Advertisement

ಉದ್ಘಾಟನೆಗೆ ಸಿದ್ಧಗೊಳ್ಳದ ಇಂದಿರಾ ಕ್ಯಾಂಟೀನ್‌

05:21 AM Jan 15, 2019 | Team Udayavani |

ಸುಳ್ಯ : ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಕಾಮಗಾರಿ ಮೂರು ತಿಂಗಳ ಹಿಂದೆಯೇ ಅಂತಿಮ ಹಂತಕ್ಕೆ ತಲುಪಿದ್ದರೂ, ಕಾರ್ಯಾರಂಭದ ಲಕ್ಷಣ ಗೋಚರಿಸುತ್ತಿಲ್ಲ.

Advertisement

ಕಟ್ಟಡದ ಜೋಡಣೆ ಕಾರ್ಯವಾಗಿದೆ. ಇನ್ನೂ ಅಂತಿಮ ಹಂತದ ಕಾಮಗಾರಿ ಬಾಕಿ ಇದೆ. ಅದು ಯಾವಾಗ ಪೂರ್ಣಗೊಳ್ಳುವುದು, ಉದ್ಘಾಟನೆಗೊಳ್ಳಲಿದೆ ಎನ್ನುವ ಬಗ್ಗೆ ಯಾವ ಇಲಾಖೆಗಳಿಗೂ ಮಾಹಿತಿ ಇಲ್ಲ.

ಚುನಾವಣೆ ಅಡ್ಡಿ!
ಮಿನಿ ವಿಧಾನಸೌಧದ ಹಿಂಭಾಗದಲ್ಲಿ 5 ಸೆಂಟ್ಸ್‌ ಸ್ಥಳದಲ್ಲಿ 2017ರ ಎಪ್ರಿಲ್‌ ತಿಂಗಳಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ನೆಲ ಸಮತಟ್ಟು, ಅಡಿಪಾಯ ಕಾಮಗಾರಿ ಪೂರ್ಣಗೊಂಡ ವೇಳೆ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿತ್ತು. ನಾಲ್ಕು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಹೊಸ ಸರಕಾರ ರಚಿಸಿ ನಾಲ್ಕು ತಿಂಗಳ ಅನಂತರ ಕಾಮಗಾರಿ ಮರು ಆರಂಭಗೊಂಡಿತ್ತು.

ರೆಡಿಮೇಡ್‌ ಕಟ್ಟಡ
ತಳಪಾಯ ಕಾಮಗಾರಿಯೊಂದನ್ನು ಹೊರತುಪಡಿಸಿ ಗೋಡೆ, ಛಾವಣಿ ಎಲ್ಲವೂ ರೆಡಿಮೇಡ್‌ ಮಾದರಿಯದ್ದು. ಹೊರ ಭಾಗದಿಂದ ಪರಿಕರ ತರಲಾಗಿದೆ. ಕ್ರೇನ್‌ ಸಹಾಯದಿಂದ ರೆಡಿಮೇಡ್‌ ಗೋಡೆಗಳನ್ನು ಜೋಡಿಸಲಾಗಿದೆ. ಗೋಡೆ ನಿರ್ಮಾಣ ಪೂರ್ಣಗೊಂಡಿದೆ. ಪ್ರವೇಶ ದ್ವಾರದ ಗೋಡೆ ಕಲ್ಲಿನಲ್ಲಿ ಇಂದಿರಾ ಗಾಂಧಿ ಅವರ ಬೃಹತ್‌ ಗಾತ್ರದ ಭಾವಚಿತ್ರವನ್ನು ಅಚ್ಚು ರೂಪದಲ್ಲಿ ಚಿತ್ರಿಸಲಾಗಿದೆ. ಸೆಪ್ಟಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡು ಡಿಸೆಂಬರ್‌ ಮೊದಲ ವಾರದಲ್ಲಿ ಬಹುತೇಕ ಕಾಮಗಾರಿ ಮುಗಿದಿತ್ತು. ಅದಾದ ಅನಂತರದ ಕಾಮಗಾರಿ ಚುರುಕುಗೊಂಡಿಲ್ಲ.

