Advertisement

ಸುಳ್ಯ ನ.ಪಂ.: ಹೊಸ ಯೋಜನೆಯಿಲ್ಲದ ಆಯವ್ಯಯ

02:50 PM Feb 15, 2018 | Team Udayavani |

ಸುಳ್ಯ  : ನಗರ ಪಂಚಾಯತ್‌ 2018-19ನೇ ಸಾಲಿನಲ್ಲಿ 10.81 ಕೋಟಿ ರೂ. ಗಾತ್ರದ 59.24 ಲಕ್ಷ ರೂ. ಮಿಗತೆ ಬಜೆಟ್‌ ಮಂಡಿಸಿದೆ. ಯಾವುದೇ ಹೊಸ ಯೋಜನೆಗಳನ್ನು ಉಲ್ಲೇಖಿಸದೆ, ಕೇವಲ ಆದಾಯ, ಖರ್ಚು ವಿವರವನ್ನು ದಾಖಲಿಸಿದ ಬಜೆಟ್‌ನಿಂದ ಸಭೆ ನಿರಾಶಾದಾಯಕವಾಗಿ ನಡೆಯಿತು. ನಗರ ಪಂಚಾಯತ್‌ ಬಜೆಟ್‌ ಮಂಡನೆ ಪ್ರಯುಕ್ತ ಬುಧವಾರ ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಬಜೆಟ್‌ನಲ್ಲಿ ಹೊಸ ಆರ್ಥಿಕ ವರ್ಷದಲ್ಲಿ ಉದ್ದೇಶಿತ ಯೋಜನೆಗಳಿಗೆ ಇಂತಿಷ್ಟು ಅನುದಾನ ಕಾದಿರಿಸಲಾಗಿದೆ ಎಂಬ ಬಗ್ಗೆ ಕಾಮಗಾರಿಯ ವಿವರ ಸಹಿತ ಉಲ್ಲೇಖೀಸಲಾಗುತ್ತದೆ. ಆದರೆ ಈ ಬಜೆಟಿನಲ್ಲಿ ಆ ಬಗ್ಗೆ ಪ್ರಸ್ತಾಪ ಇರಲಿಲ್ಲ. ಆಯಾ ವಿಭಾಗದಲ್ಲಿ ಇಂತಿಷ್ಟು ಖರ್ಚು, ಆದಾಯ ಸಂಗ್ರಹಣೆ ಎನ್ನುವುದನ್ನು ನಮೂದಿಸಲಾಗಿದೆ. ಬಜೆಟ್‌ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರು ಮಂಡಿಸಿದ ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ದೊರೆಯಲಿಲ್ಲ.

ಅಧ್ಯಕ್ಷೆ ಶೀಲಾವತಿ ಬಜೆಟ್‌ ಮಂಡಿಸಿ, ಮುಂದಿನ ಆರ್ಥಿಕ ಸಾಲಿನಲ್ಲಿ 7.93 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆರಂಭಿಕ ಶುಲ್ಕ ಸೇರಿ ನಿರೀಕ್ಷಿತ ಆದಾಯ 10.81 ಕೋಟಿ ರೂ. ಇದೆ. 9.48 ಕೋ.ರೂ. ಖರ್ಚು ನಿರೀಕ್ಷಿಸಿದ್ದು, 59.24 ಲಕ್ಷ ರೂ. ಮಿಗತೆ ಅಂದಾಜಿಸಲಾಗಿದೆ.

ಬಜೆಟ್‌ ಮಂಡನೆ ಬಳಿಕ ವಿಷಯ ಪ್ರಸ್ತಾಪಿಸಿದ ಕೆ.ಎಂ. ಮುಸ್ತಾಫ, ಇದೊಂದು ಅಭಿವೃದ್ಧಿ ಶೂನ್ಯ ಬಜೆಟ್‌. ಆದಾಯ
ಮತ್ತು ಖರ್ಚಿನ ನಿರೀಕ್ಷೆಯ ಅಂಕಿ-ಅಂಶ ಹೊರತುಪಡಿಸಿ, ನಗರಕ್ಕೆ ಏನು ಕೊಡುಗೆ ನೀಡಲಾಗಿದೆ ಎಂಬ ಬಗ್ಗೆ ಯಾವ ಮಾಹಿತಿ ಪ್ರಕಟಿಸಿಲ್ಲ ಎಂದು ಟೀಕಿಸಿದರು.

