Advertisement

ಡಿಸಿ ಕಚೇರಿ ಆವರಣದಲ್ಲೇ ಆತ್ಮಹತ್ಯೆ ಯತ್ನ

09:43 AM Oct 06, 2018 | |

ಚಾಮರಾಜನಗರ: ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮೈಮೇಲೆ ಡೀಸೆಲ್‌ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಬೇಡರಪುರದ ಮಲ್ಲಯ್ಯ, ಇವರ ಪತ್ನಿ ದೊಡ್ಡಮ್ಮ, ಪುತ್ರ ಕುಮಾರ್‌ ಆತ್ಮಹತ್ಯೆಗೆ ಯತ್ನಿಸಿದವರು. ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಇವರು, ಕಚೇರಿಯ ಆವರಣದಲ್ಲಿ ಕುಳಿತು ಮೈಮೇಲೆ ಡೀಸೆಲ್‌ ಸುರಿದುಕೊಳ್ಳಲು ಆರಂಭಿಸಿದರು. ಇದನ್ನು ನೋಡಿದ ಸಾರ್ವಜನಿಕರು ಹಾಗೂ ಪೊಲೀಸರು ಅವರ ಬಳಿಯಿದ್ದ ಡೀಸೆಲ್‌ ಡಬ್ಬ ಹಾಗೂ ಬೆಂಕಿ ಪೊಟ್ಟಣವನ್ನು ಕಿತ್ತುಕೊಂಡರು.

ವಿಷಯ ತಿಳಿದು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ತಹಸೀಲ್ದಾರ್‌, ಪುರಂದರ ಸ್ಥಳಕ್ಕೆ ಆಗಮಿಸಿದರು.ಕುಮಾರ್‌ ಅವರು ತಹಸೀಲ್ದಾರ್‌ ಬಳಿ ತಮ್ಮ ಅಳಲು ತೋಡಿಕೊಂಡರು. “ಬೇಡರಪುರ ಗ್ರಾಮದ ಸರ್ವೇ ನಂ. 248/1 ರಲ್ಲಿ ನಮ್ಮ ಕುಟುಂಬಕ್ಕೆ ಸೇರಿದ ಒಂದು ಎಕರೆ ಸ್ವಂತ ಜಮೀನಿದೆ. ಇದಕ್ಕೆ ಹೊಂದಿಕೊಂಡಂತೆ ಸರ್ವೇ ನಂ.33ರಲ್ಲಿರುವ ಸುಮಾರು ಮೂರೂವರೆ ಎಕರೆ ಸರ್ಕಾರಿ ಭೂಮಿಯನ್ನು ನಾವು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ.

ಈ ಸರ್ಕಾರಿ ಭೂಮಿ ನನಗೆ ಸೇರಿದ್ದು ಎಂದು ಗ್ರಾಮದ ಶಿವಪ್ಪ ಎಂಬುವರು ಇತ್ತೀಚೆಗೆ ತಕರಾರು ಮಾಡುತ್ತಿದ್ದಾರೆ. ಅಲ್ಲದೆ, ಈ ಜಾಗವನ್ನು ಗ್ರಾಮದ ಮಹದೇವಸ್ವಾಮಿ, ಶ್ರೀನಿವಾಸ, ಚಿನ್ನಸ್ವಾಮಿ ಎಂಬುವರಿಗೆ ಮಾರಾಟ ಮಾಡಿದ್ದೇನೆ. ನೀವು ಅವರಿಗೆ ಜಮೀನನ್ನು ಬಿಟ್ಟು ಕೊಡಿ, ಇಲ್ಲದಿದ್ದರೆ ಗ್ರಾಮದಲ್ಲಿ ವಾಸ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ನನ್ನ ತಾಯಿಯ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ಅಳಲು ಆಲಿಸಿದ ತಹಸೀಲ್ದಾರ್‌, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next