Advertisement

ಸುರಕ್ಷತೆ ಪ್ರಶ್ನಿಸುವಂತೆ ಮಾಡಿದ ಆತ್ಮಹತ್ಯೆ ಘಟನೆ

07:09 AM Jan 12, 2019 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಶುಕ್ರವಾರ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಪ್ಲಾಟ್‌ಫಾರಂನಲ್ಲಿಯ ಭದ್ರತೆ ಮತ್ತು ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ. 2012ರ ಡಿಸೆಂಬರ್‌ನಲ್ಲಿ ಎಂ.ಜಿ. ರಸ್ತೆಯಲ್ಲಿ ಯುವಕನೊಬ್ಬ ಹಳಿಯ ಮೇಲೆ ಜಿಗಿದು ಸಾವಿಗೀಡಾಗಿದ್ದ. ಈಗ ಅಂತಹದ್ದೇ ಘಟನೆ ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ಮರುಕಳಿಸಿದೆ.

Advertisement

ಇದು ಉದ್ದೇಶಪೂರ್ವಕ ಘಟನೆಯಾಗಿದ್ದರೂ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ, ಇದನ್ನು ತಪ್ಪಿಸುವ ಸಾಧ್ಯತೆ ಇತ್ತು. ಆದರೆ ಪ್ರಸ್ತುತ ಭದ್ರತಾ ಸಿಬ್ಬಂದಿ ಹೊರತುಪಡಿಸಿದರೆ, ಅಂತಹ ಯಾವುದೇ ವ್ಯವಸ್ಥೆ ಇಲ್ಲ.

ದೆಹಲಿಯಲ್ಲಿ ಹೆಚ್ಚು ದಟ್ಟಣೆ ಇರುವ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂನಲ್ಲಿ ಸ್ವಯಂಚಾಲಿತ ದ್ವಾರಗಳಿವೆ. ರೈಲುಗಳು ಬಂದಾಗ ಮಾತ್ರ ಏಕಕಾಲದಲ್ಲಿ ರೈಲಿನ ದ್ವಾರ ಮತ್ತು ಪ್ಲಾಟ್‌ಫಾರಂ ಗೇಟ್‌ಗಳು ತೆರೆದುಕೊಳ್ಳುತ್ತವೆ. ಹಾಗಾಗಿ, ಎಲ್ಲರ ಕಣ್ತಪ್ಪಿಸಿ ಹಳಿಗೆ ಹಾರಲು ಅವಕಾಶ ಇಲ್ಲ.

ಇದಲ್ಲದೆ, ಸ್ಟೀಲ್‌ನಿಂದ ಅಳವಡಿಸಿದ ಗೇಟುಗಳಾದ “ಹ್ಯಾಂಡ್‌ರೇಲ್‌’ (ಜಚnಛ rಚಜಿl) ಹಾಕಲಿಕ್ಕೂ ಅವಕಾಶ ಇದೆ. ಆಗ, ಯಾವುದೇ ವ್ಯಕ್ತಿ ಆ ಗೇಟು ಹಾರುವಾಗಲೇ ಯಾರಾದರೂ ನೋಡುತ್ತಾರೆ. ಆಗ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು. 

ಈಗ ಪ್ಲಾಟ್‌ಫಾರಂನ ಹಳದಿ ಪಟ್ಟಿಯಿಂದ ದೂರವಿದ್ದರೂ ಯುವಕ ಎಲ್ಲರ ಕಣ್ಣು ತಪ್ಪಿಸಿ ಓಡಿಹೋಗಿ ಹಾರಿದ್ದಾನೆ. ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಆಕಸ್ಮಿಕವಾಗಿಯೂ ಅವಘಡ ಸಂಭವಿಸಬಹುದಲ್ಲವೇ? ಆಗ ಆ ಘಟನೆಗಳಿಗೆ ಹೊಣೆ ಯಾರು?

Advertisement

ಅಲ್ಲದೆ, “ನಮ್ಮ ಮೆಟ್ರೋ’ಗೂ ಇದು ಒಂದು ರೀತಿಯ ಕಪ್ಪುಚುಕ್ಕೆ ಅಲ್ಲವೇ? ಈಗಾಗಲೇ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ “ಪೀಕ್‌ ಅವರ್‌’ನಲ್ಲಿ ಜನ ಕಿಕ್ಕಿರಿದು ತುಂಬಿರುತ್ತದೆ. ಹಾಗಾಗಿ, ಸ್ವಯಂಚಾಲಿತ ದ್ವಾರಗಳ ಅವಶ್ಯಕತೆ ಇದೆ ಎಂದು ಮೆಟ್ರೋ ತಜ್ಞರು ಪ್ರತಿಪಾದಿಸುತ್ತಾರೆ.

