Advertisement

ತವರಿಗೆ ತೆರಳಲು ಹಣ ನೀಡದ್ದಕ್ಕೆ ಆತ್ಮಹತ್ಯೆ

04:14 PM Oct 28, 2017 | |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ತಿಂಗಳ ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿ ಜ್ಞಾನಜ್ಯೋತಿ ನಗರದಲ್ಲಿ ನೇತ್ರಾವತಿ (33) ಎಂಬ ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆಯ ಪೋಷಕರು ಇದು ಕೊಲೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

Advertisement

ಹೀಗಾಗಿ, ಪ್ರಕರಣ ಅನುಮಾನ ಮೂಡಿಸಿದೆ. ನೇತ್ರಾವತಿ 9 ವರ್ಷಗಳ ಹಿಂದೆ ಮಹಾದೇವ್‌ ಎಂಬಾತನ ಜತೆ ವಿವಾಹವಾಗಿದ್ದು, ದಂಪತಿಗೆ ಆರು ವರ್ಷದ ಮಗು ಇದೆ. ಮಹಾದೇವ್‌ ಮಿಲಿಟರಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದು, ಮರಿಯಪ್ಪನಪಾಳ್ಯದಲ್ಲಿ ಪತಿ ಮತ್ತು ಈತನ ಪೋಷಕರ ಜತೆ ನೆಲೆಸಿದ್ದರು.

ಕೌಟುಂಬಿಕ ಕಲಹ ಹಿನ್ನೆಲೆ ಇತ್ತೀಚೆಗೆ ಪೋಷಕರಿಂದ ದೂರವಾಗಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಮಹಾದೇವ್‌ ವಾಸಿಸುತ್ತಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಗುರುವಾರ ರಾತ್ರಿ ಕೂಡ ಇದೇ ವಿಚಾರವಾಗಿ ದಂಪತಿ ಗಲಾಟೆ ಮಾಡಿಕೊಂಡಿದ್ದು, ಬೇಸರಗೊಂಡ ಮಹಾದೇವ್‌ ಮಗುವಿನೊಂದಿಗೆ ತಮ್ಮ ಪೋಷಕರ ಮನೆಗೆ ಹೋಗಿ ಅಲ್ಲಿಯೇ ಮಲಗಿದ್ದರು.

ಬಳಿಕ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಬಂದು ಬಾಗಿಲು ಬಡಿದಿದ್ದಾರೆ. ಆದರೆ, ನೇತ್ರಾವತಿ ಪ್ರತಿಕ್ರಿಯೆ ನೀಡಿಲ್ಲ. ನಂತರ ಮಹಾದೇವ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನೇತ್ರಾವತಿ ಶವ ಪತ್ತೆಯಾಗಿದೆ.

ಇತ್ತ ನೇತ್ರಾವತಿ ಪೋಷಕರು ಪುತ್ರಿಗೆ ವರದಕ್ಷಿಣಿ ಕಿರುಕುಳ ನೀಡುತ್ತಿದ್ದು, ಈ ಹಿಂದೆಯೂ ಎರಡು ಬಾರಿ ಜಗಳ ಮಾಡಿಕೊಂಡಿದ್ದರು. ಆಗ ಸಂಧಾನ ಮಾಡಲಾಗಿತ್ತು. ಆದರೆ ಇದೀಗ ಏಕಾಏಕಿ ಮಗಳನ್ನು ಕೊಂದು ನೇಣು ಹಾಕಿದ್ದಾರೆ ಎಂದು ಅನುಮಾನವ್ಯಕ್ತಪಡಿಸಿ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಗರ್ಭಿಣಿ ಆತ್ಮಹತ್ಯೆ
ಮತ್ತೂಂದು ಪ್ರಕರಣದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತ ಆರು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕದ ಡೌನ್‌ಬಜಾರ್‌ ಸ್ಟ್ರೀಟ್‌ನಲ್ಲಿ ನಡೆದಿದೆ.  ಅನುಷಾ(23)  ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಂಧ್ರಪ್ರದೇಶ ಮೂಲದ ಅನುಷಾ ಮೂರು ವರ್ಷಗಳ ಹಿಂದೆ ಶಿವಕುಮಾರ್‌ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.

ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಇಲ್ಲಿನ ಡೌನ್‌ಬಜಾರ್‌ ಸ್ಟ್ರೀಟ್‌ನಲ್ಲಿ ವಾಸವಿದ್ದರು. ಪತಿ ಶಿವಕುಮಾರ್‌ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಶಿವಕುಮಾರ್‌ ಬೇರೆಡೆ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದರು. ಸಂಪಾದನೆ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದೇ ವಿಚಾರವಾಗಿ ನಿತ್ಯ ದಂಪತಿ ಜಗಳವಾಡುತ್ತಿದ್ದರು. 

ಗುರುವಾರ ಸಂಜೆ ಕೂಡ ದಂಪತಿ ನಡುವೆ ಇದೇ ವಿಚಾರವಾಗಿ ಜಗಳವಾಡಿದ್ದಾರೆ. ಕೊನೆಗೆ ಕೋಪಗೊಂಡ ಅನುಷಾ ಹಣ ಕೊಡಿ ತವರು ಮನೆಗೆ ಹೋಗುತ್ತೇನೆ ಎಂದು ಆಗ್ರಹಿಸಿದ್ದಾರೆ. ಆದರೆ, ಶಿವಕುಮಾರ್‌ ಹಣ ನೀಡಲು ನಿರಾಕರಿಸಿದ್ದು, ಇದಕ್ಕೇ ಇನ್ನಷ್ಟು ಆಕ್ರೋಶಗೊಂಡ ಅನುಷಾ ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೇ ರೀತಿ ಈ ಹಿಂದೆಯೂ ಅನುಷಾ ಬೆದರಿಕೆ ಹಾಕುತ್ತಿದ್ದರಿಂದ ಶಿವಕುಮಾರ್‌ ತಲೆಕೆಸಿಕೊಂಡಿರಲಿಲ್ಲ. ಇದಾದ ನಂತರ ಶಿವಕುಮಾರ್‌ ಹೊರಗೆ ಹೋಗಿದ್ದು ಮಗುವನ್ನು ಮಲಗಿಸಿದ ಅನುಷಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಶಿವಕುಮಾರ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಯಲಹಂಕ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next