Advertisement

ವಿದ್ಯಾರ್ಥಿಗಳಿಗೆ “ಆತ್ಮಹತ್ಯೆ ತಡೆ’ತರಬೇತಿ

01:02 AM Oct 17, 2019 | Lakshmi GovindaRaju |

ಬೆಂಗಳೂರು: ಕಾಲೇಜುಗಳ ಚುರುಕಾಗಿರುವ ವಿದ್ಯಾರ್ಥಿಗಳಿಗೆ “ಆತ್ಮಹತ್ಯೆ ತಡೆ’ ಕುರಿತು ತರಬೇತಿ ನೀಡುವ ಮೂಲಕ ಹದಿಹರೆಯದ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಲು ನಿಮ್ಹಾನ್ಸ್‌ನ ಮಾನಸಿಕ ಶಿಕ್ಷಣ ವಿಭಾಗವು ಮುಂದಾಗಿದೆ.

Advertisement

ಪ್ರತಿ ಕಾಲೇಜುನಲ್ಲಿ 18ರಿಂದ 20 ವಿದ್ಯಾರ್ಥಿಗಳಿಗೆ “ಪೀರ್‌ ಲೀಡರ್ “ಎಂದು ಆಯ್ಕೆ ಮಾಡಿ ಮೂರು ದಿನಗಳ ಕಾಲ ತಡಬೇತಿ ನೀಡಿ ಅವರುಗಳ ಮೂಲಕ ಕಾಲೇಜು ವ್ಯಾಪ್ತಿಯಲ್ಲಿ ಹಾಗೂ ಸ್ನೇಹಿತ ಬಳಗದ ಯುವಕ ಯುವತಿಯರಲ್ಲಿ ಕಂಡು ಬರುವ ಆತ್ಮಹತ್ಯೆ ಆಲೋಚನೆ/ಆತ್ಮಹತ್ಯೆ ಮನಸ್ಥಿತಿಯನ್ನೇ ಮಟ್ಟಹಾಕಲು ಚಿಂತನೆ ನಡೆಸಿದೆ.

ಈ ಕಾರ್ಯಕ್ರಮದ ಸಾಧಕ-ಬಾಧಕ ತಿಳಿಯುವ ನಿಟ್ಟಿನಲ್ಲಿ ನಿಮ್ಹಾನ್ಸ್‌ ಪ್ರಾಯೋಗಿಕವಾಗಿ ನಗರದ ಎರಡು ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಂದಿನ ವಾರ “ಆತ್ಮಹತ್ಯೆ ತಡೆ’ ತರಬೇತಿ ನೀಡುತ್ತಿದೆ. ಇಲ್ಲಿ ಬರುವ ಅಭಿಪ್ರಾಯಗಳು, ತರಬೇತಿ ಪಡೆದ ಕಾಲೇಜು ವಿದ್ಯಾರ್ಥಿಗಳ ಚಟುವಟಿಕೆ ಹಾಗೂ ಪಾಲ್ಗೊಳ್ಳುವಿಕೆ ಆಧರಿಸಿ ಮುಂದಿನ ವರ್ಷದಿಂದ ಆರೋಗ್ಯ ಇಲಾಖೆ ಸಹಕಾರದೊಂದಿಗೆ ನಗರದ ಎಲ್ಲಾ ಕಾಲೇಜುಗಳಲ್ಲಿಯೂ ಈ ಕಾರ್ಯಕ್ರಮ ಜಾರಿಗೊಳಿಸಲಿದೆ.

ನಗರ ಮುಂಚೂಣಿಯಲ್ಲಿ: ಬೆಂಗಳೂರು ನಗರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ನಗರ ವ್ಯಾಪ್ತಿಯಲ್ಲಿ 2017 ರಿಂದ 2019 ಆಗಸ್ಟ್‌ವರೆಗೂ ಒಟ್ಟು 5,232 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 16ರಿಂದ 21 ವರ್ಷದೊಳಗಿನವರಲ್ಲಿಯೇ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗಿದೆ. ಪ್ರಮುಖವಾಗಿ ಹದಿಹರೆಯದ ವಯಸ್ಸಿನವರು ಹೆಚ್ಚಾಗಿ ಸ್ನೇಹಿತರೊಟ್ಟಿಗೆ ಬೆರೆಯುತ್ತಾರೆ.

ತಮ್ಮ ಭಾವನೆಗಳನ್ನು ಪೋಷಕರು, ಶಿಕ್ಷಕರುಗಳಿಗಿಂತಲೂ ಸ್ನೇಹಿತರ ಬಳಿಯಲ್ಲಿಯೇ ಹಂಚಿಕೊಳ್ಳುತ್ತಾರೆ. ಹೀಗಾಗಿಯೇ, ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಚುರುಕಾಗಿ ಹಾಗೂ ಪರಿಣಾಮಕಾರಿ ಆತ್ಮಹತ್ಯೆ ತಡೆಗಟ್ಟಲು ನಿಮ್ಹಾನ್ಸ್‌ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ನಿಮ್ಹಾನ್ಸ್‌ ಮಾನಸಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕಿ ಡಾ.ಮೀನಾ ಅವರು, “ಎಲ್ಲಾ ಕಡೆಗಳಲ್ಲೂ ಮಾನಸಿಕ ಆರೋಗ್ಯ ಸಂಬಂಧಿಸಿದ ತಜ್ಞರು, ವೈದ್ಯರು, ಆಪ್ತ ಸಮಾಲೋಚಕರು ಇರುವುದಕ್ಕೆ ಸಾಧ್ಯವಿಲ್ಲ.

