Advertisement
ಸುಳ್ಯ ನ.ಪಂ.ವ್ಯಾಪ್ತಿಯಲ್ಲಿರುವ ಸುಳ್ಯ ನಗರದಲ್ಲಿ ಚರಂಡಿ ಸ್ಲ್ಯಾಬ್ ಮುರಿದು, ಚರಂಡಿ ಬಾಯ್ದೆರೆದಿದೆ, ಹೆದ್ದಾರಿ ತಡೆಬೇಲಿಗಳೂ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ನಗರದಲ್ಲಿ ಹಾದು ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿದ್ದರೂ ನಗರದ ನಿರ್ವಹಣೆಗೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬುದು ಎದ್ದು ಕಾಣುವಂತಿದೆ.
ಸುಳ್ಯ ನಗರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಂಡರೂ ಕಾಲ ಎಲ್ಲ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತದೆ. ನಗರದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಇದೆ ಎನ್ನುವುದು ಜೋರು ಮಳೆ ಬಂದರೆ ಕಾಣಬಹುದಾಗಿದೆ. ನಗರದ ಹೆದ್ದಾರಿ ಬದಿಗಳಲ್ಲಿ ಅಳವಡಿಸಲಾಗಿರುವ ಚರಂಡಿ ಸ್ಲ್ಯಾಬ್‌ಗಳು, ಚರಂಡಿ ಸರಳುಗಳು ಮುರಿದು ಬಿದ್ದು ಚರಂಡಿ ಬಾಯ್ದೆರೆದಿದ್ದು ಪಾದಚಾರಿಗಳು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವನ್ನು ಎಳೆದುಕೊಳ್ಳಬೇಕಾದ ಸ್ಥಿತಿಯಿದೆ. ಗಾಂಧಿನಗರ, ಶ್ರೀರಾಮ್‌ಪೇಟೆ, ಖಾಸಗಿ ಬಸ್ ನಿಲ್ದಾಣ, ಜ್ಯೋತಿ ಸರ್ಕಲ್ ಬಳಿ ಸೇರಿದಂತೆ ನಗರದ ವಿವಿಧೆಡೆ ಚರಂಡಿ ಸ್ಲ್ಯಾಬ್‌ಗಳು ಮುರಿದು ಅಪಾಯಕಾರಿಯಾಗಿದೆ.
Related Articles
ಹೆದ್ದಾರಿಯ 2 ಬದಿಗಳಲ್ಲಿ ಹಲವು ವರ್ಷಗಳ ಹಿಂದೆ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದ್ದು, ಇದೀಗ ಕಬ್ಬಿಣದ ತಡೆಬೇಲಿ ಶಿಥಿಲಗೊಂಡು ಮುರಿದಿದ್ದು, ಬಾಗಿಕೊಂಡಿದೆ. ಸ್ವಲ್ಪ ಎಡವಿದರೂ ಕಬ್ಬಿಣ ಮೈಗೆ ತಾಗಿ ಗಾಯಗೊಳ್ಳುವ ಸ್ಥಿತಿಯಿದೆ.
Advertisement
ಹೆದ್ದಾರಿ ಹೊಂಡ-ಗುಂಡಿಮಯ ಸುಳ್ಯ ನಗರದ ಸುಗಮ ಸಂಚಾರಕ್ಕೂ ಇಲ್ಲಿನ ಕೆಲವು ಸಮಸ್ಯೆಗಳು ಅಡ್ಡಿಯಾಗಿದೆ. ಪೊಲೀಸ್ ಠಾಣಾ ಸಮೀಪದ ಜಂಕ್ಷನ್ ಹಾಗೂ ಆಲೆಟ್ಟಿ ಕ್ರಾಸ್ ಜಂಕ್ಷನ್‌ನಲ್ಲಿ ಮಾಣಿ- ಮೈಸೂರು ಹೆದ್ದಾರಿಯ ಹೊಂಡ- ಗುಂಡಿಗಳು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿವೆ. ಇಲ್ಲಿನ ಹೊಂಡಕ್ಕೆ ತಾತ್ಕಾಲಿಕ ದುರಸ್ತಿ ಮಾತ್ರವೇ ಮಾಡ ಲಾಗುತ್ತಿದ್ದು, ಮತ್ತೆ ಮತ್ತೆ ಹೊಂಡ ನಿರ್ಮಾಣವಾಗುತ್ತಿದೆ ಎಂಬುದು ಆರೋಪ.
ಸುಳ್ಯ ನಗರದಲ್ಲಿನ ಈ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತ, ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದಾಗ ಕ್ರಮಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿ ಬಳಿಕದಲ್ಲಿ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಸಮಸ್ಯೆಗಳು ಜೀವಂತವಾಗಿರಲು ಕಾರಣ. ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತದ ಸಭೆಗಳಲ್ಲಿ ಪ್ರಸ್ತಾವಗೊಳ್ಳುತ್ತಿದ್ದರೂ ಇನ್ನೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗದೇ ಇರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪರಿಹಾರಕ್ಕೆ ಇನ್ನಾದರೂ ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದಾರೆ. -ದಯಾನಂದ ಕಲ್ನಾರ್