Advertisement

ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಪರಿಹಾರ: ನಕ್ಸಲ್‌ ದಾಳಿ

07:30 AM Mar 15, 2018 | Team Udayavani |

ನೇಮಕಾತಿ ಮಾಡಿ ಎರಡು ತಿಂಗಳ ತರಬೇತಿ ಕೊಟ್ಟು ನೇರವಾಗಿ ನಕ್ಸಲ ಪೀಡಿತ ಪ್ರದೇಶಗಳಿಗೆ ನೇಮಕಗೊಳಿಸುವ ಕ್ರಮವೇ ಇಂದಿಗೂ ನಡೆದುಕೊಂಡು ಬಂದಿದೆ. 

Advertisement

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮತ್ತೂಮ್ಮೆ ರಕ್ತದೋಕುಳಿ ಹರಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ನೆಲಬಾಂಬ್‌ ಸ್ಫೋಟಿಸಿ ಛಿದ್ರಗೊಳಿಸುವ ಮೂಲಕ ಹಾಸನದ ಎಚ್‌.ಎಸ್‌.ಚಂದ್ರು ಸೇರಿ ಒಂಭತ್ತು ಯೋಧರನ್ನು ಕೊಂದು ಹಾಕಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ 25 ಯೋಧರು ಸಾವನ್ನಪ್ಪಿದ ದಾಳಿಯ ಬಳಿಕ ನಡೆದಿರುವ ದೊಡ್ಡ ಪ್ರಮಾಣದ ದಾಳಿಯಿದು.ಭದ್ರತಾ ಪಡೆಗಳು ನಕ್ಸಲರನ್ನು ಕೊಂದು ಹಾಕುವುದು ಮತ್ತು ಇದಕ್ಕೆ ಪ್ರತೀಕಾರವಾಗಿ ನಕ್ಸಲರು ಹೊಂಚು ದಾಳಿ ಮಾಡಿ ಭದ್ರತಾ ಪಡೆಯ ಯೋಧರನ್ನು ಸಾಯಿಸುವುದು ಈ ಭಾಗದಲ್ಲಿ ಆಗಾಗ ನಡೆಯುತ್ತಿದೆ. ಮಂಗಳವಾರ ನಡೆದಿರುವುದೂ ಇದೇ ಮಾದರಿಯ ಪ್ರತೀಕಾರದ ದಾಳಿ. 12 ದಿನದ ಹಿಂದೆಯಷ್ಟೇ ಭದ್ರತಾ ಪಡೆ 10 ನಕ್ಸಲರನ್ನು ಕೊಂದು ಹಾಕಿತ್ತು.ಇದಕ್ಕೆ ನಕ್ಸಲರು ಪ್ರತೀಕಾರ ತೀರಿಸಿಕೊಂಡಿದ್ದಾರೆ. 

