Advertisement

ಅಜ್ಞಾನದಿಂದ ಸುಜ್ಞಾನದತ್ತ ಸಾಗಲು ಸಿದ್ಧಾರೂಢರ ಅವತಾರ: ಸ್ವಾಮೀಜಿ

12:16 PM Jan 02, 2017 | |

ಹುಬ್ಬಳ್ಳಿ: ಅಜ್ಞಾನದಿಂದ ಮುಕ್ತರಾಗಿ ಸುಜ್ಞಾನದತ್ತ ಸಾಗಲು ಸಿದ್ಧಾರೂಢರು ಅವತರಿಸಿದ್ದರು. ಅವರೇ ಸಾಕ್ಷಾತ್‌ ಪರಮೇಶ್ವರ ಎಂದು ನಂಬಿ ವಿಶ್ವಾಸ, ಶ್ರದ್ಧೆಯಿಂದ ನಡೆದುಕೊಂಡು ಮೋಕ್ಷ ಜೀವನ ಸಾಗಿಸಬೇಕು ಎಂದು ಬೀದರ ಚಿದಂಬರಾಶ್ರಮದ ಸಿದ್ಧಾರೂಢ ಮಠದ ಜಗದ್ಗುರು ಶಿವಕುಮಾರ ಸ್ವಾಮೀಜಿ ಹೇಳಿದರು. 

Advertisement

ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಕಳೆದ 50 ದಿನಗಳಿಂದ ಹಮ್ಮಿಕೊಂಡಿದ್ದ ಕೋಟಿ ಜಪಯಜ್ಞ ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀಗಳು ಮಾತನಾಡಿದರು. ಪರಮಾತ್ಮನು ಸದ್ಗುರು ಸಿದ್ಧಾರೂಢರನ್ನು ಕೈಲಾಸದಿಂದ ರಾಜದೂತರನ್ನಾಗಿ ಕಲಿಯುಗಕ್ಕೆ ಕಳುಹಿಸಿದ್ದಾನೆ.

ನಾವೆಲ್ಲ ನಂಬಿಕೆ, ವಿಶ್ವಾಸ, ಶ್ರದ್ಧೆಯಿಂದ ನಡೆದುಕೊಂಡು ಮೋಕ್ಷ ಹೊಂದಬೇಕು ಎಂದರು. ಬಾಗಲಕೋಟೆಯ ರಾಮಾರೂಢರ ಮಠದ ಶ್ರೀ ಪರಮ ರಾಮಾರೂಢ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಅತ್ಯಾಚಾರ, ಅನಾಚಾರ, ಅಪರಾಧ ಚಟುವಟಿಕೆಗಳು ನಿರಂತರ ಹೆಚ್ಚಾಗುತ್ತಿವೆ. ಜಗತ್ತು ಅವನತಿಯದತ್ತ ಸಾಗುತ್ತಿದೆ. 

ಇಂತಹ ಸಂದರ್ಭದಲ್ಲಿ ಭಗವಂತನ ನಾಮಸ್ಮರಣೆ ಮಾಡುತ್ತ ಕೋಟಿ ಜಪಯಜ್ಞ ಮಾಡುವುದು ಅತ್ಯವಶ್ಯಕ. ಅದರಲ್ಲೂ ಸಿದ್ಧಾಂತ ಶಿಖಾಮಣಿಯಲ್ಲಿಯ ಸಪ್ತಕೋಟಿ ಮಂತ್ರಗಳಲ್ಲಿಯೇ ಸರ್ವಶ್ರೇಷ್ಠವಾದ ಪಂಚಾಕ್ಷರಿ ಮಂತ್ರ ಪಠಿಸುವ ಮೂಲಕ ಮೋಕ್ಷ ಪಡೆಯಬಹುದು. ಇಂತಹ ಕಾರ್ಯವನ್ನು ಸಿದ್ಧಾರೂಢ ಸ್ವಾಮಿ ಮಠದ ಟ್ರಸ್ಟ್‌ನವರು ಮಾಡುತ್ತಿರುವುದು ಔಚಿತ್ಯವಾಗಿದೆ ಎಂದರು. 

ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ವಿ. ಶ್ರೀಶಾನಂದ ಅಧ್ಯಕ್ಷತೆ ವಹಿಸಿ, ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಹೊಸ ವರ್ಷ ಆಚರಿಸುತ್ತಿದ್ದೇವೆ. ಆದರೆ ಅದರಿಂದ ಯಾವ ಬೆಳವಣಿಗೆಯೂ ಆಗಲಿಲ್ಲ. ಕ್ಯಾಲೆಂಡರ್‌ ಬದಲಾಯಿತೇ ವಿನಃ ನಮ್ಮ ಜೀವನದಲ್ಲಿ ಯಾವುದೇ ಮಹತ್ತರ ಬದಲಾವಣೆಗಳಾಗಲಿಲ್ಲ ಎಂದರು. 

Advertisement

ಕಲಬುರಗಿಯ ಲಕ್ಷ್ಮೀ ಮಾತಾ, ವಿಜಯಪುರದ ಶಂಕರಾನಂದ ಸ್ವಾಮೀಜಿ, ಗಣಪತಿ ಮಹಾರಾಜರು, ಹುಬ್ಬಳ್ಳಿ ಶಾಂತಾಶ್ರಮದ ಜಗದ್ಗುರು ಅಭಿನವ ಶಿವಪುತ್ರ ಸ್ವಾಮೀಜಿ, ಚಿತ್ರದುರ್ಗ ಕಬೀರಾನಂದಾಶ್ರಮದ ಜಗದ್ಗುರು ಶಿವಲಿಂಗಾನಂದ ಸ್ವಾಮೀಜಿ, ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ದಯಾನಂದ ಸರಸ್ವತಿ ಸ್ವಾಮೀಜಿ,

ಮಹಾಲಿಂಗಪುರ- ಚಿಕ್ಕನಂದಿಯ ಸಿದ್ಧಾರೂಢ ದರ್ಶನಪೀಠದ ಪೀಠಾಧ್ಯಕ್ಷ ಸಹಜಾನಂದ ಸ್ವಾಮೀಜಿ, ಗೋಕಾಕದ ಶ್ರೀಶಾಮಾನಂದ ಆಶ್ರಮದ ಅತ್ಯಾನಂದ ಸ್ವಾಮೀಜಿ, ಹುಬ್ಬಳ್ಳಿ ನಾಸಿಕ ಶರಣಪ್ಪನವರ ಮಠದ ವಾಸುದೇವನಾಂದ ಸ್ವಾಮೀಜಿ, ರಾಜವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ, ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿ ಚೇರನ್‌ ಧರಣೇಂದ್ರ ಜವಳಿ,

ಉಪಾಧ್ಯಕ್ಷೆ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್‌.ಜಿ., ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ಪರ್ವತಗೌಡ ಪಾಟೀಲ, ನಾರಾಯಣ ನಿರಂಜನ, ಮಹೇಂದ್ರ ಸಿಂಘಿ, ಆನಂದಕುಮಾರ ಮಗದುಮ್‌, ಯಲ್ಲಪ್ಪ ದೊಡ್ಡಮನಿ, ನಾರಾಯಣಸಾ ಮೆಹರವಾಡೆ, ಕೆ.ಎಲ್‌. ಪಾಟೀಲ, ಗವಿಸಿದ್ದಯ್ಯ ಅಮೋಘಿ ಮಠ, ಕೋಟಿ ಜಪಯಜ್ಞ ಪೂಜಾ ಸಮಿತಿ ಕಾರ್ಯಾಧ್ಯಕ್ಷ ನಾರಾಯಣಪ್ರಸಾದ ಪಾಠಕ ಇನ್ನಿತರರಿದ್ದರು. 

ಇದೇ ಸಂದರ್ಭದಲ್ಲಿ ಶಾಂತಲಾ ಯಡ್ರಾವಿ ಅವರು ಕನ್ನಡದಿಂದ ಮರಾಠಿಗೆ ಅನುವಾದಿಸಿದ ಚಿದಂಬರ ಚಿತೂ ಜ್ಯೋತಿ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಶಾಮಾನಂದ ಪೂಜೇರಿ ಸ್ವಾಗತಿಸಿದರು. ಎಸ್‌.ಐ. ಕೋಳಕೂರ ನಿರೂಪಿಸಿದರು. 

ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಕೋಟಿ ಜಪಯಜ್ಞ ಕಾರ್ಯಕ್ರಮದ ಅಂತಿಮ ದಿನವಾದ ರವಿವಾರದಂದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಿವಿಧ ಪ್ರದೇಶಗಳಿಂದ ಸುಮಾರು 1500ಕ್ಕೂ ಅಧಿಕ ದಂಪತಿ ಭಾಗವಹಿಸಿದ್ದರು. ಇದುವರೆಗೆ ಅಂದಾಜು 6 ಸಾವಿರ ದಂಪತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next