Advertisement

ಪರ್ಯಾಯ ರಸ್ತೆ ನಿರ್ಲಕ್ಷ್ಯದಿಂದ ಸಂಚಾರ ಬಂದ್‌ ಭಾಗ್ಯ!

09:26 AM Aug 24, 2018 | |

ಸುಳ್ಯ: ಸಂಪಾಜೆ-ಮಡಿಕೇರಿ ಹೆದ್ದಾರಿ ಜೋಡುಪಾಲ-ಮದೆನಾಡು ತನಕ ಕುಸಿದಿದೆ. ಸುಧಾರಣೆಗೆ ಕೆಲವು ತಿಂಗಳು ಕಾಯಬೇಕು. ಓಡಾಟ ಹೇಗೆ ಎಂಬ ಪ್ರಶ್ನೆಗೆ ನಾಲ್ಕು ರಸ್ತೆಗಳು ಉತ್ತರವಾಗಲು ತವಕಿಸುತ್ತಿವೆ! ಆದರೆ ಪರ್ಯಾಯ ರಸ್ತೆಗಳ ಅಭಿವೃದ್ಧಿ ಕುರಿತ ನಿರ್ಲಕ್ಷ್ಯದಿಂದಾಗಿ ಇವು ಸಂಚಾರ ಯೋಗ್ಯ ಸ್ಥಿತಿಯಲ್ಲಿಲ್ಲ. ಅರಣ್ಯ ವ್ಯಾಪ್ತಿ, ಕಚ್ಚಾ ರಸ್ತೆ, ಸೇತುವೆಗಳ ಆವಶ್ಯಕತೆ ಇವು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆ.

Advertisement

ಮಡಿಕೇರಿಗೆ ಮೂರು ರಸ್ತೆ
ಸರಕಾರ ಮನಸ್ಸು ಮಾಡಿದರೆ ಸುಳ್ಯದಿಂದ ಮಡಿಕೇರಿಗೆ ಇನ್ನೂ 3 ರಸ್ತೆಗಳು ಇವೆ. ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಮಂಗಳೂರು- ಮಡಿಕೇರಿ- ಮೈಸೂರು- ಬೆಂಗಳೂರು ಸಂಪರ್ಕಕ್ಕೆ ಅನುಕೂಲ.

ಯಾವುವು?
ಸುಳ್ಯ- ಅರಂತೋಡು- ಸಂಪಾಜೆ- ಕಲ್ಲು ಗುಂಡಿ- ಬಾಲೆಂಬಿ-  ದಬ್ಬಡ್ಕ- ಕೊಪ್ಪಟ್ಟಿ- ಚೆಟ್ಟಿ ಮಾನಿ- ಭಾಗಮಂಡಲ- ಮಡಿಕೇರಿ ಒಂದನೆಯ ರಸ್ತೆ. ಇದರಲ್ಲಿ ಸುಳ್ಯದಿಂದ ಮಡಿಕೇರಿಗೆ 72 ಕಿ.ಮೀ., ತಗಲುವ ಸಮಯ ಒಂದೂವರೆ ತಾಸು. ದಬ್ಬಡ್ಕ ತನಕ ಡಾಮರು ಇದೆ. ಸಣ್ಣ 2 ಸೇತುವೆ ಆಗ ಬೇಕು. ಬೇಸಗೆಯಲ್ಲಿ ದಬ್ಬಡ್ಕ ತನಕ ಬಸ್‌ ಸಂಚಾರ  ವಿದೆ. 1 ಕಿ.ಮೀ. ದೂರ ಅರಣ್ಯ ಇಲಾಖೆಯ ತಕರಾರು ಇದ್ದು, ಪರಿ ಹಾರ ವಾದರೆ ಮಡಿಕೇರಿ ಸಂಪರ್ಕಕ್ಕೆ ಅತಿ ಸನಿಹ.

ಎರಡನೆಯದು ಅರಂತೋಡು- ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಲ್ಮಕಾರು- ಗಾಳಿ ಬೀಡು ರಸ್ತೆ. ಇದರಲ್ಲಿ ಸುಬ್ರಹ್ಮಣ್ಯದಿಂದ ಕಲ್ಮ ಕಾರು- ಗಾಳಿಬೀಡು ಕಚ್ಚಾ ರಸ್ತೆ ಇದ್ದು, ಮಡಿಕೇರಿ ಚೆಕ್‌ಪೋಸ್ಟ್‌ಗೆ ಜೋಡಣೆ ಆಗುತ್ತದೆ. ಇದು ಅಭಿವೃದ್ಧಿ ಯಾದರೆ ಮಡಿಕೇರಿಗೆ 45 ಕಿ.ಮೀ., ಮುಕ್ಕಾಲು ತಾಸಿನಲ್ಲಿ ತಲುಪಬಹುದು. ಸ್ಥಳೀಯರು ಹೇಳುವ ಪ್ರಕಾರ 1972ರಲ್ಲಿಯೇ ಈ ರಸ್ತೆಗೆ ಶಿಲಾನ್ಯಾಸ ಆಗಿತ್ತು. ಇದು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಅದು ಒಪ್ಪಿಗೆ ನೀಡಿದರೆ ಮಾತ್ರ ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ. ಕಾನೂನು ತಿದ್ದುಪಡಿ ಮಾಡಿದಲ್ಲಿ ಬಳಕೆಗೆ ಸಿಗಲಿದೆ.

