Advertisement

ಆತ್ಮಹತ್ಯೆ ಕಾರಣಗಳು ಹಾಗೂ ತಡೆಯುವ ಕ್ರಮಗಳು

06:00 AM Sep 09, 2018 | Team Udayavani |

ಆತ್ಮಹತ್ಯೆಯು ದೈಹಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಂತೆ ಬಹು ಘಟಕಗಳ ಭಾಗೀದಾರಿಕೆಯ ಫ‌ಲವಾಗಿ ಉದ್ಭವಿಸುವ ಒಂದು ಸಂಕೀರ್ಣ ವಿದ್ಯಮಾನ. ಆತ್ಮಹತ್ಯೆಯು ಬಹಳ ಸಾಮಾನ್ಯವಾಗಿ ತೀವ್ರ ನೋವು, ಹತಾಶೆ ಮತ್ತು ನಿರಾಶೆಯ ಫ‌ಲವಾಗಿರುತ್ತದೆ: ಅದು ಆಶಾವಾದದ ಎದುರು ನೋವು, ಭಯ ಮತ್ತು ಹತಾಶೆಗಳ ವಿನ ವಿಜಯ. ಮನುಷ್ಯ ಇತಿಹಾಸ ದಾಖಲುಗೊಳ್ಳಲಾರಂಭಿಸಿದಂದಿನಿಂದಲೂ ಆತ್ಮಹತ್ಯೆ ಕಂಡುಬಂದಿದೆ; ಸಮಯ ಮತ್ತು ಸಂಸ್ಕೃತಿಯನ್ನು ಆಧರಿಸಿ ನಿಂದನೆಯಿಂದ ತೊಡಗಿ ಅಸಹಿಷ್ಣುತೆಯ ವರೆಗೆ ಆತ್ಮಹತ್ಯೆಗೆ ಕಾರಣಗಳನ್ನು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಪ್ರೇರಣೆಗಳು ಮತ್ತು ಎಷ್ಟು ಸಂಖ್ಯೆಯಲ್ಲಿ ಅವು ಉಂಟಾಗಿವೆ ಎಂಬುದೂ ಕಾಲದಿಂದ ಕಾಲಕ್ಕೆ ಬದಲಾಗಿದೆ. ಅತ್ಯಂತ ತೀವ್ರವಾದ ನೋವು, ದುಮ್ಮಾನ, ನರಳುವಿಕೆಯನ್ನು ಉಂಟು ಮಾಡಿದ ಸಮಸ್ಯೆ ಅಥವಾ ಬಿಕ್ಕಟ್ಟಿನಿಂದ ಪಾರಾಗುವ ಮಾರ್ಗವಾಗಿ ಆತ್ಮಹತ್ಯೆಯನ್ನು ಕಾಣಲಾಗಿದೆ. ಕೆಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಹೊಂದಿರುತ್ತಾರೆ; ಆದರೆ ಅದಕ್ಕೆ ಮುಂದಾಗುವುದಿಲ್ಲ, ಇನ್ನು ಕೆಲವರು ಮಾಡಿಕೊಳ್ಳುವ ಮುನ್ನ ದಿನಗಳು, ವಾರಗಳು, ತಿಂಗಳುಗಳು ಅಥವಾ ವರ್ಷಗಟ್ಟಲೆ ಮುನ್ನ ಯೋಜನೆ ಹಾಕಿಕೊಂಡಿರುತ್ತಾರೆ, ಇನ್ನು ಕೆಲವರು ಪೂರ್ವಯೋಚನೆ ಇಲ್ಲದೆ, ಹಠಾತ್ತಾಗಿ ಪ್ರಾಣಹರಣ ಮಾಡಿಕೊಳ್ಳುತ್ತಾರೆ.

Advertisement

ಆತ್ಮಹತ್ಯೆ: ಅಂಕಿಅಂಶಗಳು 
ಏನು ಹೇಳುತ್ತವೆ?

ಯಾವುದೇ ಒಂದು ಸಮುದಾಯದಲ್ಲಿ ಆತ್ಮಹತ್ಯೆ ಗಂಭೀರವಾದ ಆರೋಗ್ಯ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಪ್ರತೀ ವರ್ಷ ಸರಿಸುಮಾರು ಎಂಟು ಲಕ್ಷ ಮಂದಿ ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುತ್ತಾರೆ; ಇನ್ನೂ ಅನೇಕರು ಆತ್ಮಹತ್ಯೆಗೆ ಪ್ರಯತ್ನ ಪಡುತ್ತಾರೆ. ಪ್ರತೀ ಆತ್ಮಹತ್ಯೆಯೂ ಸಂಬಂಧಿತ ಕುಟುಂಬ, ಸಮುದಾಯ ಮತ್ತು ಇಡಿಯ ದೇಶಕ್ಕೆ ಒಂದು ದುರಂತವಾಗಿ ಪರಿಣಮಿಸುತ್ತದೆ; ಬದುಕಿರುವವರ ಮೇಲೆ ದೀರ್ಘ‌ಕಾಲೀನ ಪರಿಣಾಮವನ್ನು ಬೀರುತ್ತದೆ. ಆತ್ಮಹತ್ಯೆಯು ಬದುಕಿನ ಯಾವುದೇ ಕಾಲಘಟ್ಟದಲ್ಲಿ ನಡೆಯಬಹುದು, 2016ರಲ್ಲಿ ಜಾಗತಿಕವಾಗಿ ಅದು 15-19 ವರ್ಷ ವಯೋಮಾನದವರ ಮರಣಕ್ಕೆ ದ್ವಿತೀಯಪ್ರಮುಖ ಕಾರಣವಾಗಿತ್ತು.

