ನವದೆಹಲಿ: ಭತ್ತ, ಗೋಧಿ ಬಿತ್ತನೆ ಕಾಲದಲ್ಲಿ ರೈತರಿಗೆ ನಿರಂತರವಾಗಿ ಎಂಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ನಿರಾಕರಿಸುವ ಮೂಲಕ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಉಚಿತ ವಿದ್ಯುತ್ ಸೌಲಭ್ಯ ನೀಡುವ ಭರವಸೆಯನ್ನು ಉಲ್ಲಂಘಿಸಿದ್ದಾರೆ ಎಂದು ಶಿರೋಮಣಿ ಅಕಾಲಿದಳ(ಎಸ್ ಎಡಿ)ದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಕೆಲವೇ ದಿನದಲ್ಲಿ ಕೇಂದ್ರ ಸಂಪುಟ ವಿಸ್ತರಣೆ: ಯಾರೆಲ್ಲಾ ಇದ್ದಾರೆ ರೇಸ್ ನಲ್ಲಿ?
ಮಾಧ್ಯಮಗಳ ವರದಿ ಪ್ರಕಾರ, ನಿರಂತರ ಎಂಟು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಪುನರಾರಂಭಿಸುವಂತೆ ಒತ್ತಾಯಿಸಿ ಪಕ್ಷವು ಶುಕ್ರವಾರ(ಜುಲೈ 2) ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಅಮರಿಂದರ್ ಸಿಂಗ್ ಅವರು ಸಂಪೂರ್ಣ ಕೃಷಿ ಸಾಲ ಮನ್ನಾ ಜಾರಿಗೊಳಿಸುವುದನ್ನು ನಿರಾಕರಿಸುವ ಮೂಲಕ ರೈತರಿಗೆ ದ್ರೋಹ ಬಗೆದ ನಂತರ ಈಗ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತೇನೆ ಎಂಬ ಭರವಸೆಯನ್ನು ಜಾರಿ ಮಾಡದೆ ವಂಚಿಸುತ್ತಿದ್ದಾರೆ ಎಂದು ಬಾದಲ್ ದೂರಿದ್ದಾರೆ.
ಎಂಟು ಗಂಟೆಗಳ ಕಾಲ ವಿದ್ಯುತ್ ನೀಡುವ ಬದಲು ದಿನಂಪ್ರತಿ ರೈತರಿಗೆ 3-4 ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದರಿಂದ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಡೀಸೆಲ್ ಜನರೇಟರ್ ಗಳಿಗೆ ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ಆರೋಪಿಸಿದ್ದಾರೆ.