Advertisement
ಇತ್ತೀಚೆಗೆ ಲಗ್ಗೆರೆಯಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದ ಬಳಿಕ ನಡೆದ ಗಲಾಟೆ ಘಟನೆ ಸೋಮವಾರ ಪಾಲಿಕೆ ಸಭೆಯಲ್ಲೂ ಪ್ರತಿಧ್ವನಿಸಿ ಆರೋಪ, ಪ್ರತ್ಯಾರೋಪ, ಗದ್ದಲದೊಂದಿಗೆ ಇಡೀ ದಿನದ ಕಲಾಪವನ್ನೇ ಬಲಿ ತೆಗೆದುಕೊಂಡಿತು. ಆಡಳಿತಾರೂಢ ಪಕ್ಷದ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯೆಯರು ಧರಣಿ ನಡೆಸಿ ಆತ್ಮಹತ್ಯೆ ಪ್ರಹಸನ ನಡೆಸಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು.
Related Articles
Advertisement
ಸೋಮವಾರ ಬೆಳಗ್ಗೆ ಕೌನ್ಸಿಲ್ ಆರಂಭವಾಗುತ್ತಿದ್ದರಂತೆ ಸದನದ ಬಾವಿಗಿಳಿದ ಮೂವರು ಸದಸ್ಯೆಯರು, ಶಾಸಕ ಮುನಿರತ್ನ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಲಗ್ಗೆರೆ ವಾರ್ಡ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ, “ಇತ್ತೀಚೆಗೆ ಲಗ್ಗೆರೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ ಸೀರೆ ಎಳೆದಾಡಿ ಅವಮಾನಿಸಲಾಯಿತು.
ಆಗ ಸ್ಥಳದಲ್ಲಿದ್ದ ಪಾಲಿಕೆ ಸದಸ್ಯರು ರಕ್ಷಣೆಗೆ ಧಾವಿಸದೆ ನಗುತ್ತಾ ನಿಂತಿದ್ದರು. ನಮ್ಮನ್ನು ಅಕ್ಕ-ತಂಗಿ ಎಂದು ಭಾವಿಸಿ ನಮ್ಮ ಮೇಲೆ ನಡೆಯುತ್ತಿರುವ ಹಲ್ಲೆ ತಡೆಯಲು ಮುಂದಾಗಲಿಲ್ಲ,’ ಎಂದು ದೂರಿದರು. “ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿ ಹಲವು ದಿನ ಕಳೆದಿದೆ. ಆದರೆ ಈವರೆಗೆ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿಲ್ಲ. ನಾನು ಸತ್ತ ಮೇಲೆ ಅವರನ್ನು ಬಂಧಿಸುತ್ತೀರಾ?’ ಎಂದು ಕಣ್ಣೀರಿಟ್ಟರು.
ಇದಕ್ಕೆ ದನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶವರಣ, “ಮಂಜುಳಾ ಅವರ ಸೀರೆ ಎಳೆದು ಅವಮಾನ ಮಾಡುವ ವೇಳೆ ತಾವು ಸ್ಥಳದಲ್ಲಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಏಕೆ ಮುಂದಾಗಲ್ಲವೇಕೆ?’ ಎಂದು ಮೇಯರ್ ಪದ್ಮಾವತಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಕೋಪಗೊಂಡ ಮೇಯರ್, ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ಗಲಾಟೆ ನಡೆದಾಗ ನಾನು ಸ್ಥಳದಲ್ಲಿರಲಿಲ್ಲ ಸ್ಪಷ್ಟಪಡಿಸಿದರು.
ಇದೇ ವೇಳೆ ಮೇಯರ್, ಲಗ್ಗೆರೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂ ಸಿದ ಕಾರಣಕ್ಕಾಗಿ ರಾಜರಾಜೇಶ್ವರಿನಗರದ ಮುಖ್ಯ ಎಂಜಿನಿಯರ್ ನಾಗರಾಜ್ ಅವರನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಸೂಚಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಸದಸ್ಯರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ನಡೆಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕಪ್ಪು ಸೀರೆಯುಟ್ಟು ಧರಣಿ: ಶಾಸಕ ಮುನಿರತ್ನ ವಿರುದ್ಧ ಧರಣಿ ನಡೆಸಿದ ಮೂವರು ಪಾಲಿಕೆ ಸದಸ್ಯೆಯರು ಕೌನ್ಸಿಲ್ ಸಭೆಗೆ ಕಪ್ಪು ಸೀರೆ ಮತ್ತು ಪಟ್ಟಿ ಧರಿಸಿ ಆಗಮಿಸಿದ್ದರು.
