Advertisement

ಮುಗಿದೀತೇ ಸುಳ್ಯ ತಾಲೂಕು ಕ್ರೀಡಾಂಗಣ ಕಾಮಗಾರಿ?

05:00 PM Dec 20, 2017 | |

ಸುಳ್ಯ : ಸುಳ್ಯ ನಗರ ವ್ಯಾಪ್ತಿಯ ಶಾಂತಿನಗರ ಬಳಿ ತಾಲೂಕು ಕ್ರೀಡಾಂಗಣ ನಿರ್ಮಾಣ ಕಾರ್ಯ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿಲ್ಲ. ಕ್ರೀಡಾರ್ಥಿಗಳಿಗೆಂದು ನಿರ್ಮಾಣಗೊಂಡು ಪ್ರಸ್ತುತ ನಿರ್ವಹಣೆಯಿಲ್ಲದಿರುವ ಡ್ರೆಸಿಂಗ್‌ ಹಾಗೂ ವಿಶ್ರಾಂತಿ ಕೊಠಡಿಗಳು ಸಂಜೆಯಾಗುತ್ತಿದ್ದಂತೆ ಪಡ್ಡೆಗಳ ಹಾಗೂ ಸಮಾಜಘಾತುಕರ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.

Advertisement

400 ಮೀ. ಟ್ರ್ಯಾಕ್‌
ಭೌಗೋಳಿಕ ರಚನೆ ಮತ್ತು ತಾಂತ್ರಿಕ ಅಧ್ಯಯನವನ್ನು ಸೂಕ್ತವಾಗಿ ನಡೆಸಿಲ್ಲವೆಂದು ಕ್ರೀಡಾಂಗಣ ನಿರ್ಮಾಣದ ಆರಂಭದಲ್ಲಿ ಅಪಸ್ವರಗಳಿದ್ದವು. 2006-07ರಲ್ಲಿ 400 ಮೀ. ಟ್ರ್ಯಕ್‌ನ ಕ್ರೀಡಾಂಗಣಕ್ಕೆಂದು 90 ಲಕ್ಷ ರೂ. ವೆಚ್ಚದ ಟೆಂಡರ್‌ ಮಂಜೂರಾಗಿತ್ತು.  ಈ ಮೊತ್ತದಲ್ಲಿ ಕ್ರೀಡಾಂಗಣ ವಿಸ್ತರಣೆ, ಮೇಲ್ಭಾಗದಲ್ಲಿ ಸುಸಜ್ಜಿತ ಡ್ರೆಸಿಂಗ್‌ ರೂಮ್‌, ವಿಶ್ರಾಂತಿ ಕೊಠಡಿಗಳು ನಿರ್ಮಾಣಗೊಂಡಿದ್ದವು. ಅನುದಾನ ಕೊರತೆಯಿಂದಾಗಿ ವಿಸ್ತರಣೆ ಕಾಮಗಾರಿ 200 ಮೀ. ಆಗುವಷ್ಟರಲ್ಲಿ ಸ್ಥಗಿತಗೊಂಡಿತು. ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳೂ ಪಾಳುಬಿದ್ದಿವೆ. 

ಕ್ರೀಡಾಂಗಣ ವಿಸ್ತರಣೆಗಾಗಿ ಎತ್ತರದ ಗುಡ್ಡವನ್ನು ನೆಲಸಮತಟ್ಟು ಮಾಡಲಾಗಿದೆ. ಗುಡ್ಡಕ್ಕಿಂತ ಸುಮಾರು 50 ಅಡಿಗೂ ಹೆಚ್ಚು ಆಳದಲ್ಲಿ ಕ್ರೀಡಾಂಗಣವಿದೆ. ತಡೆಗೋಡೆ ಇಲ್ಲದ ಈ ಭಾಗದಲ್ಲಿ ಸುಮಾರು 5 ಜಾನುವಾರುಗಳು ಮೈದಾನಕ್ಕೆ ಉರುಳಿ ಬಲಿಯಾಗಿವೆ. ಮಕ್ಕಳು, ಸಾರ್ವಜನಿಕರು ಇಲ್ಲಿ ಅಡ್ಡಾಡುತ್ತಿದ್ದು, ಬಿದ್ದು ಅಪಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ, ಸ್ಥಳೀಯರಾದ ನಾಸಿರ್‌ ಮತ್ತು ಬಾತಿಶ್‌ ಬೆಟ್ಟಂಪಾಡಿ.