ಕೆಂಪು ಉಗ್ರರು ನಡೆಸಿರುವ ಈ ಬರ್ಬರ ದಾಳಿ ಮತ್ತೂಮ್ಮೆ ವ್ಯವಸ್ಥೆಯ ವೈಫ‌ಲ್ಯಕ್ಕೆ ಕೈಗನ್ನಡಿ ಹಿಡಿದಿದೆ. ಸಿಆರ್‌ಪಿಎಫ್ ಯೋಧರಿಗೆ ಇನ್ನೂ ನಕ್ಸಲರನ್ನು ಎದುರಿಸುವ ಪರಿಪೂರ್ಣ ತರಬೇತಿ ನೀಡಲಾಗಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ನೆಲಬಾಂಬ್‌ ಸ್ಫೋಟಿಸಿ ಸಾಯಿಸುವುದು ನಕ್ಸಲರ ಮೆಚ್ಚಿನ ತಂತ್ರ.ಇದಕ್ಕೆದುರಾಗಿ ಸರಕಾರ ಯೋಧರಿಗೆ ನೆಲಬಾಂಬ್‌ ಸ್ಫೋಟಕ ಪ್ರತಿಬಂಧಕ ವಾಹನಗಳನ್ನು ನೀಡಿದೆ. ಮಂಗಳವಾರ ಇದೇ ವಾಹನದಲ್ಲಿ ಯೋಧರು ಪ್ರಯಾಣಿಸುತ್ತಿದ್ದರು. ಆದರೂ ಸ್ಫೋಟದ ಬಿರುಸಿಗೆ ಅವರ ವಾಹನ ಛಿದ್ರಗೊಂಡಿದೆ. ಇದು ವಾಹನದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನೆತ್ತುವಂತೆ ಮಾಡಿದೆ. ವಾಹ ನದ ಸಾಮರ್ಥ್ಯಕ್ಕೂ ಹೆಚ್ಚಿನ ಪ್ರಮಾ ಣದ ಸ್ಫೋಟಕವನ್ನು ಸ್ಫೋಟಿಸಲಾಗಿತ್ತು ಎನ್ನುವುದು ಸಮರ್ಪಕ ಉತ್ತರವಾಗು ವುದಿಲ್ಲ. ನಕ್ಸಲರು ಇಷ್ಟೇ ಸ್ಫೋಟಕ ಇಡುತ್ತಾರೆ ಎನ್ನುವ ಲೆಕ್ಕವೇನಾದರೂ ಕೊಟ್ಟಿದ್ದಾರೆಯೇ? ಹೀಗಿರುವಾಗ ಲಘು ಸ್ಫೋಟವನ್ನು ತಾಳಿಕೊಳ್ಳುವ ವಾಹನ ವನ್ನು ನೀಡುವ ಅಗತ್ಯ ವೇನಿತ್ತು? ಈ ಸ್ಫೋಟಕ ಪ್ರತಿಬಂಧಕ ವಾಹನಗಳೂ ಸಾಕಷ್ಟು ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಯೋಧರ ಬಳಿಯಲ್ಲಿ ಇಲ್ಲ. 2010ರಲ್ಲಿ 350 ವಾಹನಗಳನ್ನು ಖರೀದಿಸಲು ಅನುಮತಿ ಮಂಜೂರಾಗಿತ್ತು. ಆದರೆ ಇಷ್ಟರತನಕ ಸಿಆರ್‌ಪಿಎಫ್ಗೆ ಸಿಕ್ಕಿರುವುದು 122 ವಾಹನಗಳು ಮಾತ್ರ. ಇದರಲ್ಲೂ ಸುಮಾರು ಎರಡು ಡಜನ್‌ ವಾಹನಗಳನ್ನು ಕಾಶ್ಮೀರಕ್ಕೆ ಒಯ್ಯಲಾಗಿದೆ. ಯೋಧರಿಗೆ ನೀಡುವ ಸೌಲಭ್ಯಗಳಲ್ಲಿ ಈ ಮಾದರಿಯ ಬೇಜವಾಬ್ದಾರಿ ಅಕ್ಷಮ್ಯ.  ನಕ್ಸಲ್‌ ಸಾಮ್ರಾಜ್ಯ ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ. ಇದುವೇ ಅವರ ವಿರುದ್ಧ ಸಮಗ್ರ ಕಾರ್ಯಾಚರಣೆ ನಡೆಸುವುದಕ್ಕೆ ಅಡ್ಡಿಯಾಗಿದೆ. ರಾಜ್ಯಗಳು ತಮ್ಮದೇ ಆದ ರಣತಂತ್ರ ರೂಪಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿವೆ. ರಾಜ್ಯಗಳ ನಡುವೆ ಸಮರ್ಪಕ ಸಮನ್ವಯ ಇಲ್ಲದಿರುವುದು ನಕ್ಸಲರಿಗೆ ವರದಾನವಾಗಿದೆ. ಸಮಸ್ಯೆಯನ್ನು ಎದುರಿಸಲು ಸ್ಪಷ್ಟವಾದ ಕಾರ್ಯಸೂಚಿ ಇಲ್ಲದಿರುವುದರಿಂದ ನಕ್ಸಲರ ವಿರುದ್ಧ ಮೇಲ್ಗೆ„ ಸಾಧಿಸಲು ಸಾಧ್ಯವಾಗುತ್ತಿಲ್ಲ. 

