ಸುಳ್ಯ: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಳ್ಯ ನಗರ ಮೂಲಕ ಹಾದು ಹೋಗುತ್ತಿದ್ದು, ವಾಹನ ದಟ್ಟಣೆ ವಿಪರೀತ ಹೆಚ್ಚಳಗೊಂಡಿದೆ.ಜತೆಗೆ ಸುಳ್ಯ ನಗರವೂ ಬೆಳೆಯುತ್ತಿದೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ವನ್‌ಸೆ„ಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೂ ಈ ವ್ಯವಸ್ಥೆ ಸುಳ್ಯದ ಗಾಂಧಿನಗರ, ಜ್ಯೋತಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಪಾಲನೆಯಾಗುತ್ತಿಲ್ಲ ಎಂಬ ದೂರು ವ್ಯಕ್ತವಾಗತೊಡಗಿದೆ.
ನಗರದಲ್ಲಿ ಹಾದು ಹೋಗುವ ಹೆದ್ದಾರಿ ವಿಸ್ತರಣೆಯಾಗದೆ ಈ ಹಿಂದಿನಂತೆಯೇ ಇದ್ದು, ಇದರಿಂದ ಮಡಿಕೇರಿ ಕಡೆಗೆ ಹಾಗೂ ಪೇಟೆಯ ಮಳಿಗೆಗೆ ಬರುವ ವಾಹನಗಳಿಂದ ಪೇಟೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಪೇಟೆಯಲ್ಲಿ ಇನ್ನೂ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನ ದಟ್ಟಣೆ ನಿಯಂತ್ರಿಸುವುದೇ ಸವಾಲಾಗಿದೆ.
ವಾಹನ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಕೆಲವು ವರ್ಷಗಳ ಹಿಂದೆ ದಿನವೊಂದಕ್ಕೆ ಒಂದು ಬದಿ ವಾಹನ ಪಾರ್ಕಿಂಗ್ ಮಾಡುವ ವನ್‌ಸೆ„ಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದು ಪಾಲನೆಯಾಗದೇ ಮತ್ತೆ ಸಮಸ್ಯೆ ಉಂಟಾಗಿತ್ತು. ಒಂದೆರಡು ವರ್ಷದ ಹಿಂದೆ ಮತ್ತೆ ವನ್‌ಸೈಡ್ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೊಳಿಸಲಾಗಿತ್ತು. ಆದರೆ ಈಗೀಗ ಈ ಪಾರ್ಕಿಂಗ್ ವ್ಯವಸ್ಥೆ ಗಾಂಧಿನಗರ, ಜ್ಯೋತಿ ವೃತ್ತ ಬಳಿ ಸೇರಿದಂತೆ ಕೆಲವೆಡೆ ಸಮರ್ಪಕವಾಗಿ ಪಾಲನೆಯಾಗದೆ ವಾಹನ ದಟ್ಟಣೆ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿ ಸರಿಯಾದ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ
ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ
ನಗರದ ಪ್ರಮುಖ ಜಂಕ್ಷನ್‌ಗಳಾದ ಕಾಲೇಜು ರಸ್ತೆ ಕ್ರಾಸ್ ಜಂಕ್ಷನ್, ಜ್ಯೋತಿ, ರಥಬೀದಿ ಜಂಕ್ಷನ್(ಕಟ್ಟೆಕಾರ್)ಗಳಲ್ಲಿ ಬೆಳಗ್ಗೆ, ಸಂಜೆ ವೇಳೆ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ. ವಾಹನ ನಿಯಂತ್ರಣಕ್ಕೆ ಪೊಲೀಸ್ ಸಿಬಂದಿ ನಿಯೋಜಿಸಬೇಕಾಗಿದ್ದರೂ ಹೆಚ್ಚನ ಸಂದರ್ಭ ಗೃಹ ರಕ್ಷಕ ದಳದ ಸಿಬಂದಿ ಮಾತ್ರವೇ ಇರುವುದು ಎಂಬ ಆರೋಪ ಕೇಳಿಬಂದಿದೆ.
ನಗರದಲ್ಲಿ ವನ್‌ಸೆ„ಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಜ್ಯೋತಿಯಿಂದ ಗಾಂಧಿನಗರದ ವರೆಗೆ ಜಾರಿಗೊಳಿಸಲಾಗಿದೆ. ಪಾರ್ಕಿಂಗ್ ಸಮಸ್ಯೆ ಬಗ್ಗೆ ಪೊಲೀಸರು, ನಗರ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತರಲಾಗಿದ್ದು, ಶೀಘ್ರ ಸಭೆ ನಡೆಸಿ ಪರಿಹಾರ ಕ್ರಮದ ಬಗ್ಗೆ ಚರ್ಚಿಸಲಾಗುವುದು.
– ಸುಧಾಕರ್, ಮುಖ್ಯಾಧಿಕಾರಿ ನಗರ ಪಂಚಾಯತ್ ಸುಳ್ಯ
ಸುಳ್ಯ ನಗರದಲ್ಲಿ ಜಾರಿಯಲ್ಲಿರುವ ವನ್‌ಸೈಡ್ ಪಾರ್ಕಿಂಗ್ ನಗರದ ಪ್ರಮುಖ ಪ್ರದೇಶದ ಎಲ್ಲ ಕಡೆ ಪಾಲನೆ ಆಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. ವನ್‌ಸೈಡ್ ಪಾರ್ಕಿಂಗ್ ಹಾಗೂ ಪಾರ್ಕಿಂಗ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ವಹಿಸಬೇಕು.
– ಡಿ.ಎಂ. ಶಾರೀಕ್, ಸಾಮಾಜಿಕ ಕಾರ್ಯಕರ್ತರು