ಉಡುಪಿ: ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ (ಎಂಕಾನ್) ಸೈಕ್ಯಾಟ್ರಿಕ್ ಮೆಂಟಲ್ ಹೆಲ್ತ್ ನರ್ಸಿಂಗ್ ವಿಭಾಗವು ಜಾಗತಿಕವಾಗಿ ಸಾವು ಉಂಟಾಗಲು ಪ್ರಮುಖ ಕಾರಣಗಳಲ್ಲಿ ಒಂದಾದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಸೋಮವಾರ ಮತ್ತು ಮಂಗಳವಾರ ಬೀದಿ ನಾಟಕಗಳನ್ನು ಪ್ರದರ್ಶಿಸಿತು.
ವಿದ್ಯಾರ್ಥಿಗಳು ಸೋಮವಾರ ಮಣಿಪಾಲ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಎಂಕಾನ್ ಸಹಾಯಕ ಪ್ರಾಧ್ಯಾಪಕಿ ಆಶಾ ನಾಯಕ್ ಸ್ವಾಗತಿಸಿ “ಎಲ್ಲರೂ ಒಂದಾಗಿ ಆತ್ಮಹತ್ಯೆ ತಡೆಹಿಡಿಯಬೇಕು’ ಎಂಬ ವರ್ಷದ ಥೀಂ ಕುರಿತು ವಿವರಿಸಿದರು.
ಮಣಿಪಾಲ ಪ.ಪೂ. ಕಾಲೇಜಿನ ಆವರಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯವರ್ಧನೆಗಾಗಿ ಬೀದಿ ನಾಟಕ ಪ್ರದರ್ಶಿಸಿದರು. 165 ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಎಂಜೆಸಿ ಉಪನ್ಯಾಸಕ ಉಮಾಪತಿ ಸ್ವಾಗತಿಸಿ ಎಂಕಾನ್ ಉಪನ್ಯಾಸಕಿ ಫ್ಲಾವಿಯ ನೊರೋನ್ಹಾ ಥೀಮ್ ಕುರಿತು ವಿವರಿಸಿದರು.
ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ಎಂಕಾನ್ ಸೈಕ್ಯಾಟ್ರಿಕ್ ನರ್ಸಿಂಗ್ ವಿಭಾಗದ ಸಹಯೋಗದಲ್ಲಿ “ಆತ್ಮಹತ್ಯೆ ತಡೆ’ ಕುರಿತು ಕಾರ್ಯಾಗಾರವನ್ನು ಮಾಹೆ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿತು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಮುಖ್ಯ ಅತಿಥಿಗಳಾಗಿದ್ದರು. ಕುಲಸಚಿವ ಡಾ| ನಾರಾಯಣ ಸಭಾಹಿತ್ ಗೌರವ ಅತಿಥಿಗಳಾಗಿದ್ದರು. ಜಾಗತಿಕವಾಗಿ ಆತ್ಮಹತ್ಯೆ ಪ್ರಕರಣವು ಶೇ.11.4 ಇದ್ದರೆ ಸಿಕ್ಕಿಂನಲ್ಲಿ ಶೇ.37 ಇದೆ. ಇಂತಹ ಪೂರ್ವ ಸೂಚನೆಗಳು ಮೊದಲೇ ಕಂಡುಬಂದರೆ ಅಂತಹವರನ್ನು ಪರಿಗಣಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬಾಳಿಗಾ ಸಲಹೆ ನೀಡಿದರು.
ಸೈಕ್ರಾಟ್ರಿಕ್ ನರ್ಸಿಂಗ್ ಮುಖ್ಯಸ್ಥೆ
ಡಾ| ಟೆಸಿ ಟ್ರೀಶಾ ಜೋಸ್ ಕಾರ್ಯಾಗಾರದ ಪ್ರಸ್ತಾವನೆಯನ್ನು ನಡೆಸಿಕೊಟ್ಟರು.
ಕೆಎಂಸಿ ಸೈಕ್ಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ|ಸಮೀರ್ ಪ್ರಹರಾಜ್, ಸಹಾಯಕ ಪ್ರಾಧ್ಯಾಪಕ ಪ್ರವೀನ್ ಜೈನ್, ಎಂಕಾನ್ ಸಹಾಯಕ ಪ್ರಾಧ್ಯಾಪಕ ರೆಂಜುಲಾಲ್, ಲೈಫ್ ಕೋಚ್, ಮೆಂಟರ್ ಡಾ| ಶರ್ಮಿಳಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಎಂಕಾನ್ ಸಹಾಯಕ ಪ್ರಾಧ್ಯಾಪಕ ಡಾ| ಬಿನಿಲ್ ವಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಆಶಾ ಕೆ. ನಾಯಕ್, ಸವಿತಾ ಟಿವಿ ಚಾನೆಲ್‌ಗಳ ಆರೋಗ್ಯ ಉಪನ್ಯಾಸ ಶೋ ಕುರಿತು ವಿವರಿಸಿದರು.