Advertisement

ಕಾಬೂಲ್‌ನಲ್ಲಿ ಭೀಕರ ಸ್ಫೋಟ:ಆ್ಯಂಬುಲೆನ್ಸ್‌ ದಾಳಿಗೆ 100 ಬಲಿ

09:57 AM Jan 28, 2018 | |

 ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಆ್ಯಂಬುಲೆನ್ಸ್‌ ಮೂಲಕ ತಾಲಿಬಾನ್‌ ಉಗ್ರರು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 100 ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ ಸುಮಾರು 160 ಮಂದಿ ಗಾಯಗೊಂಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ನಡೆದ ಅತ್ಯಂತ ಬೀಭತ್ಸ ಆತ್ಮಾಹುತಿ ದಾಳಿ ಎಂದು ಅಫ್ಘಾನಿಸ್ತಾನ  ಸರ್ಕಾರ ಹೇಳಿದೆ. ಕಳೆದ ವಾರ ಕಾಬೂಲ್‌ನಲ್ಲಿ ಪಂಚತಾರಾ ಹೋಟೆಲ್‌ ಮೇಲೆ ಮುಂಬೈನ 26/11ರ ಮಾದರಿ ದಾಳಿಯಲ್ಲಿ 22 ಮಂದಿ ಅಸುನೀಗಿದ್ದರು. 

Advertisement

ರಾಜಧಾನಿ ಕಾಬೂಲ್‌ನಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ದೂತಾವಾಸ ಮತ್ತು ರಾಯಭಾರ ಕಚೇರಿಗಳು ಇರುವ ಸ್ಥಳದಲ್ಲಿಯೇ ಸ್ಫೋಟಕಗಳು ತುಂಬಿದ್ದ ಆ್ಯಂಬುಲೆನ್ಸ್‌ ಮೂಲಕ ವ್ಯಕ್ತಿಯೊಬ್ಬ ಆಗಮಿಸಿದ್ದ. ಮೊದಲ ಚೆಕ್‌ ಪಾಯಿಂಟ್‌ನಲ್ಲಿ ಆತ, “ಜಮುರಿಯೇಟ್‌ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಲು ಇದೆ’ ಎಂದು ಹೇಳಿಕೊಂಡು ಬಂದಿದ್ದ. ಎರಡನೇ ಚೆಕ್‌ಪಾಯಿಂಟ್‌ಗೆ ಬರುತ್ತಿದ್ದಂತೆ ಆ್ಯಂಬುಲೆನ್ಸ್‌ ಸ್ಫೋಟಗೊಂಡಿತು. ಕೂಡಲೇ ಅಲ್ಲಿ ಇದ್ದವರೆಲ್ಲ ದಿಕ್ಕಾಪಾಲಾಗಿ ಓಡಿದರು ಮತ್ತು  ಸ್ಫೋಟದ ತೀವ್ರತೆಗೆ ಹಲವರ  ದೇಹಗಳು ಛಿದ್ರಗೊಂಡವು. ಜಮುರಿಯೇಟ್‌ ಆಸ್ಪತ್ರೆಯ ಆವರಣದಲ್ಲೆಲ್ಲ ಮೃತದೇಹಗಳು, ಗಾಯಾಳುಗಳೇ ಕಂಡುಬಂದರು. ಆಸ್ಪತ್ರೆಯ ಸಿಬ್ಬಂದಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಹರಸಾಹಸ ಪಟ್ಟರು ಎಂದು ಎಎಫ್ಪಿ ವರದಿ ಮಾಡಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಬರ್ಯಾಲೈ ಹಿಲಾಲಿ ಮಾತನಾಡಿ, ಘಟನೆಯಲ್ಲಿ 100 ಮಂದಿ ಅಸುನೀಗಿ, 160 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

