ಸುಳ್ಯ: ಮೊದಲ ಬಾರಿಗೆ 100 ರೂಪಾಯಿಗೆ ತಲುಪಿದ್ದ ಹಸಿ ಕೊಕ್ಕೋ ಧಾರಣೆ ಇದೀಗ ಕೆ.ಜೆ. 130 ರೂ.ಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೋ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕೊಕ್ಕೋ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇತ್ತು. 2-3 ವಾರದ ಹಿಂದೆ ಹಸಿ ಕೊಕ್ಕೋ ಬೀಜ ಕೆಜಿಗೆ 100 ರೂ.ಗೆ ತಲುಪಿತ್ತು. ಬಳಿಕ 120 ರೂ. ವರೆಗೆ ಕ್ಯಾಂಪ್ಕೋ ಸಂಸ್ಥೆ ಖರೀದಿಸಿತ್ತು.
ಇದೀಗ ಕ್ಯಾಂಪ್ಕೋ ಹಸಿ ಕೊಕ್ಕೋವನ್ನು ಕೆ.ಜಿಗೆ 130 ರೂಪಾಯಿಂತೆ ಖರೀದಿ ಮಾಡುತ್ತಿದೆ. ಇದೇಸಂದರ್ಭದಲ್ಲಿ ಒಣ ಕೊಕ್ಕೋ ಕೆ.ಜಿಗೆ 425ರಂತೆ ಕ್ಯಾಂಪ್ಕೋ ಸಂಸ್ಥೆ ಖರೀದಿ ಮಾಡುತ್ತಿದೆ. ಪ್ರಸ್ತುತ ಇರುವ ಬೆಲೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಎಂದು ಎಂದು ಕ್ಯಾಂಪ್ಕೋ ತಿಳಿಸಿದೆ.
ರೈತರಲ್ಲಿಲ್ಲ ಕೊಕ್ಕೋ!
ಪ್ರಸ್ತುತ ಕೊಕ್ಕೋ ಧಾರಣೆ ಮೊದಲ ಬಾರಿಗೆ 100 ರೂ. ದಾಟಿದ್ದರೂ ರೈತರ ತೋಟದಲ್ಲಿ ಕೊಕ್ಕೋ ಇಳುವರಿ ಇಲ್ಲ ಎನ್ನಲಾಗಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ಪ್ರಯೋಜನ ಆಗಿಲ್ಲ ಎಂಬ ಮಾತು ಕೇಳಿಬಂದಿದೆ.
ಕೆಲವು ವರ್ಷಗಳ ಹಿಂದೆ ಅಡಿಕೆ ಹೆಚ್ಚಿನ ಧಾರಣೆ ಆದ ಸಂದರ್ಭದಲ್ಲಿ ಹೆಚ್ಚಿನ ರೈತರು ಅಡಿಕೆ ತೋಟದ ನಡುವೆ ಇದ್ದ ಕೊಕ್ಕೋ ಗಿಡಗಳನ್ನು ಕಡಿದು ಅಡಿಕೆ ಗಿಡ ನಾಟಿ ಮಾಡಿದ್ದರು. ಅಲ್ಲದೆ ಕೊಕ್ಕೋ ಸಾಮಾನ್ಯವಾಗಿ ಸೆಪ್ಟಂಬರ್ -ಡಿಸೆಂಬರ್ ಅವಧಿ ಯಲ್ಲಿ ಹಣ್ಣಾಗುತ್ತಿದ್ದು, ಜನವರಿ- ಫೆಬ್ರವರಿಯಲ್ಲಿ ಹೂವು ಬಿಡುವ ಸಮಯ ವಾಗಿರುವುದರಿಂದ ಇಳುವರಿ ಕಡಿಮೆ ಎನ್ನುತ್ತಾರೆ ಕೃಷಿಕರು.