Advertisement

ಸುಳ್ಯ: ಸರಕಾರಿ ಹಾಸ್ಟೆಲ್‌ಗ‌ಳಿಗೆ ಜಿ.ಪಂ. ಅಧ್ಯಕ್ಷೆ ದಿಢೀರ್‌ ಭೇಟಿ

05:05 AM Jan 30, 2019 | |

ಸುಳ್ಯ : ನಗರದ ಎರಡು ಸರಕಾರಿ ಹಾಸ್ಟೆಲ್‌ಗ‌ಳಿಗೆ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಂಗಳವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬಂದಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕುರುಂಜಿಬಾಗ್‌ ಮೆಟ್ರಿಕ್‌ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಸಮಸ್ಯೆಗಳ ಕುರಿತು ಸಿಬಂದಿಯನ್ನು ತರಾ ಟೆಗೆ ತೆಗೆದುಕೊಂಡರು. ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕೆಲ ದಿನಗಳ ಹಿಂದೆ ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ಇಲ್ಲಿ ಲೋಡ್‌ಗಟ್ಟಲೆ ಅಕ್ಕಿ ಇತ್ತು. ಈಗ ಇಲ್ಲ. ಈ ಅಕ್ಕಿ ಏನಾಗಿದೆ ಎಂದು ಪ್ರಶ್ನಿಸಿದರು. ಅಡುಗೆ ಸಿಬಂದಿ, ಪ್ರಭಾರ ವಾರ್ಡನ್‌ ಬಳಿ ವಿಚಾರಿಸಿದರು. ಹಾಳಾದ ಅಕ್ಕಿಯನ್ನು ಪ್ರತ್ಯೇಕಿಸಿ ಉಳಿದವನ್ನು ಸಂಗ್ರಹಿಸಿಡಲಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷೆ, ಇಂತಹ ಉತ್ತರ ಬೇಡ ಎಂದರು.

ಜಾಗ ಖಾಲಿ ಮಾಡಿ..!
ಜಿ.ಪಂ. ಅಧ್ಯಕ್ಷರು ಪರಿಶೀಲನೆಗೆ ಆಗಮಿಸಿದ ಸಂದರ್ಭ ಹಾಸ್ಟೆಲ್‌ ಸಿಬಂದಿ ಸಮರ್ಪಕ ಸ್ಪಂದನೆ ನೀಡಿಲ್ಲ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಹರೀಶ್‌ ಕಂಜಿಪಿಲಿ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಸಮಾಧಾನ ವ್ಯಕ್ತಪಡಿಸಿದರು.

ಸಿಬಂದಿ ವಿರುದ್ಧ ಗರಂ ಆದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್‌, ಜವಾಬ್ದಾರಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ. ಜನಪ್ರತಿನಿಧಿಗಳು ಬಂದು ಸಿಬಂದಿಯನ್ನು ಕರೆಯಬೇಕೆ? ನೀವಾಗಿ ಬಂದು ಸ್ಪಂದಿಸಲು ಸಾಧ್ಯವಿಲ್ಲವೆ? ಎಂದು ತರಾಟೆಗೆ ತೆಗೆದುಕೊಂಡರು.

ಆರೋಪ-ಪ್ರತ್ಯಾರೋಪ
ವಿದ್ಯಾರ್ಥಿನಿಯರಲ್ಲಿ ಹಾಸ್ಟೆಲ್‌ ವ್ಯವಸ್ಥೆ ಬಗ್ಗೆ ಅಧ್ಯಕ್ಷೆ ಮೀನಾಕ್ಷಿ ಪ್ರಶ್ನಿಸಿದ ಸಂದರ್ಭ, ಇಲ್ಲಿ ರಾತ್ರಿ ಕರೆಂಟ್ ಹೋದರೆ ಕ್ಯಾಂಡಲ್‌ ಬೆಳಕು ಗತಿ. ಬೆಳಗ್ಗೆ ತಿಂಡಿ ಚೆನ್ನಾಗಿರಲ್ಲ, ದೋಸೆ ಹುಳಿ ಇರುತ್ತೆ ಎಂಬಿ ತ್ಯಾದಿ ಸಮಸ್ಯೆಗಳನ್ನು ಮುಂದಿಟ್ಟರು. ಈ ಬಗ್ಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖಾಧಿಕಾರಿ, ಜನರೇಟ್ ವ್ಯವಸ್ಥೆ ಸರಿಪಡಿಸಿದ್ದೇವೆ ಎಂದರು. ಮೆನು ಪ್ರಕಾರ ಊಟ-ಉಪಾಹಾರ ನೀಡಲಾಗುತ್ತದೆ ಎಂದು ಅಡುಗೆ ಸಿಬಂದಿ ಉತ್ತರಿಸಿದರು. ಅನ್ನದಲ್ಲಿ ಕಲ್ಲು ಇರುತ್ತೆ ಎಂದು ಮಕ್ಕಳು ಅಳಲು ತೋಡಿಕೊಂಡರು. ಮಕ್ಕಳು ನಮ್ಮ ಮಾತನ್ನು ಕೇಳುತ್ತಿಲ್ಲ. ತಿಂಡಿಯನ್ನು ತಿನ್ನದೆ ಬಿಸಾಡುತ್ತಾರೆ ಎಂದು ಅಡುಗೆ ಸಿಬಂದಿ ಪ್ರತ್ಯಾರೋಪ ಮಾಡಿದರು.

Advertisement

ಬಳಿಕ ಪುಸ್ತಕ ತರಿಸಿ ಅದನ್ನು ಪರಿಶೀಲಿ ಸಲಾಯಿತು. ಅಕ್ಕಿ ಗುಣಮಟ್ಟ, ಅಡುಗೆ ಕೊಠಡಿ, ಬಳಕೆ ಪ್ರಮಾಣ ಇತ್ಯಾದಿಗಳ ಬಗ್ಗೆ ಜಿ.ಪಂ.ಅಧ್ಯಕ್ಷೆ ಪರಿಶೀಲನೆ ನಡೆಸಿದರು. ನಾಲ್ಕೈದು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ಒಮ್ಮೆಲೇ ಪೂರೈಕೆ ಆಗುವ ಕಾರಣ ಕೆಲವೊಮ್ಮೆ ಹಾಳಾಗುತ್ತಿರುವ ಬಗ್ಗೆ ಸಿಬಂದಿಯಿಂದ ಮಾಹಿತಿ ಪಡೆದ ಜಿ.ಪಂ.ಅಧ್ಯಕ್ಷರು, ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾವಿಸುದಾಗಿ ಹೇಳಿದರು.

ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ, ತಾ.ಪಂ. ಇಒ ಮಧುಕುಮಾರ್‌, ಹನು ಮಂತರಾಯಪ್ಪ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next