Advertisement
ಮಂಗಳೂರು ನಗರದ ಪಚ್ಚನಾಡಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಂಪಿಂಗ್ ಯಾರ್ಡ್‌ನ್ನು ಬೇರೆ ಕಡೆಗೆ ಸ್ಥಳಾಂತರಿಸುವ ವಿಚಾರ ಇದೀಗ ಪ್ರಸ್ತಾವನೆಗೆ ಬರುತ್ತಿದೆ. ಡಂಪಿಂಗ್ ಯಾರ್ಡ್‌ಗೆ ಜ. 29ರಂದು ಭೇಟಿ ನೀಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಪಚ್ಚನಾಡಿಯಿಂದ ಡಂಪಿಂಗ್‌ಯಾರ್ಡ್‌ನ್ನು ಬೇರೆ ಕಡೆ ಸœಳಾಂತರಿಸಲು ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
Related Articles
Advertisement
ಹಳೆಯ ಮಾದರಿಗಳು, ವಿಧಾನಗಳನ್ನೇ ತ್ಯಾಜ್ಯ ನಿರ್ವಹಣೆಗೆ ಅವಲಂಬಿಸುವುದು ಸರಿಯಲ್ಲ. ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದು ಅತೀ ಅವಶ್ಯವಾಗಿದೆ. ತ್ಯಾಜ್ಯನಿರ್ವಹಣೆಯಲ್ಲಿ ಹೊಸ ಆವಿಷ್ಕಾರಗಳು, ಮಾದರಿಗಳು ಬರುತ್ತಿವೆ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧ ನೆಲೆಗಳಲ್ಲಿ ಉಪಯೋಗಿಸುವ ಬಗ್ಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಹಲವಾರು ಸುಧಾರಿತ ಮತ್ತು ವೈಜ್ಞಾನಿಕ ವ್ಯವಸ್ಥೆಗಳು ಅಳವಡಿಕೆಯಾಗಿವೆ.
ಇದಲ್ಲದೆ ದೇಶದ ಅನೇಕ ನಗರಗಳಲ್ಲಿ ತ್ಯಾಜ್ಯವನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಮುಂದುವರಿದ ದೇಶಗಳಲ್ಲೂ ಅನೇಕ ಆಧುನಿಕ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ, ಈ ಮಾದರಿಗಳ ಬಗ್ಗೆಯೂ ಅಧ್ಯಯನ ನಡೆಸಿ ಮಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳುವಂತಹ ಅತ್ಯಂತ ವೈಜ್ಞಾನಿಕ ಮತ್ತು ಆಧುನಿಕ ವಿಧಾನಗಳ ಅಳವಡಿಕೆ ಬಗ್ಗೆ ಗಮನ ಹರಿಸಬಹುದಾಗಿದೆ.
ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 325 ರಿಂದ 330 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಬಹುಪಾಲು ಹಸಿಕಸವಾಗಿರುತ್ತದೆ. ಹೊಟೇಲ್, ಮನೆ ಸೇರಿದಂತೆ ಒಟ್ಟಾರೆ 97,294 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 823 ಮಂದಿ ಕಾರ್ಮಿಕರು ಕಸ ಸಂಗ್ರಹದಲ್ಲಿ ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ವಾರದಲ್ಲಿ ಒಂದು ದಿನ ಒಣಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಹಸಿಕಸವನ್ನು ಕೊಂಡೊಯ್ಯಲಾಗುತ್ತಿದೆ. ಪಚ್ಚನಾಡಿಯಲ್ಲಿ ಹಸಿಕಸದಿಂದ ಕಾಂಪೋಸ್ಟ್ ತಯಾರಿಸುವ ಘಟಕವಿದೆ. ಉರ್ವಾದಲ್ಲಿ ಹಸಿಕಸದಿಂದ ಬಯೋಗ್ಯಾಸ್ ತಯಾರಿಸುವ ಘಟಕವಿದೆ. ಸಂಸ್ಕರಿಸಿ ಉಳಿದ ತ್ಯಾಜ್ಯವನ್ನು ಲ್ಯಾಂಡ್‌ಫಿಲ್ ಮಾಡಲಾಗುತ್ತಿದೆ. ಪಚ್ಚನಾಡಿಯಲ್ಲಿ ಈ ಹಿಂದೆ ಸುಮಾರು 10 ಎಕ್ರೆ ಜಾಗದಲ್ಲಿ ಹಾಕಿದ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಮತ್ತೆ ಇನ್ನಷ್ಟು ಜಾಗ ಈ ಪ್ರಕ್ರಿಯೆಗೆ ಬಳಸಲಾಗುತ್ತಿದೆ.
ವೇಸ್ಟ್ ಟು ಎನರ್ಜಿವೇಸ್ಟ್ ಟು ಎನರ್ಜಿ ಪ್ರಸ್ತುತ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಕ್ರಮವಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆಗೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಮಂಗಳೂರಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಯೋಜನೆ ಈಗಾಗಲೇ ಪ್ರಸ್ತಾವನೆಯಲ್ಲಿದೆ. ಬೆಂಗಳೂರಿನ ಕಂಪೆನಿಯೊಂದು ಪಚ್ಚನಾಡಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ಹಾಗೂ ಇತರ ಉತ್ಪನ್ನಗಳನ್ನು ಸಿದ್ಧಪಡಿಸುವ ವಿಸ್ತೃತ ಯೋಜನೆ ಈಗಾಗಲೇ ಸಿದ್ಧಪಡಿಸಿದ್ದು ರಾಜ್ಯ ನಗರಾಡಳಿತ ಇಲಾಖೆಯಲ್ಲಿ ಮಂಜೂರಾತಿಗೆ ಕಾಯುತ್ತಿದೆ. ಇದಕ್ಕಾಗಿ ಪಚ್ಚನಾಡಿಯಲ್ಲಿ ಪ್ರಸ್ತುತ ಲ್ಯಾಂಡ್‌ಫಿಲ್ಲಿಂಗ್ ಮಾಡಿರುವ 7 ಎಕ್ರೆ ಜಾಗಕ್ಕೆ ಕೋರಿಕೆ ಸಲ್ಲಿಸಿದೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಇದರ ಸಾಧಕಬಾಧಕಗಳನ್ನು ಪರಿಶೀಲಿಸಿ ಶೀಘ್ರ ಪೂರಕ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಬೆಂಗಳೂರಿನಲ್ಲಿ ಅನೇಕ ಕಂಪೆನಿಗಳು ವೇಸ್ಟ್ ಟು ಎನರ್ಜಿ ಪರಿಕಲ್ಪನೆಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಹಾಗೂ ಇತರ ಉತ್ಪಾದನೆಗಳನ್ನು ಮಾಡಲು ಮುಂದೆ ಬಂದಿದ್ದು ಅವುಗಳಿಗೆ ಘಟಕಗಳನ್ನು ಸ್ಥಾಪಿಸಲು ಜಾಗ ನೀಡಲು ಮುಂದೆ ಬಂದಿವೆ. - ಕೇಶವ ಕುಂದರ್