ಕಾಂಗ್ರೆಸ್ ಆಡಳಿತವೇ ನೇರ ಹೊಣೆ!ಹಲವು ವಾರ್ಡ್‌ಗಳಲ್ಲಿ ನಾಮನಿರ್ದೇಶಿತ ಸದಸ್ಯರು ತಾವೇ ಪಾಲಿಕೆ ಸದಸ್ಯರು ಎಂಬಂತೆ ಫ್ಲೆಕ್ಸ್ ಹಾಕಿಕೊಂಡಿದ್ದಾರೆ. ಜತೆಗೆ ಪಾಲಿಕೆಯ ಅಧಿಕಾರಿಗಳು, ಚುನಾಯಿತ ಸದಸ್ಯರಿಗಿಂತ ನಾಮನಿರ್ದೇಶಿತ ಸದಸ್ಯರಿಗೇ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಬಿಬಿಎಂಪಿ ಚುನಾವಣೆಯಲ್ಲಿ ಸೋತವರನ್ನೂ ಕೌನ್ಸಿಲ್‌ನಲ್ಲಿ ಕೂರಿಸಿಬಿಡಿ. ಆಗ ತಮಗೂ ಒಳ್ಳೆಯ ಮರ್ಯಾದೆ ಸಿಗುತ್ತದೆ ಎಂದು ವ್ಯಂಗ್ಯವಾಡಿದರು. ಶಾಸಕರು, ನಾಮನಿರ್ದೇಶಿತ ಸದಸ್ಯರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಮಹಿಳಾ ಸದಸ್ಯರಿಗೆ ಏನೇ ತೊಂದರೆಯಾದರೂ ಅದಕ್ಕೆ ಕಾಂಗ್ರೆಸ್ ಆಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು. ಇನ್ಸ್‌ಪೆಕ್ಟರ್ ಅಮಾನತುಗೊಳಿಸಿ!
ಮಹಿಳಾ ಸದಸ್ಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಂದ ಸುಳ್ಳು ಜಾತಿ ನಿಂದನೆ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದ್ದು, ಈ ಮೂವರು ಸದಸ್ಯೆಯರ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೂಡಲೇ ಈ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಸದಸ್ಯೆಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಬೇಕು ಎಂದು ಶಾಸಕ ಕೆ.ಗೋಪಾಲಯ್ಯ ಒತ್ತಾಯಿಸಿದರು. ಸಂಧಾನ ಸಭೆ ಭರವಸೆ
ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಶನಿವಾರ ಸಂಧಾನ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ ಮೇಯರ್, ಆ ಸಭೆಯಲ್ಲಿ ಸತ್ಯಾಸತ್ಯತೆ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಆದರೆ, ಇದಕ್ಕೆ ಒಪ್ಪದ ಮಹಿಳಾ ಸದಸ್ಯರು ಧರಣಿ ಮುಂದುವರಿಸಿ, ಪಿನಾಯಿಲ್ ಕುಡಿಯುವ ಪØಸನ ನಡೆಸಿದ್ದರಿಂದ ಮೇಯರ್ ಸಭೆಯನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ವರಸೆ ಬದಲಿಸಿದ ಮೇಯರ್!