ಪ್ಲಾಟ್‌ಫಾರಂ ದ್ವಾರಗಳ ಮುಖ್ಯ ಉದ್ದೇಶ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವುದಾಗಿದೆ. ದೆಹಲಿಯಲ್ಲಿ ಕೂಡ ಇದೇ ಕಾರಣಕ್ಕೆ ಅಳವಡಿಸಲಾಗಿದೆ. ನಮ್ಮಲ್ಲಿ ಮೆಜೆಸ್ಟಿಕ್‌ನಲ್ಲಿ ಹೊರತುಪಡಿಸಿದರೆ, ಉಳಿದ ನಿಲ್ದಾಣಗಳಲ್ಲಿ ಅಷ್ಟೊಂದು ದಟ್ಟಣೆ ಇರುವುದಿಲ್ಲ. ಅಲ್ಲದೆ, ಹೀಗೆ ದ್ವಾರಗಳನ್ನು ಅಳವಡಿಸಿದಾಗ, ಮೆಟ್ರೋ ಕಾರ್ಯಾಚರಣೆ ವೇಗ ತಗ್ಗುತ್ತದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಅಭಿಪ್ರಾಯ ವ್ಯಕ್ತಪಡಿಸಿದರು.  

ಈ ಘಟನೆಗಳು ಪ್ಲಾಟ್‌ಫಾರಂ ದ್ವಾರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆಗೆ ಹಚ್ಚಿವೆ. ಇದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿ, ಮುಂಬರುವ ದಿನಗಳಲ್ಲಿ ಇದಕ್ಕೆ ಶಾಶ್ವತವಾಗಿ ಬ್ರೇಕ್‌ ಹಾಕಬೇಕಿದೆ. ಅಂತಿಮವಾಗಿ ಭದ್ರತೆ ಮತ್ತು ಸುರಕ್ಷತೆ ನಮಗೆ ಮುಖ್ಯ. ಅಷ್ಟಕ್ಕೂ ದೇಶದ ವಿವಿಧ ಮೆಟ್ರೋಗಳೂ ಇದನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಎರಡನೇ ಹಂತದಲ್ಲಿ ಅಳವಡಿಕೆ: ಈ ಮಧ್ಯೆ 72.3 ಕಿ.ಮೀ. ಉದ್ದದ ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಈ ಸ್ವಯಂಚಾಲಿತ ದ್ವಾರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಈಗಿರುವುದಕ್ಕಿಂತ ಸುಮಾರು ಪಟ್ಟು ಹೆಚ್ಚಲಿದೆ. ಭದ್ರತೆ ಮತ್ತು ಸುರಕ್ಷತೆ ಜತೆಗೆ ದಟ್ಟಣೆ ನಿಯಂತ್ರಣಕ್ಕಾಗಿ ಸೆನ್ಸರ್‌ ಆಧಾರಿತ ದ್ವಾರಗಳನ್ನು ಬಹುತೇಕ ನಿಲ್ದಾಣಗಳಲ್ಲಿ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಯೋಜನೆ ರೂಪಿಸಿದೆ. 

ಹಳಿ ಮೇಲೆ ಹಾರಿ ಆತ್ಮಹತ್ಯೆ: 2012ರ ಡಿಸೆಂಬರ್‌ನಲ್ಲಿ ವಿಷ್ಣು ಶರಣ್‌ (17) ಎಂಬ ಯುವಕ ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮೆಟ್ರೋ ರೈಲು ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಸೆಂಟ್‌ ಜೋಸೆಫ್ ಕಾಲೇಜು ವಿದ್ಯಾರ್ಥಿ ವಿಷ್ಣು ಶರಣ್‌ ರೈಲು ಹಳಿಯ ಮೇಲೆ ಜಿಗಿದಿದ್ದನು. ಟಿಕೆಟ್‌ ಖರೀದಿಸಿ ಪ್ಲಾಟ್‌ಫಾರಂ ಪ್ರವೇಶಿಸಿದ್ದನು.

ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆಯಲ್ಲಿ ಬಿಎಂಆರ್‌ಸಿಎಲ್‌ನ ಸಿಬ್ಬಂದಿಯಿಂದ ಯಾವುದೇ ನಿರ್ಲಕ್ಷ ಕಂಡುಬಂದಿಲ್ಲ. ಘಟನೆ ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳು ಯುವಕ ಹಾಗೂ ಆತನ ತಾಯಿಯೊಂದಿಗೆ ಮಾತನಾಡಿದ್ದೇನೆ. ಮೆಟ್ರೋ ನಿಲ್ದಾಣಗಳಲ್ಲಿ ಇನ್ನಷ್ಟು ಸುರಕ್ಷತೆ ಹೆಚ್ಚಿಸುವ ಸಂಬಂಧ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಲಾಗುವುದು.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next