 ಹೊಣೆ ಹೊತ್ತ ತಾಲಿಬಾನ್‌

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಉಗ್ರ ಸಂಘಟನೆ ತಾಲಿಬಾನ್‌ ಸಾಮಾಜಿಕ ಜಾಲತಾಣಗಳ ಮೂಲಕ ಘಟನೆಗೆ ತಾನೇ ಹೊಣೆ ಎಂದು ಘೋಷಿಸಿಕೊಂಡಿತು. ಇದೇ ವೇಳೆ ಘಟನೆಯ ಫೋಟೋ ಮತ್ತು ವಿಡಿಯೋಗಳು ಫೇಸ್‌ಬುಕ್‌ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿರುವುದನ್ನು ಅಫ್ಘಾನಿಸ್ತಾನದ ಅಧ್ಯಕ್ಷರ ಅರಮನೆಯಿಂದ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ಖಂಡಿಸಲಾಗಿದೆ. 

ಸ್ಥಳೀಯ ಸುದ್ದಿವಾಹಿನಿ ಜತೆಗೆ ಮಾತನಾಡಿದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದ ತಮ್ಮ ಸಹೋದರನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದೆ. ಆದರೆ ಘಟನೆಯಿಂದಾಗಿ ಒಳ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆ ಸಮೀಪದಲ್ಲಿಯೇ ಸಣ್ಣ ಅಂಗಡಿ ಇರಿಸಿಕೊಂಡಿದ್ದ ಅಮೀನುಲ್ಲಾ ಎಂಬುವರು ಮಾಧ್ಯಮಗಳ ಜತೆ ಮಾತನಾಡಿ, “ಸ್ಫೋಟದ ತೀವ್ರತೆಗೆ ಕಟ್ಟಡವೇ ನಡುಗಿ ಹೋಯಿತು. ಶಬ್ದ ಕೇಳಿ ಎಚ್ಚರ ತಪ್ಪಿದೆ’ ಎಂದಿದ್ದಾರೆ.

Advertisement

ಭಾರತ ಖಂಡನೆ
ಕಾಬೂಲ್‌ ಘಟನೆಯನ್ನು ಭಾರತ ಸರ್ಕಾರ ಖಂಡಿಸಿದ್ದು, ಇದೊಂದು ಭೀಕರ ಮತ್ತು ಹೀನಾಯ ಕೃತ್ಯ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇಂಥ ಕೃತ್ಯಗಳಿಗೆ ಯಾವುದೇ ರೀತಿಯಲ್ಲಿ ಸಮರ್ಥನೆ ಇಲ್ಲ. ಇಂಥ ಕೃತ್ಯ ಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭಾರತವು ಯಾವತ್ತೂ ಅಫ್ಘಾನಿ ಸ್ತಾನಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಬಯಸುತ್ತೇವೆ ಎಂದೂ ಹೇಳಿದೆ.

ಅಲರ್ಟ್‌ ಬಂದಿತ್ತು
ಕಾಬೂಲ್‌ನಾದ್ಯಂತ ಶನಿವಾರ ಬೆಳಗ್ಗೆಯೇ ಗುಪ್ತಚರ ಮೂಲಗಳ ಮಾಹಿತಿಯ ಆಧಾರದಲ್ಲಿ ಭದ್ರತಾ ಅಲರ್ಟ್‌ ಹೊರಡಿಸಲಾಗಿತ್ತು. ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರರು ಹೆಚ್ಚಾಗಿ ವಿದೇಶಿಯರು ಭೇಟಿ ನೀಡುವಂಥ ಸೂಪರ್‌ಮಾರ್ಕೆಟ್‌, ಮಳಿಗೆಗಳು ಹಾಗೂ ಹೋಟೆಲ್‌ಗ‌ಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಅದರಲ್ಲಿ ಎಚ್ಚರಿಸಲಾಗಿತ್ತು.

ಹಿಂದಿನ ಪ್ರಕರಣಗಳು

2017 ಅಕ್ಟೋಬರ್‌- 176 ಮಂದಿ ಸಾವು
2017 ಮೇ- 150 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next