Advertisement

ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ ಸುಳ್ಯ-ಸುಬ್ರಹ್ಮಣ್ಯ ಹೆದ್ದಾರಿ

07:30 AM Jul 24, 2017 | Team Udayavani |

ಸುಳ್ಯ : ನಾಲ್ಕು ವರ್ಷಗಳ ಹಿಂದೆ ಅಗಲಗೊಂಡು ಡಾಮರು ಕಂಡಿದ್ದ ತಾಲೂಕಿನ ಪ್ರಮುಖ ರಸ್ತೆ ಸುಳ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸೂಕ್ತ ನಿರ್ವಹಣೆಯಿಲ್ಲದೇ ಹಾಳಾಗತೊಡಗಿದೆ. ಮಡಿಕೇರಿ, ಮೈಸೂರು ಹಾಗೂ ಕೇರಳ ರಾಜ್ಯದಿಂದ ನಿತ್ಯ ಸಾವಿರಾರು ಪ್ರವಾಸಿಗರು, ಯಾತ್ರಾರ್ಥಿಗಳನ್ನು ಹೊತ್ತ ವಾಹನಗಳು ಸಂಚಾರಕ್ಕೆ ಈ ರಸ್ತೆಯನ್ನು ಬಳಸುತ್ತಿವೆ.   ರಸ್ತೆಯಲ್ಲೇ ನೀರು ಹರಿಯುವ ಪರಿಣಾಮ ಹೆದ್ದಾರಿಯ ಅಂಚುಗಳು ವಿವಿಧೆಡೆ ಕಿತ್ತು ಹೋಗುತ್ತಿದ್ದರೆ, ಖಾಸಗಿ ರಸ್ತೆಗಳಿಂದ ಹರಿದು ಬರುವ ಮಳೆನೀರಿನಿಂದಾಗಿ ಹಲವೆಡೆ ಡಾಮರು ಎದ್ದು ಹೊಂಡಗಳಾಗಿವೆ. ಇದರೊಂದಿಗೆ ರಸ್ತೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲದೇ, ರಸ್ತೆ ಅಲ್ಲಲ್ಲಿ ಕುಸಿತವಾಗುತ್ತಿದೆ. ಇದಕ್ಕೆ ಸ್ಪಂದಿಸಬೇಕಾದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು, ಸಿಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಜತೆಗೆ ದುರಸ್ತಿ ಕಾಮಗಾರಿಗಳಿಗೆ ಸರಕಾರದ ಅನುದಾನವೂ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಮಳೆ ಆರಂಭವಾಗಿ ಎರಡು ತಿಂಗಳುಗಳಾಗಿದ್ದು, ರಸ್ತೆಗೆ ಸಾಕಷ್ಟು ಹಾನಿಯುಂಟಾಗಿದೆ. ತುರ್ತಾಗಿ ನಿರ್ವಹಿ ಸಬೇಕಾದ ಒಂದಿಷ್ಟು ಸಣ್ಣಪುಟ್ಟ ಅಗತ್ಯ ಕಾಮಗಾರಿಗಳನ್ನು ನಡೆಸಿ ದೊಡ್ಡ ಮಟ್ಟಿನ ಹಾನಿ ಆಗದಂತೆ ರಸ್ತೆಯನ್ನು ನೋಡಿಕೊಳ್ಳುವತ್ತ ಲೋಕೋಪ ಯೋಗಿ ಇಲಾಖೆ  ಗಮನಹರಿಸಿದೆ. ಸರಕಾರದಿಂದಲೂ ಸಕಾಲದಲ್ಲಿ ಅನು ದಾನ ಬಾರದಿರುವುದೂ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ರಸ್ತೆಗಳಿಂದ ತೊಡಕು
ಹೆದ್ದಾರಿಯ ಇಕ್ಕೆಲಗಳಲ್ಲಿನ ಖಾಸಗಿ ರಸ್ತೆಗಳಿಂದ ಹರಿದು ಬರುವ ನೀರು ರಸ್ತೆಗೆ ಹರಿಸುವ ಪರಿಣಾಮ ಮರಳು ಹಾಗೂ ಮಣ್ಣಿನ ರಾಶಿ ಬಿದ್ದು ಡಾಮರು ಹಾಳಾಗುವುದರೊಂದಿಗೆ ಸಂಚಾ ರಕ್ಕೂ ಅಡಚಣೆಯಾಗುತ್ತಿದೆ. ಈ ಬಗ್ಗೆ ಕಳೆದ ಬಾರಿಯೇ ಸಾಕಷ್ಟು ಮಂದಿಗೆ ಪಿಡಬ್ಲ್ಯುಡಿ ನೊಟೀಸ್‌ ಜಾರಿ ಮಾಡಿದ ಪರಿಣಾಮ ಖಾಸಗಿಯವರು ತಮ್ಮ ರಸ್ತೆಗಳಿಗೆ ಪೈಪ್‌ಗ್ಳನ್ನು ಹಾಕಿ ಹೆದ್ದಾರಿಗೆ ನೀರಿಳಿಯದಂತೆ ಮಾಡಿದ್ದಾರೆ. 

ಹೋರಾಟದ ಬಳಿಕ ಈಡೇರಿತ್ತು
ನಿತ್ಯ ಸಾವಿರಾರು ಮಂದಿ ಪ್ರವಾಸಿಗರು, ಯಾತ್ರಾರ್ಥಿಗಳು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸಹಿತ ಬೆಂಗಳೂರಿನಂತಹ ದೂರದೂರುಗಳಿಗೆ ಸಂಚಾರ ನಡೆಸುವ ಪ್ರಮುಖ ಹೆದ್ದಾರಿ. ಹಲವು ವರ್ಷಗಳ‌ ಮನವಿ, ಆಗ್ರಹ ಪ್ರತಿಭಟನೆ, ಹೋರಾಟದ ಬಳಿಕ 2012-13ನೇ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಸುಳ್ಯ- ಸುಬ್ರಹ್ಮಣ್ಯದ ಅಂದಾಜು 40 ಕಿ.ಮೀ. ರಸ್ತೆ ವಿಸ್ತರಣೆಗೊಳಿಸಿ ಡಾಮರು ಹಾಕಲು 65 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಕರಾರಿನಂತೆ ಗುತ್ತಿಗೆ ವಹಿಸಿಕೊಂಡಿದ್ದ ಶರೀಫ್ ಕಂಪೆನಿ ತರಾತುರಿಯಲ್ಲಿ ಕಾಮಗಾರಿ ನಿರ್ವಹಿಸಿತ್ತಾದರೂ ಅಂದಾಜು 3 ಕಿ.ಮೀ.ನಷ್ಟು ಬಾಕಿಗೊಳಿಸಿತ್ತು. ಒಪ್ಪಂದ ಪ್ರಕಾರದಷ್ಟು ವಿಸ್ತಾರ ಗೊಂಡಿಲ್ಲ. ಕಾಮಗಾರಿಯೂ ಅಸಮರ್ಪಕವಾಗಿದೆ ಎಂದು ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು.

- ಭರತ್‌ ಕನ್ನಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next