ಸುಳ್ಯ- ಆಲೆಟ್ಟಿ- ಪಾಣತ್ತೂರು- ಕರಿಕೆ- ಭಾಗ ಮಂಡಲ- ಮಡಿಕೇರಿ ರಸ್ತೆ ಮೂರನೆಯದು. ಇಲ್ಲಿ ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಮಿನಿ ಬಸ್‌ ಓಡಾಟ ಆರಂಭಿಸಿದೆ. 98 ಕಿ.ಮೀ. ದೂರದ ಈ ರಸ್ತೆಯಲ್ಲಿ ಕೊಡಗಿನ ಭಾಗ ಅಭಿವೃದ್ಧಿಗೆ ಬಾಕಿ ಇದೆ. ಈಗ ಅಲ್ಲಲ್ಲಿ ಗುಡ್ಡ ಜರಿದಿದ್ದು, ಐದಾರು ಜೆಸಿಬಿ ಯಂತ್ರ ಕೆಲಸ ಮಾಡುತ್ತಿವೆ. ಇದು ಅಭಿವೃದ್ಧಿಗೊಂಡು ವಿಸ್ತರಣೆ ಆದರೆ 3 ತಾಸಿನಲ್ಲಿ ಮಡಿಕೇರಿ ತಲುಪಬಹುದು. 

Advertisement

ಇನ್ನೂ ಒಂದು ಮಾರ್ಗವಿದೆ
ಇವು ಮೂರಲ್ಲದೆ, ಅರಂತೋಡು- ತೊಡಿಕಾನ- ಪಟ್ಟಿ- ಭಾಗಮಂಡಲ- ಮಡಿಕೇರಿ ಎಂಬ ಇನ್ನೂ ಒಂದು ಮಾರ್ಗವಿದೆ. ಇದರಲ್ಲಿ ಸುಳ್ಯದಿಂದ ಭಾಗಮಂಡಲಕ್ಕೆ ಕೇವಲ 36 ಕಿ.ಮೀ. ತೊಡಿಕಾನ ಗ್ರಾಮದ ಕಟ್ಟೆಹೊಳೆ ತನಕ ಡಾಮರು ಹಾಕಲಾಗಿದೆ. ಇನ್ನು 9 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಿದೆ. ಇದಾದರೆ ಪೌರಾಣಿಕ ದೇವಾಲಯಗಳಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಭಾಗಮಂಡಲ, ತಲಕಾವೇರಿ ಕ್ಷೇತ್ರಗಳಿಗೆ ಸಂಪರ್ಕ ಸಾಧ್ಯ.

ಹಲವು ಗ್ರಾಮಗಳಿಗಿಲ್ಲ  ಸಂಪರ್ಕ
ಮಡಿಕೇರಿ-ಸಂಪಾಜೆ ಘಾಟಿ ರಸ್ತೆ ಕುಸಿದ ಬೆನ್ನಲ್ಲೇ ಕೊಡಗು ಮತ್ತು ದ.ಕ. ಜಿಲ್ಲೆಯ ಹಲವು ಗ್ರಾಮಗಳು ದ್ವೀಪವಾಗಿವೆ. ಸುಳ್ಯ ಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಾರು ಮಂದಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಜೋಡುಪಾಲ, ಕೊಡಗು ಸಂಪಾಜೆ, ಚೆಂಬು, ಪೆರಾಜೆ ಗ್ರಾಮಗಳ 7 ಸಾವಿರಕ್ಕೂ ಮಿಕ್ಕಿ ಮಂದಿಗೆ ತಾಲೂಕು ಕೇಂದ್ರ ಮಡಿಕೇರಿಗೆ ತೆರಳಲು ಆಗುತ್ತಿಲ್ಲ.

ಬಹುತೇಕ ಪೂರ್ಣ
ಸುಳ್ಯ- ಕರಿಕೆ- ಮಡಿಕೇರಿ, ಅರಂತೋಡು- ಸುಬ್ರಹ್ಮಣ್ಯ- ಕಲ್ಮಕಾರು- ಗಾಳಿಬೀಡು ರಸ್ತೆಯಲ್ಲಿ  ದ.ಕ. ಜಿಲ್ಲೆಯ ವ್ಯಾಪ್ತಿಗೆ ಸೇರಿದ ರಸ್ತೆಗಳ ಅಭಿವೃದ್ಧಿ ಆಗಿದೆ. ಕೊಡಗು ವ್ಯಾಪ್ತಿಯಲ್ಲಿ  ಅಭಿವೃದ್ಧಿ ಆಗಬೇಕಿದೆ. ಸುಳ್ಯ- ದಬ್ಬಡ್ಕ- ಮಡಿಕೇರಿ ರಸ್ತೆಯಲ್ಲಿ 1 ಕಿ.ಮೀ. ಡಾಮರಿಗೆ ಬಾಕಿ ಇದೆ. ಅಲ್ಲಿ  ಅರಣ್ಯ ಭಾಗ ಬರುವುದರಿಂದ ಸಮಸ್ಯೆ ಉಂಟಾಗಿದೆ.
ಹನುಮಂತರಾಯಪ್ಪ , ಜಿ.ಪಂ. ಎಡಬ್ಲ್ಯೂಡಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next