ಆತ್ಮಹತ್ಯೆಯು ಹೆಚ್ಚು ತಲಾ ಆದಾಯವುಳ್ಳ ಮುಂದುವರಿದ ದೇಶಗಳಿಗೆ ಮಾತ್ರ ಸೀಮಿತವಲ್ಲ; ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಕಂಡುಬರುತ್ತದೆ. ವಾಸ್ತವವಾಗಿ 2016ರಲ್ಲಿ ಜಾಗತಿಕ ಮಟ್ಟದಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.79ರಷ್ಟು ಕಂಡುಬಂದದ್ದು ಕಡಿಮೆ ಮತ್ತು ಮಧ್ಯಮ ತಲಾದಾಯವುಳ್ಳ ದೇಶಗಳಲ್ಲಿಯೇ.

ಆತ್ಮಹತ್ಯೆ ತಡೆ ಉದ್ದೇಶದ ಅಂತಾರಾಷ್ಟ್ರೀಯ ಒಕ್ಕೂಟ (ಐಎಎಸ್‌ಪಿ)ವು ಪ್ರತೀವರ್ಷ ಸೆಪ್ಟಂಬರ್‌ 10ನ್ನು ಜಾಗತಿಕ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸುತ್ತದೆ. ಆತ್ಮಹತ್ಯೆಯನ್ನು ತಡೆಯಬಹುದು ಎಂಬ ಜಾಗೃತಿಯನ್ನು ಎಲ್ಲೆಡೆ ಉಂಟು ಮಾಡುವುದೇ ಈ ದಿನಾಚರಣೆಯ ಪ್ರಧಾನ ಉದ್ದೇಶ. “”ಆತ್ಮಹತ್ಯೆಯನ್ನು ತಡೆಯಲು ಜತೆಗೂಡಿ ಕೆಲಸ ಮಾಡೋಣ” – ಕಳೆದ ವರ್ಷದ ಈ ಧ್ಯೇಯವಾಕ್ಯವನ್ನು ಈ ವರ್ಷವೂ ಕಾಯ್ದುಕೊಳ್ಳಲಾಗಿದೆ.

ಯಾರು ಅಪಾಯದಲ್ಲಿರುತ್ತಾರೆ?
ಮಾನಸಿಕ ಸಮಸ್ಯೆಗಳು (ನಿರ್ದಿಷ್ಟವಾಗಿ ಖನ್ನತೆ ಮತ್ತು ಮದ್ಯಪಾನ ಚಟದ ಸಮಸ್ಯೆ) ಮತ್ತು ಆತ್ಮಹತ್ಯೆಯ ನಡುವಣ ಸಂಬಂಧ ಈಗಾಗಲೇ ಶ್ರುತಪಟ್ಟಿದ್ದರೂ ಅನೇಕ ಆತ್ಮಹತ್ಯೆ ಪ್ರಕರಣಗಳು ಹಠಾತ್ತನೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಂಭವಿಸುತ್ತವೆ – ಆರ್ಥಿಕ ಮುಗ್ಗಟ್ಟು, ಮುರಿದುಹೋದ ಸಂಬಂಧ ಅಥವಾ ದೀರ್ಘ‌ಕಾಲಿಕ ನೋವು ಅಥವಾ ಅನಾರೋಗ್ಯಗಳಂತಹ ಜೀವನ ಒತ್ತಡಗಳನ್ನು ಎದುರಿಸಲಾಗದೆ ಸೋತು ಇವು ನಡೆಯುತ್ತವೆ.  ಇದಲ್ಲದೆ, ಬಿಕ್ಕಟ್ಟು, ಸಮಸ್ಯೆ, ಹಿಂಸೆ, ನಿಂದನೆ ಅಥವಾ ಕಳೆದುಹೋಗುವುದು ಮತ್ತು ಏಕಾಕಿತನವೂ ಆತ್ಮಹತ್ಯಾ ವರ್ತನೆಯ ಜತೆಗೆ ಬಲವಾದ ನಂಟು ಹೊಂದಿದೆ. ನಿಂದನೆ/ ತಾರತಮ್ಯ ಅನುಭವಿಸಬಹುದಾದ ದುರ್ಬಲ ಸಮುದಾಯ (ಉದಾಹರಣೆಗೆ, ಕೈದಿಗಳು)ಗಳಲ್ಲಿ ಆತ್ಮಹತ್ಯಾ ದರವೂ ಅತ್ಯಂತ ಹೆಚ್ಚಿರುತ್ತದೆ. ಈ ಹಿಂದೆ ಆತ್ಮಹತ್ಯೆಗೆ ನಡೆಸಿದ ಪ್ರಯತ್ನವು ಅತ್ಯಂತ ಅಪಾಯಕರ ಅಂಶವಾಗಿರುತ್ತದೆ. 

Advertisement

(ಮುಂದುವರಿಯುತ್ತದೆ)

– ಪ್ರವೀಣ್‌ ಎ. ಜೈನ್‌, 
ಮನೋ-ಸಾಮಾಜಿಕ ಸಮಾಲೋಚಕರು,
ಮನೋವೈದ್ಯಕೀಯ ವಿಭಾಗ, 
ಕೆಎಂಸಿ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next