ಕ್ರೀಡಾಂಗಣ ಅಗತ್ಯ
ತಾಲೂಕಿನ ಹಲವಾರು ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾಂಗಣ ಅಗತ್ಯವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 1.50 ಕೋಟಿ ರೂಪಾಯಿ ಅನುದಾನ ಅಗತ್ಯವಿದೆ. ವರ್ಷದ ಹಿಂದೆ ಸಹಾಯಕ ಕಮಿಷನರ್‌ ರಾಜೇಂದ್ರ ಅವರ ನೇತೃತ್ವದಲ್ಲಿ ವಿಶೇಷ ಸಭೆ ನಡೆದಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದರ ಬಗ್ಗೆ ಚರ್ಚಿಸಲಾಗಿತ್ತು. ಖೇಲೋ ಇಂಡಿಯಾ ಯೋಜನೆಯಡಿ ಅನುದಾನ ಪಡೆಯಲು, ಲೋಪದ ಕುರಿತಾಗಿ ಸಮಗ್ರ ತನಿಖೆ ನಡೆಸಲು ಮತ್ತು ಅಂದಾಜು 2 ಕೋಟಿ ರೂ.ಗಳನ್ನು ವಿವಿಧ ಮೊತ್ತಗಳಲ್ಲಿ ಭರಿಸಿ ಕನಿಷ್ಠ 200 ಮೀಟರ್‌ ಟ್ರ್ಯಾಕ್‌ ರಚಿಸಿ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಅದಿನ್ನೂ ಈಡೇರಿಲ್ಲ. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

ನಿತ್ಯ ‘ಅವ್ಯವಹಾರ’
ಕಟ್ಟಡಗಳ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಒಳಪ್ರವೇಶಿಸದಂತೆ ಭದ್ರತೆ ಏರ್ಪಡಿ ಸಿದ್ದರೂ ಈಗ ಹಾಳಾಗಿದೆ. ರಾತ್ರಿ ವೇಳೆ ಮದ್ಯವ್ಯಸನಿಗಳು, ಪಡ್ಡೆಗಳು ಕಟ್ಟಡದತ್ತ ತೆರಳಿ ಮೋಜು – ಮಸ್ತಿ ಮಾಡುತ್ತಿದ್ದಾರೆ. ಸುಂದರ ಕಟ್ಟಡದ ಗೋಡೆಗಳು, ಬಾಗಿಲುಗಳು, ನೀರಿನ ಪೈಪ್‌ಗ್ಳು, ಕಿಟಕಿಗಳು, ಶೌಚಾಲಯ ಎಲ್ಲವೂ ಹಾನಿಗೊಂಡಿವೆ. ಗೋಡೆಯಲ್ಲಿ ಅಸಭ್ಯ ಬರಹಗಳು ಕಾಣಿಸುತ್ತಿವೆ. ಕೊಠಡಿಯೊಳಗೆ ಮದ್ಯದ ಬಾಟಲಿ, ಸಿಗರೇಟು ಪ್ಯಾಕ್‌ ರಾಶಿ ಬಿದ್ದಿವೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ದೂರಿದ್ದಾರೆ.

Advertisement

1.50 ಕೋ.ರೂ. ಅಗತ್ಯ
400 ಮೀಟರ್‌ ಟ್ರ್ಯಾಕ್‌ನ ಕ್ರೀಡಾಂಗಣಕ್ಕಾಗಿ ಕನಿಷ್ಠ 1.50 ಕೋಟಿ ರೂಪಾಯಿ ಅಗತ್ಯವಿದೆ. ಅಷ್ಟೊಂದು ಮೊತ್ತ ವಿನಿಯೋಗಿಸಿದರೆ ಕ್ರೀಡಾ ಚಟುವಟಿಕೆ ಆರಂಭಗೊಂಡೀತು.
ದೇವರಾಜ್‌ ಮುತ್ಲಾಜೆ, ಸಹಾಯಕ
   ಯುವ ಸಬಲೀಕರಣ ಕ್ರೀಡಾಧಿಕಾರಿ

ಅನುದಾನವಿಲ್ಲ
ಪ್ರಾಧಿಕಾರದಲ್ಲಿ ಯಾವುದೇ ಅನುದಾನ ವಿಲ್ಲ . ಆದರೆ ಇಲ್ಲಿನ ಸಮಸ್ಯೆಬಗ್ಗೆ ಕ್ರೀಡಾ ಸಚಿವರು, ಸರಕಾರದ ಗಮನ ಸೆಳೆಯುತ್ತೇನೆ. ಸ್ಥಳೀಯ ಶಾಸಕರೂ ಹೆಚ್ಚು ಗಮನ ವಹಿಸಬೇಕು.
ಮೀರ್‌ ರೋಶನ್‌ ಆಲಿ, ರಾಜ್ಯ
   ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ 

 ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next