ಸುಳ್ಯ: ರಸ್ತೆ ಬದಿಯ ಚರಂಡಿ ಅವ್ಯವಸ್ಥೆಯಿಂದ ಸುಳ್ಯ ತಾಲೂಕಿನ ಬಹುತೇಕ ರಸ್ತೆಗಳಲ್ಲಿ ಮಳೆಗೆ ಚರಂಡಿ ನೀರು ಹರಿದು ಗುಂಡಿಗಳು ನಿರ್ಮಾಣಗೊಂಡು ಸಂಚಾರ ಸಾಹಸವಾಗಿದೆ.
ನಿಂತಿಕಲ್ಲು – ಬೆಳ್ಳಾರೆ, ಬೆಳ್ಳಾರೆ-ಸೋಣಂಗೇರಿ, ಜಾಲ್ಸೂರು -ಕಾಸರಗೋಡು, ಸುಳ್ಯ-ಜಯನಗರ, ಸುಳ್ಯ- ದುಗ್ಗಲಡ್ಕ, ಸುಳ್ಯ ನಗರ ಸೇರಿದಂತೆ ತಾಲೂಕಿನ ಬಹುತೇಕ ರಸ್ತೆಗಳು ಪ್ರಸ್ತುತ ಹಾನಿಗೊಳಗಾಗಿದೆ. ಇದಲ್ಲದೆ ಗ್ರಾಮೀಣ ಭಾಗದ ರಸ್ತೆಗಳು ಕೂಡ ಹೊಂಡ-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಮಳೆಗಾಲದ ಆರಂಭದದ ಹೊತ್ತಲ್ಲಿ ರಸ್ತೆ ಬದಿಯ ಚರಂಡಿಗಳನ್ನು ದುರಸ್ತಿಗೊಳಿಸ ಬೇಕಾಗಿದ್ದರೂ, ದುರಸ್ತಿ ಮಾಡಿರಲಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಹಲವೆಡೆ ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡ-ಗುಂಡಿಗಳಾಗಿ ಪರಿವರ್ತನೆಗೊಂಡಿದೆ ಎಂದು ದೂರುತ್ತಿದ್ದಾರೆ.
ತಾಲೂಕಿನ ಡಾಮರು ಹೆಸರಿನ ರಸ್ತೆ ಸಂಚಾರವೇ ನರಕ ಸದೃಶ್ಯವಾಗಿದ್ದು ಇನ್ನು ಮಣ್ಣಿನ ರಸ್ತೆಗಳಂತು ಕೆಸರುಮಯಗೊಂಡು ಸಂಚಾರಕ್ಕೆ ಭಾರೀ ತೊಂದರೆಯನ್ನು ತಂದೊಡ್ಡಿದೆ. ತಾಲೂಕಿನಲ್ಲಿನ ಹೊಂಡ- ಗುಂಡಿ ರಸ್ತೆಗಳು ಹಾಗೂ ದುಸ್ತರ ರಸ್ತೆಗಳನ್ನು ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಪಕ್ಷಭೇದ ಮರೆತು ಜನ ಆಗ್ರಹಿಸುತ್ತಿದ್ದಾರೆ.
-ದಯಾನಂದ ಕಲ್ನಾರ್