ಸ್ಥಳೀಯಾಡಳಿತಕ್ಕಿಲ್ಲ ಜವಾಬ್ದಾರಿ..?
ಕ್ಯಾಂಟೀನ್‌ ನಿರ್ಮಾಣ, ನಿರ್ವಹಣೆ ಕಂದಾಯ ಇಲಾಖೆ ಮೂಲಕ ನಡೆಯುತ್ತಿಲ್ಲ. ಕಾಮಗಾರಿ ಪ್ರಗತಿಯಲ್ಲಿರುವುದು ಗಮನಕ್ಕೆ ಬಂದಿದೆ. ನ.ಪಂ. ಕೆಲ ಜವಾಬ್ದಾರಿ ನಿಭಾಯಿಸುತ್ತಿದೆ ಎನ್ನುತ್ತಾರೆ ಪ್ರಭಾರ ತಹಶೀಲ್ದಾರ್‌ ಸಂತೋಷ್‌ ಕುಮಾರ್‌. ಸ್ಥಳ, ಕುಡಿಯುವ ನೀರು, ವೇಸ್ಟೇಜ್‌ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ, ನಿರ್ವಹಣೆ ಹೊಣೆ ನ.ಪಂ.ನದ್ದು. ಕಟ್ಟಡ ನಿರ್ಮಾಣ, ಆಹಾರ ಪೂರೈಕೆ ವಿತರಣೆಗೆ ರಾಜ್ಯಮಟ್ಟದಲ್ಲೇ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಅದರ ಜವಾಬ್ದಾರಿ ವಹಿಸಲಿದೆ. ಕಾಮಗಾರಿ ಪೂರ್ಣ, ಉದ್ಘಾಟನೆಯನ್ನು ನಾವು ನಿರ್ಧರಿಸುವುದಲ್ಲ ಎನ್ನುವುದು ನ.ಪಂ. ಅಧಿಕಾರಿಗಳ ಅಭಿಪ್ರಾಯ.

Advertisement

ಊಟ-ಉಪಹಾರ
ಇಂದಿರಾ ಕ್ಯಾಂಟಿನ್‌ನಲ್ಲಿ 10 ರೂ.ಗೆ ಊಟ, 5 ರೂ.ಗೆ ತಿಂಡಿ ನೀಡುವ ವ್ಯವಸ್ಥೆ ಇದೆ. ಸುತ್ತೋಲೆ ಪ್ರಕಾರ, ಬೆಳಗ್ಗೆ ಉಪಾಹಾರ, ಇಡ್ಲಿ ಸಾಂಬಾರ್‌, ರೈಸ್‌ಬಾತ್‌, ಅವಲಕ್ಕಿ, ಉಪ್ಪಿಟ್ಟು, ಖಾರಾ ಪೊಂಗಲ್‌ (ವಾರದಲ್ಲಿ ಒಂದರಂತೆ) ಮಧ್ಯಾಹ್ನ ಮತ್ತು ರಾತ್ರಿ ಅನ್ನ-ಸಾರು, ಉಪ್ಪಿನಕಾಯಿ, ಹಪ್ಪಳ, ರವಿವಾರ ಬಿಸಿಬೇಳೆ ಬಾತ್‌, ತರಕಾರಿ, ಅನ್ನ, ಪುಳಿಯೊಗರೆ (ವಾರದಲ್ಲಿ ಒಂದು ದಿನ). ಇಲ್ಲಿಗೆ ಕೇಂದ್ರೀಕೃತ ಅಡುಗೆ ಮನೆ ಮೂಲಕ ಆಹಾರ ಪೂರೈಸಬೇಕಿದೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next