಶ್ರಮದ ಫ‌ಲ. ಹಲವಾರು ಹಿರಿಯರ ಶ್ರಮ, ತ್ಯಾಗ ಹಾಗೂ ಬಲಿದಾನಗಳ ಫಲವಾಗಿ ಇಂದು ಇಡೀ ದೇಶವನ್ನು ಆವರಿಸಿಕೊಂಡಿರುವ ಬಿಜೆಪಿಯನ್ನು ನಮ್ಮ ನಂಬಿಕೆ, ಸಂಸ್ಕೃತಿ ಹಾಗೂ ದೇಶದ ಅಭಿವೃದ್ಧಿಯ ಉದ್ದೇಶದಿಂದ ಬೆಂಬಲಿಸಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ಶಾಸಕ ಎಸ್‌. ಅಂಗಾರ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತವನ್ನು ಕೊನೆಗಾಣಿಸುವ ದಿನಗಳು ಹತ್ತಿರವಾಗಿವೆ. ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ನೀಡುತ್ತಿರುವ ಅನುದಾನಗಳನ್ನು ದುರ್ಬಳಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ಈ ಬಾರಿ ಮತದಾರರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್‌ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಸ್ತವಾರಿ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಮಂಡಲ ಉಪಾಧ್ಯಕ್ಷೆ ಪುಲಸ್ತ್ಯಾ ರೈ, ಪ್ರಧಾನ ಕಾರ್ಯದರ್ಶಿ ಕಿಶೋರ್‌ ಶಿರಾಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶೋಭಾ ನಲ್ಲೂರಾಯ, ಕಡಬ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಎನ್‌.ಕೆ. ಕಡಬ, ಬಿಳಿನೆಲೆ ಶಕ್ತಿ ಕೇಂದ್ರದ ಪ್ರಮುಖ್‌, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ., ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಿಜೆಪಿ ಬಿಳಿನೆಲೆ ಗ್ರಾಮ ಸಮಿತಿಯ ಕಾರ್ಯದರ್ಶಿ ಮೋಹನ ಪಳ್ಳಿಗದ್ದೆ, ಬೂತ್‌ ಸಮಿತಿಗಳ ಅಧ್ಯಕ್ಷರಾದ ಸಂಕಪ್ಪ ಗೌಡ ಕೊಂಡೆಮನೆ (ಸುಂಕದಕಟ್ಟೆ), ಶಶಿಧರ ಬೈಲು (ಬಿಳಿನೆಲೆ), ತಿಲೇಶ್‌ ಗೌಡ (ಕೈಕಂಬ), ಕಿಶೋರ್‌ (ನೆಟ್ಟಣ) ಉಪಸ್ಥಿತರಿದ್ದರು.

ಕಡಬ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ತಾ.ಪಂ. ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್‌ ಬಿಳಿನೆಲೆ ನಿರೂಪಿಸಿ, ಬಿಳಿನೆಲೆ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯಕುಮಾರ್‌ ಎರ್ಕ ವಂದಿಸಿದರು. ಸವಿತಾ ಸುಬ್ರಹ್ಮಣ್ಯ ಅವರು ವಂದೇ ಮಾತರಂ ಹಾಡಿದರು. ಭಾರತ ಮಾತ ಪೂಜನ ಕಾರ್ಯಕ್ರಮದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಪಕ್ಷಕ್ಕೆ ಸೇರ್ಪಡೆ
ಐತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಓಟೆಕಜೆ ತಮಿಳು ಕಾಲನಿಯ 12 ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮ ಪಂಚಾಯತ್‌ ಅಧ್ಯಕ್ಷ ಸತೀಶ್‌ ಕೆ. ನೇತೃತ್ವದಲ್ಲಿ ಬಿಜೆಪಿ ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next