Advertisement

ಫಲಿತಾಂಶದಿಂದ ಜನರಿಗೆ ಅಚ್ಛೇ ದಿನ್‌: ಮಿಥುನ್‌

11:40 AM Dec 14, 2018 | Team Udayavani |

ಸುಳ್ಯ : ನಾಲ್ಕೂವರೆ ವರ್ಷಗಳ ಕಾಲ ಜನವಿರೋಧಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರವನ್ನು ತಿರಸ್ಕರಿಸಿ, ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಕ್ತ ರಾಜ್ಯದ ಫಲಿತಾಂಶದ ಮೂಲಕ ಜನರಿಗೆ ನಿಜವಾದ ಅಚ್ಛೇ ದಿನ್‌ ದೊರೆತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದರು. ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಗುರುವಾರ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪಂಚ ರಾಜ್ಯ ಫಲಿತಾಂಶದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

Advertisement

ಕಾಂಗ್ರೆಸ್‌ ಮುಕ್ತ ಮಾಡುವ ಮಾತುಗಳನ್ನಾಡಿದ ಮೋದಿಗೆ ಪ್ರಜ್ಞಾವಂತ ಜನ ತಕ್ಕ ಉತ್ತರ ನೀಡಿದ್ದಾರೆ. ಜನಪರ ಕೆಲಸ ಮಾಡದೆ, ಭಾಷಣದ ಮೂಲಕ ಮತದಾರರನ್ನು ಗೆಲ್ಲಬಹುದೆಂದು ಭಾವಿಸಿದ್ದ ಬಿಜೆಪಿಗೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದರು.

ರಾಜಕೀಯ ಲಾಭಕ್ಕೆ ಬಳಕೆ
ರಾಮ ಮಂದಿರ ಮೊದಲಾದ ಧಾರ್ಮಿಕ ವಿಷಯಗಳಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಬಿಜೆಪಿ ಜನರಿಗೆ ಬದುಕಲು ಬೇಕಾದ ಯಾವುದೇ ಕಾರ್ಯಕ್ರಮ ತಂದಿಲ್ಲ. ಜನರ ಪ್ರೀತಿ, ವಿಶ್ವಾಸ ಒಡೆದು ರಾಮಮಂದಿರ ನಿರ್ಮಿಸುವ ಹೆಸರಿನಲ್ಲಿ ಬಿಜೆಪಿ ರಾಜಕೀಯ ಲಾಭ ಮಾತ್ರ ಬಯಸಿದೆ. ಕಾಂಗ್ರೆಸ್‌ ಸರ್ವ ಧರ್ಮವೂ ಒಪ್ಪುವ ರಾಮನನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ಥಾಪಿಸುತ್ತದೆ ಹೊರತು ದ್ವೇಷದಿಂದ ಅಲ್ಲ. ಧಾರ್ಮಿಕ ನಂಬಿಕೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಪಚಾರ ಎಂದು ಆರೋಪಿಸಿದರು.

ಮೋದಿ ಸರಕಾರ ಬಂದ ಬಳಿಕ ಆದಾನಿ, ಅಂಬಾನಿಗಳಿಗೆ ಬದಲಾವಣೆ ಸಿಕ್ಕಿದೆ. ಇದು ಬಂಡವಾಳಶಾಹಿಗಳ ಬದಲಾವಣೆ. ರಫೇಲ್‌ ಯುದ್ಧ ವಿಮಾನ ಖರೀದಿ ಮೂಲಕ ಅಂಬಾನಿ ಮೇಲಿನ ಪ್ರೀತಿ ಜಗಜ್ಜಾಹೀರಾಗಿದೆ ಎಂದು ಮಿಥುನ್‌ ರೈ ಟೀಕಿಸಿದರು.

ಪ್ರಜಾತಾಂತ್ರಿಕ ಗೆಲುವು
ಪಂಚ ರಾಜ್ಯಗಳ ಫಲಿತಾಂಶ ಪ್ರಜಾತಾಂತ್ರಿಕ ಗೆಲುವು. ಕಾಂಗ್ರೆಸ್‌ ನಿರ್ನಾಮ ಆಗುತ್ತದೆ ಎನ್ನುವ ಭಾಷಣ ಮಾಡುತ್ತಿದ್ದ ಮೋದಿ ಅವರಿಗೆ ಜನರು ಉತ್ತರ ಕೊಟ್ಟಿದ್ದಾರೆ. ಬಿಜೆಪಿ ಸಮರ್ಥಕರಾಗಿದ್ದ ಸ್ವಾಮೀಜಿಯೊಬ್ಬರು ಬಹಿರಂಗ ಹೇಳಿಕೆ ನೀಡಿ, ಹಿಂದೂಗಳ ವಿಭಜನೆ, ರಾಮ ಮಂದಿರ ಹೆಸರಿನಲ್ಲಿ ಅಧಿಕಾರ ಪಡೆದು ಮೋಸ ಮಾಡಿದಕ್ಕೆ ರಾಮನ ಶಾಪ, ಅಮಾಯಕ ಗೋವು ಅನ್ನು ಬಳಸಿ ರಾಜಕೀಯ ಮಾಡಿದಕ್ಕೆ ಗೋವಿನ ಶಾಪ ಬಿಜೆಪಿಗೆ ತಟ್ಟಲಿದೆ ಎಂದಿದ್ದರು. ಅದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

Advertisement

ಪರಿಶಿಷ್ಟ ಜಾತಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ, ಕಾಂಗ್ರೆಸ್‌ ಮುಖಂಡರಾದ ಎಸ್‌. ಸಂಶುದ್ದಿನ್‌, ನಂದರಾಜ ಸಂಕೇಶ, ಶ್ರೀಹರಿ ಕುಕ್ಕುಡೇಲು, ನ.ಪಂ. ಸದಸ್ಯರಾದ ಶ್ರೀಲತಾ, ಮುಸ್ತಾಫ ಕೆ.ಎಂ., ತಾ.ಪಂ. ಮಾಜಿ ಸದಸ್ಯ ಅನಿಲ್‌ ರೈ ಬೆಳ್ಳಾರೆ, ಸುಧೀರ್‌ ಕುಮಾರ್‌ ರೈ ಮೇನಾಲ, ಸತ್ಯಕುಮಾರ್‌ ಅಡಿಂಜೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಿಕ್‌ ಕೊಕ್ಕೊ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

ಎಷ್ಟು ಗೋದಾನ ಮಾಡಿದ್ದಾರೆ?
ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಹಾಗೂ ಎಸ್‌. ಅಂಗಾರ ಅವರು ಎಷ್ಟು ಗೋ ದಾನ ಮಾಡಿದ್ದಾರೆ? ಎಷ್ಟು ಗೋವುಗಳನ್ನು ಸಾಕುತ್ತಿದ್ದಾರೆ? ನನ್ನ ಮನೆಯಲ್ಲಿ 60 ಗೋವುಗಳನ್ನು ಸಾಕಿದ್ದೇನೆ. ವರ್ಷದಲ್ಲಿ 150 ಗೋದಾನ ಮಾಡುತ್ತೇನೆ. ತಾಕತ್ತಿದ್ದರೆ ಬಿಜೆಪಿಯವರು ಸಾಕುವ ಗೋವು, ದಾನದ ವಿವರ ನೀಡಲಿ ಎಂದು ಮಿಥುನ್‌ ರೈ ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next