ಗೋಕುಲ್‌ದಾಸ್‌ ಮಾತನಾಡಿ, ಕಟ್ಟಡ ತೆರಿಗೆಯಿಂದ ಬರುವ ಆದಾಯ ಕಡಿಮೆ ಇದೆ. ಇದು ಸರ್ವೆ ಆಧಾರದಲ್ಲಿ ರೂಪಿಸಿದ ಅಂಕಿ-ಅಂಶ ಅಲ್ಲ. ಇಲ್ಲಿ ನಿರೀಕ್ಷಿತ ಆದಾಯದಲ್ಲಿ ಶಾಸಕರ ನಿಧಿಯಿಂದ ಬರುವ ಅನುದಾನದ ಬಗ್ಗೆ ಉಲ್ಲೇಖೀಸಲಾಗಿದೆ. ಕಳೆದ ವರ್ಷ ನಗರ ಪಂಚಾಯತ್‌ಗೆ ಶಾಸಕರ ಅನುದಾನ ಎಷ್ಟು ಬಂದಿದೆ ಎಂದು ಪ್ರಶ್ನಿಸಿದರು. ಕಳೆದ ಬಾರಿ ಅನುದಾನ ಬಂದಿಲ್ಲ ಎಂಬ ಎಂಜಿನಿಯರ್‌ ಶಿವಕುಮಾರ್‌ ಉತ್ತರಕ್ಕೆ ಪ್ರತಿಯಾಗಿ, ಅನುದಾನ ಬಂದಿಲ್ಲ ಅಂದರೆ, ಆದಾಯ ನಿರೀಕ್ಷೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

Advertisement

ಆದಾಯ ಕ್ರೋಡೀಕರಣವಿಲ್ಲ
ನೀರಿನ ಶುಲ್ಕದ ಅಂಕಿ ಅಂಶ ಸರಿಯಿಲ್ಲ. ಇಲ್ಲಿ ಎಷ್ಟೋ ವಾಣಿಜ್ಯ ಕಟ್ಟಡಗಳು ಗೃಹ ಸಂಪರ್ಕದ ಮೊತ್ತವನ್ನು ಪಾವತಿಸುತ್ತಿವೆ. ಹಲವು ಕಡೆಗಳಲ್ಲಿ ಪಾವತಿಯೂ ಆಗುತ್ತಿಲ್ಲ. ಇಡೀ ಬಜೆಟ್‌ನಲ್ಲಿ ಆದಾಯ ಕ್ರೋಡೀಕರಣಕ್ಕೆ ಯಾವುದೇ ಪೂರಕ ಕ್ರಮ ಇಲ್ಲ. ಖರ್ಚು ಮಾಡುವುದು ಎಲ್ಲಿಂದ ಎಂದು ಗೋಕುಲ್‌ದಾಸ್‌ ಪ್ರಶ್ನಿಸಿದರು.

ಆಡಳಿತ ಪಕ್ಷದ ಸದಸ್ಯ ಎನ್‌.ಎ. ರಾಮಚಂದ್ರ ಮಾತನಾಡಿ, ನ.ಪಂ.ಗೆ ಆದಾಯಕ್ಕಿಂತ ಖರ್ಚಿನ ಹೊರೆ ಹೆಚ್ಚಾಗಿದೆ. ಅದಕ್ಕೆ ಕಾರಣ ಸರಕಾರದಿಂದ ಸಾಕಷ್ಟು ಅನುದಾನ ಬಾರದಿರುವುದು. ತೆರಿಗೆ ಹೆಚ್ಚಳ ಮಾತ್ರ ನಮಗುಳಿದಿರುವ ಮಾರ್ಗ. ತೆರಿಗೆ ಹೆಚ್ಚಳ ಮಾಡಿದರೆ ಆಕ್ಷೇಪ ಬರುತ್ತದೆ ಎಂದು ಉಲ್ಲೇಖಿಸಿದರು.