ನಕ್ಸಲರ ವಿರುದ್ಧ ಸಿಆರ್‌ಪಿಎಫ್ ಕಾರ್ಯಾಚರಣೆಯಿಂದಾಚೆಗಿನ ಸಾಧ್ಯತೆಯನ್ನು ನಾವಿನ್ನೂ ಪರಿಶೀಲಿಸಿಲ್ಲ. ಈ ಸಿಆರ್‌ಪಿಎಫ್ ಯೋಧರ ಪರಿಪೂರ್ಣ ತರಬೇತಿ ಪಡೆದುಕೊಂಡಿರುವುದಿಲ್ಲ. ನೇಮಕಾತಿ ಮಾಡಿ ಎರಡು ತಿಂಗಳ ತರಬೇತಿ ಕೊಟ್ಟು ನೇರವಾಗಿ ನಕ್ಸಲ ಪೀಡಿತ ಪ್ರದೇಶಗಳಿಗೆ ನೇಮಕಗೊಳಿಸುವ ಕ್ರಮವೇ ಇಂದಿಗೂ ನಡೆದುಕೊಂಡು ಬಂದಿದೆ. ಕಾಡುಗುಡ್ಡಗಳ ಕಾರ್ಯಾಚರಣೆಯ ಯಾವ ಅನುಭವವೂ ಇಲ್ಲದ ಈ ಅಮಾಯಕ ಯೋಧರು ವಿನಾಕಾರಣ ನಕ್ಸಲರಿಗೆ ಬಲಿಯಾಗಬೇಕಾಗುತ್ತದೆ. 

ಪ್ರಸ್ತುತ ನಕ್ಸಲರು ಯಾವ ಗುರಿ ಇಟ್ಟುಕೊಂಡು ಹಿಂಸಾಚಾರ ಮಾಡುತ್ತಿದ್ದಾರೆ ಎನ್ನುವುದೇ ತಿಳಿದಿಲ್ಲ. ಅಸಮಾನತೆ ವಿರುದ್ಧ ಪ್ರಾರಂಭವಾಗಿದ್ದ ನಕ್ಸಲ್‌ ಚಳವಳಿ ಈಗ ಹಲವು ಪೂರ್ಣ ಪ್ರಮಾಣದ ಹಿಂಸಾ ಚಳವಳಿಯಾಗಿ ಬದಲಾಗಿದೆ. ಬಡವರ, ಶೋಷಿತರ ಪರವಾಗಿ ಹೋರಾಡುತ್ತೇವೆ ಎನ್ನುವ ನಕ್ಸಲರ ಮಾತು ಈ ಕಾಲಘಟ್ಟದಲ್ಲಿ ನಂಬುವಂತದ್ದಲ್ಲ. ಅವರ ಬಳಿ ಇರುವ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು, ಅವರು ಹೊಂದಿರುವ ವ್ಯವಸ್ಥಿತ ಬೇಹು ಮಾಹಿತಿ ಜಾಲ ಹತ್ತಾರು ಸಂಶಯ ಗಳಿಗೆ ಎಡೆಮಾಡಿಕೊಡುತ್ತಿದೆ. ಈ ಮಟ್ಟದ ಹಣಕಾಸಿನ ಬೆಂಬಲವನ್ನು ಅವರು ಎಲ್ಲಿಂದ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಪತ್ತೆಹಚ್ಚುವ ಕೆಲಸ ಆಗಬೇಕಿತ್ತು. ಇಂದಿಗೂ ನಕಸಲರು ನೆಚ್ಚಿಕೊಂಡಿರುವುದು ಕುಗ್ರಾಮಗಳ ಜನ ಬೆಂಬಲವನ್ನು. ಮುಗ್ಧರಾಗಿರುವ ಈ ಜನರು ಆಡಳಿತದ ವಿರುದ್ಧ ಪ್ರತಿಪಾದಿಸುವ ಸಿದ್ಧಾಂತವನ್ನು ಸುಲಭವಾಗಿ ನಂಬುತ್ತಾರೆ. ಇಂಥವರನ್ನೇ ಆರಿಸಿ ನಕ್ಸಲ್‌ ಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ನಕ್ಸಲ್‌ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡಬೇಕಿದ್ದರೆ ಅವರಿಗೆ ಹೊರ ಜಗತ್ತಿನಿಂದ ಸಿಗುವ ನೆರವನ್ನು ತಡೆಯಬೇಕು ಹಾಗೂ ಇದೇ ವೇಳೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬರೀ ಶಸ್ತ್ರಾಸ್ತ್ರ ಹೋರಾಟದಿಂದ ಮುಗಿಯುವ ಸಮಸ್ಯೆ ಇದಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next