Advertisement

ಹದಿಹರೆಯದವರು ಹೆಚ್ಚಾಗಿ ಕಾಲೇಜು ಅಥವಾ ಮನೆಯ ಸಮೀಪದ ಸೇಹಿತರ ಜತೆ ಬೆರೆಯುತ್ತಾರೆ. ತಮ್ಮ ನೋವು ನಲಿವುಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ. ಸ್ನೇಹಿತನೊಬ್ಬ ಸಾವಿನ ಬಗ್ಗೆ ಮಾತನಾಡುತ್ತಿದ್ದಾನೆ, ಜಿಗುಪ್ಸೆ ಬಂದಿದೆ ಎನ್ನುತ್ತಿದ್ದಾನೆ, ಅವನಲ್ಲಿ ಆತ್ಮಹತ್ಯೆ ಆಲೋಚನೆ ಬಂದಿವೆ ಎಂದಾಗ ಆ ಸಂದರ್ಭವನ್ನು ಸೂಕ್ತವಾಗಿ ನಿರ್ವಹಿಸುವ ಶಕ್ತಿ ಇರಬೇಕಾಗುತ್ತದೆ. ಇದಕ್ಕಾಗಿಯೇ ಕಾಲೇಜಿನಲ್ಲಿ ಚಟುವಟಿಕೆಯಿಂದಿರುವ, ಚುರುಕಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತರಬೇತಿಯಲ್ಲಿ ಏನಿರುತ್ತೆ?: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ದಿನಗಳ ತರಬೇತಿಯನ್ನು ನಿಮ್ಹಾನ್ಸ್‌ ವೈದ್ಯರು, ಪ್ರಾಧ್ಯಾಪಕರು ನೀಡುತ್ತಾರೆ. ಮೊದಲು ಆತ್ಮಹತ್ಯೆ ಎಂದರೇನು, ಅದರ ಪರಿಣಾಮಗಳೇನು, ಸಮಾಜಕ್ಕಾಗುತ್ತಿರುವ ನಷ್ಟವೆಷ್ಟು ಎಂಬ ಅಂಶವನ್ನು ತಿಳಿಸಲಾಗುತ್ತಿದೆ. ಬಳಿಕ ಆತ್ಮಹತ್ಯೆಗೆ ಕಾರಣಗಳೇನಿರಬಹುದು, ಲಕ್ಷಣಗಳೇನು, ಸ್ನೇಹಿತರಲ್ಲಿ ಆ ಲಕ್ಷಣಗಳು ಕಂಡು ಬಂದರೆ ಆ ಸಂದರ್ಭವನ್ನು ಹೇಗೆ ನಿರ್ವಹಣೆ ಮಾಡಬೇಕು.

ಆತ್ಮಹತ್ಯೆ ಪ್ರವೃತ್ತಿ ಕಂಡುಬರುವವರ ಬಳಿ ಸಮಾಧಾನದ ಮಾತುಗಳನ್ನಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಜತೆಗೆ ಕಾಲೇಜಿನಲ್ಲಿ ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸಲು ನಾಟಕ, ಕರಪತ್ರ, ಭಿತ್ತಿಪತ್ರ ಸಿದ್ಧಪಡೆಸುವ ಕುರಿತು ಹೇಳಿಕೊಡಲಾಗುತ್ತದೆ ಎಂದು ನಿಮ್ಹಾನ್ಸ್‌ ಪ್ರಾಧ್ಯಾಪಕರು ಮಾಹಿತಿ ನೀಡಿದ್ದಾರೆ.

ಹದಿಹರೆಯದರಲ್ಲಿ ಆತ್ಮಹತ್ಯೆ ತಡೆಯಲು ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತ ತರಬೇತಿ ನೀಡಲು ನಿಮ್ಹಾನ್ಸ್‌ ಮುಂದಾಗಿದೆ. ಭಾರತದಲ್ಲಿಯೆ ಮೊದಲ ಬಾರಿಗೆ ಇಂತಹ ಪ್ರಾಯೋಗಿಕ ಯೋಜನೆಯೊಂದನ್ನು ನಿಮ್ಹಾನ್ಸ್‌ ಕೈಗೊಂಡಿದೆ. ಈ ಕುರಿತು ಕಾಲೇಜುಗಳಿಂದ ಹಾಗೂ ತಜ್ಞರುಗಳಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ.
-ಡಾ.ಕೆ.ಎಸ್‌.ಮೀನಾ, ಸಹಾಯಕ ಪ್ರಾಧ್ಯಾಪಕಿ, ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ, ನಿಮ್ಹಾನ್ಸ್‌

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next