ಸದಸ್ಯ ಉಮ್ಮರ್‌ ಮಾತನಾಡಿ, ತೆರಿಗೆ ಹೆಚ್ಚಳ ಮಾಡುವ ಬದಲು, ಸಮರ್ಪಕ ತೆರಿಗೆ ವಸೂಲಾತಿ ನಡೆಯಬೇಕು.
ನಗರದ ಕೆಲವೆಡೆ ನೆಲ ಅಂತಸ್ತಿನ ಕಟ್ಟಡಕ್ಕೆ ತೆರಿಗೆ ವಿಧಿಸುತ್ತಾರೆ. ಅದರ ಮೇಲೆ ಎರಡು ಮೂರು ಅಂತಸ್ತು ಕಟ್ಟಿದ್ದರೂ ತೆರಿಗೆ ಇಲ್ಲ. ನಳ್ಳಿ ಸಂಪರ್ಕಕ್ಕೆ ಅತ್ಯಧಿಕ ದರ ನಿಗದಿಪಡಿಸಿದರೂ, ಅದರಿಂದ ಲಾಭ ಇಲ್ಲದ ಸ್ಥಿತಿ. ಇಂತಹ ಉದಾಹರಣೆ ಸಾಕಷ್ಟಿವೆ. ಆದಾಯ ತೆರಿಗೆ ವಸೂಲಾತಿ ಸಮರ್ಪಕವಾಗಿ ಜಾರಿಯಾದರೆ ತೊಂದರೆ ಬಾರದು ಎಂದರು. ಗೋಪಾಲ ನಡುಬೈಲು ಮಾತನಾಡಿ, ಕುಡಿಯುವ ನೀರು ವಿತರಣೆಗೆ ಸಂಬಂಧಿಸಿ, ಅಲ್ಲಲ್ಲಿ ಪೈಪು ದುರಸ್ತಿಗೆಂದೇ ಲಕ್ಷಾಂತರ ರೂ. ವೆಚ್ಚವಾಗುತ್ತಿದೆ ಎಂದರು. 

ಕ್ಯಾಂಟೀನಿಗೆ ಸರಕಾರ ಅನುದಾನ ನೀಡಲಿ
ಸದಸ್ಯ ರಾಮಚಂದ್ರ ಎನ್‌.ಎ. ಮಾತನಾಡಿ, ನ.ಪಂ. ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ಮೂಲ ಸೌಕರ್ಯ ಒದಗಿಸಲು ನ.ಪಂ. ಹಣ ಭರಿಸಬೇಕಿದೆ. ಅದು ಸರಿಯಲ್ಲ. ಇಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಅದಕ್ಕೆ ಸರಕಾರವೇ ನೇರವಾಗಿ ಹಣ ಬಿಡುಗಡೆ ಮಾಡಬೇಕು ಹೊರತು ನ.ಪಂ.ನಿಂದ ಬಳಸಿಕೊಳ್ಳಬಾರದು. ಈ ಕುರಿತು ಸಭೆಯಲ್ಲಿ ತೀರ್ಮಾನಿಸಿ ಸರಕಾರಕ್ಕೆ ಕಳುಹಿಸಬೇಕು ಎಂದರು.

ಗುತ್ತಿಗೆದಾರರಿಗೆ ಲಾಭ
ಆಯವ್ಯಯದಲ್ಲಿ ನಗರಸಭೆ ಸದಸ್ಯರ ವಾರ್ಡ್‌ಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಬಗ್ಗೆ
ಉಲ್ಲೇಖ ಇಲ್ಲ. ಇದು ಕಾಂಟ್ರಾಕ್ಟ್ದಾರರ ಪರವಾಗಿರುವ ಬಜೆಟ್‌ ಎಂದು ಕೆಲ ಸದಸ್ಯರು ಟೀಕಿಸಿದರು. ವೇದಿಕೆಯಲ್ಲಿ
ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌ ಕುರುಂಜಿಗುಡ್ಡೆ, ಮುಖ್ಯಾಧಿಕಾರಿ ಗೋಪಾಲ ನಡುಬೈಲು ಉಪಸ್ಥಿತರಿದ್ದರು.

6 ಲಕ್ಷ ರೂ. ಘೋಷಣೆ
ವಾರ್ಡ್‌ ಸದಸ್ಯರಿಗೆ ಅನುದಾನ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಪ್ರತಿ ಸದಸ್ಯರ ವಾರ್ಡ್‌ಗೆ 10 ಲಕ್ಷ ರೂ. ನೀಡಬೇಕು ಎಂದು ಸದಸ್ಯರಾದ ಉಮ್ಮರ್‌, ಮುಸ್ತಾಫ, ಗೋಕುಲ್‌ದಾಸ್‌ ಆಗ್ರಹಿಸಿದರು. ಅಧ್ಯಕ್ಷೆ ಶೀಲಾವತಿ ಮಾಧವ
ಅವರು, ಪ್ರತಿ ಸದಸ್ಯರ ವಾರ್ಡ್‌ಗೆ ತಲಾ 6 ಲಕ್ಷ ರೂ. ನೀಡುವುದಾಗಿ ಘೋಷಿಸಿದರು. ಈ ಅನುದಾನಕ್ಕೆ ಈ ತಿಂಗಳಲ್ಲಿ ಸಭೆ ಕರೆದು ಕ್ರಿಯಾಯೋಜನೆ ರೂಪಿಸುವಂತೆ ಸದಸ್ಯರ ಅಭಿಪ್ರಾಯಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next