ಸುಳ್ಯ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪ್ರಾಥಮಿಕ ಸಹಕಾರಿ ಸಂಘಗಳ ಅಧ್ಯಕ್ಷರ
ಮತ್ತು ಕಾರ್ಯದರ್ಶಿಗಳೊಂದಿಗೆ ಪಡಿತರ ಸಮಸ್ಯೆ ಕುರಿತಾದ ಸಭೆ ಬುಧವಾರ ಸುಳ್ಯ ತಾಲೂಕು ಕಚೇರಿಯಲ್ಲಿ ಜರಗಿತು.
ಮಂಗಳೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಜೆ.ಸಿ. ಜಯಪ್ಪ ಮಾತನಾಡಿ, ಪಡಿತರ ವಿತರಣೆಗೆ ಸಂಬಂಧಿಸಿ ಡಿಸೆಂಬರ್ ಅಂತ್ಯವರೆಗೆ ಪ್ರಸ್ತುತ ಇರುವ ವಿಧಾನವನ್ನೇ ಮುಂದುವರಿಸುವಂತೆ ಹಾಗೂ ಗುಣ ಮಟ್ಟದ ಪಡಿತರ ವಿತರಿಸುವಂತೆ ಸೂಚನೆ ನೀಡಿದರು.
ಪಡಿತರ ಅಂಗಡಿಗಳಲ್ಲಿ ಹೊಸದಾಗಿ ಪಿಒಎಸ್ ಯಂತ್ರ ಅಳವಡಿಸಲು ನೆಟ್ ವರ್ಕ್, ವಿದ್ಯುತ್, ಸಿಬಂದಿ ಕೊರತೆ, ಸಿಬಂದಿ ದಕ್ಷತೆಯಂತಹ ಸಮಸ್ಯೆಗಳಿವೆ. ಅಲ್ಲದೇ ಕೆಲವು ಪಡಿತರ ಅಂಗಡಿ ವ್ಯಾಪ್ತಿಯಲ್ಲಿ ಕಾರ್ಡ್‌ದಾರರ ಸಂಖ್ಯೆ ಕಡಿಮೆಯಿರುವುದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಲಾಭವಿಲ್ಲ. ಹೀಗಾಗಿ ಹೆಚ್ಚು ಸಿಬಂದಿಗಳನ್ನು ನೇಮಿಸುವುದು ಕಷ್ಟಸಾಧ್ಯ ಎಂದು ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಮಸ್ಯೆಯನ್ನು ತೋಡಿಕೊಂಡರು. ಸಭೆಯಲ್ಲಿ ಆಹಾರ ಇಲಾಖೆಯ ಜಿಲ್ಲಾ ನಿಯೋಜಕರಾದ ನವೀನ್ ಭಟ್, ತಾಲೂಕು ನಿರೀಕ್ಷಕ ಶಂಕರ ಉಪಸ್ಥಿತರಿದ್ದರು.