ಹೆಣ್ಣುಮಗುವಿನ ಶಿಕ್ಷಣ ಮತ್ತು ಮದುವೆ ಖರ್ಚಿಗೆ ನೆರವಾಗುವ ನಿಟ್ಟಿನಲ್ಲಿ ರೂಪಿತವಾಗಿರುವ ಸರ್ಕಾರದ ‘ಸುಕನ್ಯಾ ಸಮƒದ್ಧಿ’ ಯೋಜನೆಯಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆ ಮಾಡಿಕೊಳ್ಳಲಾಗಿದೆ. ಅದರಂತೆ, ಲಾಕ್ ಡೌನ್ ಸಮಯದಲ್ಲಿ ಅಂದರೆ, ಮಾರ್ಚ್ 25- ಜೂನ್ 30ರ ನಡುವೆ 10 ವರ್ಷ ಪೂರೈಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ, ಜುಲೈ 31 ಅಥವಾ ಅದಕ್ಕೂ ಮುಂಚೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದಾಗಿದೆ. ಲಾಕ್ ಡೌನ್ ಸಮಯದಲ್ಲಿ ಕಚೇರಿಗೆ ಹೋಗಲಾಗದೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲಾಗದವರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಸುಕನ್ಯಾ ಸಮೃದ್ಧಿ, ಹೆಣ್ಣುಮಕ್ಕಳಿಗಾಗಿ ಇರುವ ಜನಪ್ರಿಯ ಉಳಿತಾಯ ಯೋಜನೆ. ಅಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕ ಶೇ. 7.6 ಬಡ್ಡಿ ಸಿಗುತ್ತದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿಯೇ ಈ ಮೊತ್ತ ಹೆಚ್ಚಿನದ್ದು. ಸುಕನ್ಯಾ ಸಮೃದ್ಧಿ ಖಾತೆ ತೆರೆಯಬೇಕಾದರೆ, ಹೆಣ್ಣುಮಗುವಿನ ವಯಸ್ಸು 10 ಅಥವಾ ಅದಕ್ಕಿಂತ ಕೆಳಗೆ ಇರಬೇಕು.
ಖಾತೆ ತೆರೆಯುವ ವಿಧಾನ : ಪೋಷಕರು, ಮೊದಲು ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿ(ಎಸ್ ಎಸ್ ಎ-1) ಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ನಿಂದ ಕೇಳಿ ಪಡೆಯಬೇಕು. ಅದರಲ್ಲಿ ಪೋಷಕರ ಹೆಸರು, ಹೆಣ್ಣು ಮಗುವಿನ ಹೆಸರು, ಜನನ ಪ್ರಮಾಣಪತ್ರದ ಮಾಹಿತಿ, ವಿಳಾಸ ಮತ್ತಿತರ ವಿವರಗಳನ್ನು ಭರ್ತಿ ಮಾಡಬೇಕು. ಒದಗಿಸಬೇಕಾದ ದಾಖಲೆಗಳು ಹೆಣ್ಣುಮಗುವಿನ ಜನನ ಪ್ರಮಾಣಪತ್ರ ಪೋಷಕರ ಅಡ್ರೆಸ್ ಪ್ರೂಫ್- ಪಾಸ್ ಪೋರ್ಟ್, ರೇಶನ್ ಕಾರ್ಡ್ ಅಥವಾ ಚಾಲನಾ ಪರವಾನಗಿ ಪೋಷಕರ ಗುರುತು ಪತ್ರ- ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಶುರುವಿನಲ್ಲಿ ಕನಿಷ್ಠ 250 ರೂ. ಕಟ್ಟುವ ಮೂಲಕ ಖಾತೆಯನ್ನು ಪ್ರಾರಂಭಿಸಬಹುದು.
ವಾರ್ಷಿಕ ಪಾವತಿ : ಸುಕನ್ಯಾ ಸಮೃದ್ಧಿ ಖಾತೆ ಕಾರ್ಯಶೀಲ ವಾಗಿರಬೇಕೆಂದರೆ, ವರ್ಷಕ್ಕೆ ಕನಿಷ್ಠ 250 ರೂ.ಯನ್ನಾದರೂ ಕಡ್ಡಾಯವಾಗಿ ಖಾತೆಗೆ ಕಟ್ಟಬೇಕಾಗುತ್ತದೆ. ಯೋಜನೆಯಡಿ ವರ್ಷಕ್ಕೆ ಕಟ್ಟಬಹುದಾದ ಗರಿಷ್ಠ ಮೊತ್ತ 1.5 ಲಕ್ಷ ರೂ. ಯೋಜನೆಯ ಮೆಚ್ಯುರಿಟಿ ಅವಧಿ 21 ವರ್ಷಗಳು. ಅದರಲ್ಲಿ 15 ವರ್ಷಗಳ ಕಾಲ ಖಾತೆಗೆ ಹಣ ಪಾವತಿಸಬೇಕಾಗುತ್ತದೆ. ಇನ್ನುಳಿದ 6 ವರ್ಷಗಳ ಕಾಲ ಪೋಷಕರು ಖಾತೆಗೆ ಹಣ ಪಾವತಿಸುವ ಅಗತ್ಯ ಇಲ್ಲ. ಆದರೆ ಈ ಹಿಂದೆ ಕಟ್ಟಿರುವ ಹಣದ ಮೊತ್ತಕ್ಕೆ ಬಡ್ಡಿ- ಆದಾಯ ಸೇರುತ್ತಾ ಹೋಗುತ್ತದೆ.