ಇಲ್ಲಿರುವ ಫೋಟೋವನ್ನೊಮ್ಮೆ ಗಮನಿಸಿ. ತಕ್ಷಣಕ್ಕೆ ಯಾರಿವರು ಎಂಬ ಪ್ರಶ್ನೆ ಎದುರಾಗುತ್ತೆ. ಆದರೂ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇವರು ಅವರೇ ಅನ್ನುವ ಗಟ್ಟಿ ಉತ್ತರ ಬರುತ್ತೆ.
ಹೌದು, ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ನಟ ಬೇರಾರೂ ಅಲ್ಲ, ಸುಚೇಂದ್ರ ಪ್ರಸಾದ್. ಬಹುಶಃ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಹೀಗೆ ರಾಮನ ಗೆಟಪ್‌ನಲ್ಲಿ ಫೋಸ್ ಕೊಟ್ಟಿರುವುದು ‘ಸೂಜಿದಾರ’ ಚಿತ್ರದಲ್ಲಿ. ಮೌನೇಶ್ ಬಡಿಗೇರ್ ನಿರ್ದೇಶನದ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ರಂಗಭೂಮಿ ಕಲಾವಿದರಾಗಿ ನಟಿಸಿದ್ದಾರೆ.
ಅವರು ಇಷ್ಟು ದಿನ ಮಾಡಿದ ಬಹುತೇಕ ಚಿತ್ರಗಳಲ್ಲಿ ಗಂಭೀರ ವಾಗಿರುವಂತಹ ಪಾತ್ರಗಳೇ ಇದ್ದವು. ಆದರೆ, ‘ಸೂಜಿದಾರ’ ಚಿತ್ರದಲ್ಲಿ ಅವರದು ಹಿಂದಿಗಿಂತಲೂ ವಿಭಿನ್ನವಾಗಿರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದುರ್ಗ ಹಿನ್ನೆಲೆಯ ರಂಗಭೂಮಿ ಕಲಾವಿದರಾಗಿ ಅವರಿಲ್ಲಿ ನಟಿಸಿದ್ದು, ಪರ್ಮು ಎಂಬ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂಬುದು ನಿರ್ದೇಶಕ ಮೌನೇಶ್ ಮಾತು.
ರಾಮನ ಪಾತ್ರ ಯಾಕೆ ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂಬ ಉತ್ತರ ನಿರ್ದೇಶಕರದು. ಅಂದಹಾಗೆ, ಸುಚೇಂದ್ರ ಪ್ರಸಾದ್ ಅವರೇ ಮೇಜರ್ ಆಗಿ ಇಡೀ ಚಿತ್ರವನ್ನು ಆವರಿಸಿಕೊಂಡಿ ದ್ದಾರೆ. ಸುಚೇಂದ್ರ ಪ್ರಸಾದ್ ಅಂದಾಕ್ಷಣ, ಸ್ವಚ್ಛ ಕನ್ನಡ ಭಾಷೆ ನೆನಪಾಗುತ್ತೆ. ಅವರು ಮಾಡಿದ ಬಹುತೇಕ ಪಾತ್ರಗಳಲ್ಲೂ ಅವರು ಸ್ಪಷ್ಟ ಕನ್ನಡವನ್ನೇ ಉಚ್ಛರಿಸಿದ್ದರು. ಆದರೆ, ‘ಸೂಜಿದಾರ’ ಚಿತ್ರದಲ್ಲಿ ಆ ರೀತಿಯ ಗಂಭೀರ ಕನ್ನಡ ಭಾಷೆ ಇರಲ್ಲ. ಪಕ್ಕಾ ಗ್ರಾಮೀಣ ಭಾಷೆಯೇ ಇಲ್ಲಿ ಹೈಲೈಟ್. ಅವರು ಮಾತನಾಡುವ ಕನ್ನಡ ಭಾಷೆಗೆ ತದ್ವಿರುದ್ಧ ಇರುವಂತಹ ಭಾಷೆ ಇಲ್ಲಿದೆ ಎಂಬುದು ನಿರ್ದೇಶಕರ ಹೇಳಿಕೆ.
ಈ ಚಿತ್ರವನ್ನು ಅಭಿಜಿತ್ ಕೊಟೆಗಾರ್, ಸಚಿಂದ್ರನಾಥ್ ನಾಯಕ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಶವಂತ್ ಶೆಟ್ಟಿ ನಾಯಕರಾದರೆ, ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.
ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಹೊಂದಿದ್ದು, ಚಿತ್ರದಲ್ಲಿ ಅಚ್ಯುತಕುಮಾರ್, ಚೈತ್ರಾ ಕೊಟೂರು, ಶ್ರೇಯಾ ಅಂಚನ್, ಬಿರಾದಾರ್ ಇತರರು ನಟಿಸಿದ್ದಾರೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತವಿದೆ. ಅಶೋಕ್ ವಿ.ರಾಮನ್ ಛಾಯಾಗ್ರ ಹಣವಿದೆ. ಸದ್ಯಕ್ಕೆ ‘ಸೂಜಿದಾರ’ ಚಿತ್ರ ಸೆನ್ಸಾರ್‌ನಲ್ಲಿದೆ.