ಚಂಡೀಗಢ್: ಶಿರೋಮಣಿ ಅಕಾಲಿ ದಳ(ಎಸ್ ಎಡಿ)ದ ಕಾರ್ಯಾಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್ ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ಮಂಗಳವಾರ(ಫೆ.1, 2021) ಪಂಜಾಬ್ ನ ಜಲಾಲಾಬಾದ್ ನಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೈತ್ರಿಗೆ HDK ಕಂಬಳಿ ಹಾಕಿಕೊಂಡೇ ಕುಳಿತಿದ್ದರು: ಎಚ್. ವಿಶ್ವನಾಥ್ ವ್ಯಂಗ್ಯ
ಎಎನ್ ಐಗೆ ಲಭ್ಯವಾಗಿರುವ ವಿಡಿಯೋದಲ್ಲಿ, ಹಲವು ಜನರು ಕೈಯಲ್ಲಿ ಶಸ್ತ್ರಾಸ್ತ್ರ ಹಾಗೂ ದೊಣ್ಣೆಯನ್ನು ಹಿಡಿದುಕೊಂಡು ಬಾದಲ್ ಅವರ ಕಾರಿನ ಮೇಲೆ ದಾಳಿ ನಡೆಸಿರುವುದು ಸೆರೆಯಾಗಿದೆ. ಈ ದಾಳಿಯ ಹಿಂದೆ ಕಾಂಗ್ರೆಸ್ ಗೂಂಡಾಗಳು ಇದ್ದಿರುವುದಾಗಿ ಎಸ್ ಎಡಿ ಆರೋಪಿಸಿದೆ.
ಪೊಲೀಸರ ಬೆಂಗಾವಲಿನೊಂದಿಗೆ ಆಗಮಿಸಿದ್ದ ಕಾಂಗ್ರೆಸ್ ಗೂಂಡಾಗಳು ಎಸ್ ಎಡಿ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್ ಅವರ ಕೊಲೆಗೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಎಸ್ ಎಡಿ ಕಾರ್ಯಕರ್ತರು ಸಿಂಗ್ ಅವರನ್ನು ರಕ್ಷಿಸಲು ಸುತ್ತುವರಿದಾಗ ಮೂವರು ಗುಂಡಿನ ದಾಳಿಗೆ ತುತ್ತಾಗಿರುವುದಾಗಿ ವರದಿ ವಿವರಿಸಿದೆ.
ಮುಂಬರುವ ಪಂಜಾಬ್ ಮುನ್ಸಿಪಲ್ ಚುನವಾಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳನ್ನು ಎಸ್ ಎಡಿ ಕಚೇರಿಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಬಾದಲ್ ಕಾರಿನ ಮೇಲೆ ಈ ದಾಳಿ ನಡೆದಿರುವುದಾಗಿ ವರದಿ ತಿಳಿಸಿದೆ.
ಘಟನೆ ನಂತರ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ನಂತರ ಘರ್ಷಣೆಗೆ ಕಾರಣವಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಘಟನೆ ಕುರಿತು ಮಾಹಿತಿ ಪಡೆದಿರುವುದಾಗಿ ವರದಿ ಹೇಳಿದೆ.
ಫೆಬ್ರುವರಿ 14ರಂದು ಪಂಜಾಬ್ ನ ಎಂಟು ಮುನ್ಸಿಪಲ್ ಕಾರ್ಪೋರೇಶನ್ ಹಾಗೂ 109 ಮುನ್ಸಿಪಲ್ ಕೌನ್ಸಿಲ್ , ನಗರ ಪಂಚಾಯತ್ ಗೆ ಚುನಾವಣೆ ನಡೆಯಲಿದೆ.