ನವದೆಹಲಿ:ಛತ್ತೀಸ್ ಗಢ ಸುಖ್ಮಾದಲ್ಲಿ ಕೆಂಪು ಉಗ್ರರು ನಡೆಸಿದ ಪೈಶಾಚಿಕ ದಾಳಿಗೆ 25 ಯೋಧರು ಹುತಾತ್ಮರಾಗಿದ್ದು, ನಕ್ಸಲೀಯರು ಹೇಡಿಗಳಂತೆ ಸಿಆರ್ ಪಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾರೆ. ನಾವು ಈ ಚಾಲೆಂಚ್ ಅನ್ನು ಸ್ವೀಕರಿಸುತ್ತೇವೆ. ಯಾವುದೇ ಕಾರಣಕ್ಕೂ ದಾಳಿ ನಡೆಸಿದವರನ್ನು ಸುಮ್ಮನೆ ಬಿಡೋದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನಕ್ಸಲೀಯರ ದಾಳಿಯಲ್ಲಿ ಹುತಾತ್ಮರಾದ 25 ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದರು. ಬಳಿಕ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದರು.
ಛತ್ತೀಸ್ ಗಢದ ಅಭಿವೃದ್ಧಿ ನಕ್ಸಲೀಯರಿಗೆ ಇಷ್ಟವಿಲ್ಲ. ಹುತಾತ್ಮರ ಬಲಿದಾನ ವ್ಯರ್ಥವಾಗಲ್ಲ. ನಕ್ಸಲ್ ಚಟುವಟಿಕೆ ಮಟ್ಟಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿಂಗ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸುಖ್ಮಾ ದಟ್ಟ ಅರಣ್ಯ ಪ್ರದೇಶ ಹೊಂದಿದ್ದು, ಮಾವೋವಾದಿಗಳ ಅಡಗುತಾಣವಾಗಿದೆ. ಆದಿವಾಸಿಗಳನ್ನು ಮುಂದಿಟ್ಟುಕೊಂಡು ನಕ್ಸಲೀಯರು ಅಭಿವೃದ್ಧಿಗೆ ಕಂಟರಾಗಿದ್ದಾರೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಈ ಭಾಗದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವುದಾಗಲಿ, ಕುಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಮಾವೋವಾದಿಗಳು ಅಡ್ಡಿಪಡಿಸುತ್ತಲೇ ಬಂದಿರುವುದಾಗಿ ಛತ್ತೀಸ್ ಗಢ್ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ದೂರಿದ್ದಾರೆ.