ಚಳ್ಳಕೆರೆ: ತಂದೆ ಹೆಸರಿನಲ್ಲಿರುವ ನಿವೇಶನದ ಖಾತೆ ಮಾಡಿಸಿಕೊಡುತ್ತಿಲ್ಲ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಮೈಮೇಲೆ ಸೀಮೆಎಣ್ಣೆ ಸುರುವಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ನೆಹರೂ ವೃತ್ತದಲ್ಲಿ ಸೋಮವಾರ ನಡೆದಿದೆ.
ದೊಡ್ಡೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮಸಮುದ್ರ ಗ್ರಾಮದ ಎನ್. ಮಂಜುನಾಥ (45), ಪತ್ನಿ ಶಿಲ್ಪ (30), ಮಕ್ಕಳಾದ ಹೇಮಂತ (11), ಭೂಲಕ್ಷ್ಮೀ (9) ಮತ್ತು ಚೇತನ (5) ಆತ್ಮಹತ್ಯೆಗೆ ಯತ್ನಿಸಿದವರು. ಆತ್ಮಹತ್ಯೆಗೆ ಮುಂದಾಗಲು ಪಿಡಿಒ ಕಾರಣ ಎಂದು ಮಂಜುನಾಥ ಆರೋಪಿಸಿದ್ದಾರೆ.
ಏನಿದು ಘಟನೆ?: ಮಂಜುನಾಥನ ತಂದೆ ನಿಂಗಪ್ಪ ಹೆಸರಿನಲ್ಲಿರುವ ಜಾಗವನ್ನುಅಳತೆ ಮಾಡಲು ಪಿಡಿಒ ಅವರು ಪೊಲೀಸರೊಂದಿಗೆ ತೆರಳಿದ್ದರು. ಈ ಕಾರ್ಯಕ್ಕೆ ಬೊಮ್ಮಸಮುದ್ರ ಗ್ರಾಮದವರೇ ಆದ ಜಗದೀಶ್, ರಾಘವೇಂದ್ರ, ಶೇಖರ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಸದರಿ ಜಾಗವನ್ನು ಯಾವುದೇ ಕಾರಣಕ್ಕೂ ನಿಂಗಪ್ಪನ ಮಗ ಮಂಜುನಾಥನಿಗೆ ನೀಡಬಾರದು. ಈ ಜಾಗದಲ್ಲಿರುವ ತಿಪ್ಪೆಗುಂಡಿಯನ್ನು ತೆರವುಗೊಳಿಸ ಬಾರದು ಎಂದು ತಾಕೀತು ಮಾಡಿದರು. ಅಲ್ಲದೆ ಮಂಜುನಾಥ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಮಧ್ಯ ಪ್ರವೇಶಿಸಿದ ಪೊಲೀಸರು, ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.
ಇದರಿಂದ ಬೇಸತ್ತ ಮಂಜುನಾಥ, ಕುಟುಂಬ ಸಮೇತ ಚಳ್ಳಕೆರೆ ನಗರದ ನೆಹರೂ ವೃತ್ತಕ್ಕೆ ಆಗಮಿಸಿ ಆತ್ಮಹತ್ಯೆಗೆ ಮುಂದಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದುಗ್ಗಾವರ ಗ್ರಾಮ ಪಂಚಾಯತ್ 18-5-1983 ರಂದು ನನ್ನ ತಂದೆ ನಿಂಗಪ್ಪಗೆ ನಿವೇಶನ ನೀಡಿದೆ. ಕಾರಣಾಂತರಗಳಿಂದ ನಮಗೆ ನೀಡಿದ ನಿವೇಶನದ ಸಂಖ್ಯೆ 297ರಲ್ಲಿ ವಾಸ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನನ್ನ ತಂದೆ ಹೆಸರಿಗೆ ಇರುವ ನಿವೇಶನದ ಖಾತೆ ವಿವರವನ್ನು ಪಡೆದುಕೊಂಡಿದ್ದೆ. ಹಕ್ಕುಪತ್ರ ನೀಡುವಂತೆ ಮತ್ತು ನಿವೇಶನ ಅಳತೆ ಮಾಡಿಕೊಡುವಂತೆ ಗ್ರಾಪಂಗೆ ಅರ್ಜಿ ನೀಡಿದ್ದೆ. ನಿವೇಶನ ಪಡೆಯಲು ಅಡ್ಡಿ ಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನನ್ನ ಪತ್ನಿ ಎಚ್. ಶಿಲ್ಪ ಕಳೆದ ಮೇ 31 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದೇ ಅಲ್ಲದೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದರು.
ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದ ಬೊಮ್ಮಸಮುದ್ರ ಗ್ರಾಮಸ್ಥರು ಚಳ್ಳಕೆರೆಗ ಆಗಮಿಸಿ ನೊಂದ ಕುಟುಂಬವನ್ನು ಸಂತೈಸಿದರು. ಪಿಎಸ್‌ಐ ಕೆ. ಸತೀಶ್ ನಾಯ್ಕ ಹಾಗೂ ಸಿಬ್ಬಂದಿ ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿದರು. ನಿವೇಶನ ಸ್ವಾಧೀನಕ್ಕೆ ಅಡ್ಡಿಪಡಿಸಿದ ನಾಲ್ವರು ಹಾಗೂ ದೊಡ್ಡೇರಿ ಗ್ರಾಪಂ ಪಿಡಿಒ ವಿಚಾರಣೆ ನಡೆಸುವುದಾಗಿ ಪಿಎಸ್‌ಐ ತಿಳಿಸಿದ್ದಾರೆ.
ಪಿಡಿಒ ಸ್ಪಷ್ಟನೆ: ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡೇರಿ ಗ್ರಾಪಂ ಪಿಡಿಒ ಪ್ರತಿಭಾ, 1983ರಲ್ಲಿ ಮಂಜುನಾಥ ತಂದೆ ಹೆಸರಿಗೆ ನಿವೇಶನ ನೀಡಲಾಗಿತ್ತು. ಆದರೆ ಇದುವರೆಗೆ ಅವರ ಕುಟುಂಬದವರು ಅಲ್ಲಿ ವಾಸಿಸುತ್ತಿಲ್ಲ. ಅಲ್ಲದೆ ಖಾತೆಯನ್ನೂ ಮಾಡಿಸಿಕೊಂಡಿಲ್ಲ. ಹಾಗಾಗಿ ದಾಖಲೆಗಳ ಪ್ರಕಾರ ಸದರಿ ಜಾಗ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದೆ. ಗ್ರಾಪಂ ಸದಸ್ಯರು ಕೂಡ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಆದ್ದರಿಂದ ಕಾನೂನುಕ್ರಮ ಕೈಗೊಳ್ಳಲಾಗಿದೆ. ಮಂಜುನಾಥ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಿಡಿಒ ಮಾತನ್ನು ಅಲ್ಲಗಳೆದಿರುವ ಮಂಜುನಾಥ, ಕಳೆದ ಆರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿ ಖಾತೆ ನೀಡುವಂತೆ ಮನವಿ ಮಾಡಿದ್ದೆ. ಗ್ರಾಪಂ ಸದಸ್ಯರು ಕೂಡ ನನ್ನ ಅರ್ಜಿಗೆ ಸಹಿ ಹಾಕಿದ್ದಾರೆ. ಆದರೆ ಪಿಡಿಒ ಮಾತ್ರ ಖಾತೆ ಮಾಡಿಸಿಕೊಡುವ ಬಗ್ಗೆ ಗಮನ ನೀಡುತ್ತಿಲ್ಲ ಎಂದು ದೂರಿದರು.