ಬೆಳಗ್ಗೆ ಮಹಿಳಾ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿದ ಮೇಯರ್, ಮಧ್ಯಾಹ್ನದ ವೇಳೆಗೆ ವರಸೆ ಬದಲಿಸಿ, ಸಭೆಯಲ್ಲಿ ಇಲ್ಲದವರ ಬಗ್ಗೆ ಮಾತನಾಡುವುದು ಬೇಡ. ಶಾಸಕರು ಸಭೆಯಲ್ಲಿದ್ದಾಗ ಮಾತನಾಡುವುದು ಒಳಿತು ಎಂದರಲ್ಲದೆ, ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕೌನ್ಸಿಲ್ ಸಭೆಯ ಸಮಯ ಹಾಳು ಮಾಡಬೇಡಿ ಎಂದರು. ರಾಜೀನಾಮೆಗೆ ಮುಂದಾದ ಸದಸ್ಯೆ!
ಸಭೆ ಮುಂದೂಡಿದ ನಂತರ ಮೇಯರ್, ಜೆಡಿಎಸ್ ಶಾಸಕರು ಹಾಗೂ ಮಂಜುಳಾ ನಾರಾಯಣಸ್ವಾಮಿ ಅವರೊಂದಿಗೆ ಸಂಧಾನ ಸಭೆ ನಡೆಸಿದರು. ಈ ವೇಳೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ, ತಮ್ಮ ಪತ್ನಿಗೆ ಸದಸ್ಯತ್ವವೇ ಬೇಕಾಗಿಲ್ಲ. ಜನರಿಗೆ ಸೇವೆ ಸಲ್ಲಿಸಲು ಬಿಡದಮೇಲೆ ಈ ಹುದ್ದೆಯೇಕೆ ಬೇಕು? ಮಂಜುಳಾ ರಾಜೀನಾಮೆ ನೀಡುತ್ತಾರೆ ಎಂದರು. ಈ ವೇಳೆ ಅವರನ್ನು ಸಮಾಧಾನಪಡಿಸಿದ ಮೇಯರ್ ರಾಜೀನಾಮೆ ನೀಡುವುದನ್ನು ತಪ್ಪಿಸಿದರು. ಜನರ ರಕ್ಷಣೆ ಹೇಗೆ ಮಾಡ್ತೀರ?
ಸಭೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯೆ ಪೂರ್ಣಿಮಾ, ಪಾಲಿಕೆಯ ಮಹಿಳಾ ಸದಸ್ಯರಿಗೆ ರಕ್ಷಣೆ ನೀಡಿ ನ್ಯಾಯ ಕೊಡಿಸಲು ವಿಫಲರಾಗಿರುವ ನೀವು ಬೆಂಗಳೂರಿನ ಜನತೆಗೆ ಹೇಗೆ ರಕ್ಷಣೆ ನೀಡುತ್ತೀರಾ? ನಗರದ ಅಭಿವೃದ್ಧಿಗೇನು ಕೆಲಸ ಮಾಡುತ್ತೀರಾ? ಎಂದು ಮೇಯರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್‌ನ ಶ್ರೀಕಾಂತ್, ಉರಿಯುವ ಬೆಂಕಿಗೆ ತಪ್ಪು ಸುರಿಯುವ ಕೆಲಸ ಮಾಡಬೇಡಿ. ಸಭೆಯಲ್ಲಿ ನಮ್ಮ ವಾರ್ಡ್ ಸಮಸ್ಯೆ ಬಗ್ಗೆ ಚರ್ಚಿಸಲು ಬಂದಿದ್ದೇವೆ. ನಿಮ್ಮ ವೈಯಕ್ತಿಕ ವಿಷಯಗಳಿಗಾಗಿ ಸಭೆಯನ್ನು ಹಾಳು ಮಾಡಬೇಡಿ ಎಂದಾಗ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳಾ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಮೇಯರ್ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಾರ್ವಜನಿಕ ಜೀವನದಲ್ಲಿ ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಿದರಿಂದ ಆಶಾ ಸುರೇಶ್ ಮತ್ತು ಮಮತಾ ವಾಸುದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಲಗ್ಗೆರೆಯಲ್ಲಿ ಇತ್ತೀಚೆಗೆ ಮಂಜುಳಾ ನಾರಾಯಣಸ್ವಾಮಿ ಅವರ ಮೇಲೆ ನಡೆದ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ.
-ಮುನಿರತ್ನ, ರಾಜರಾಜೇಶ್ವರಿ ನಗರ ಶಾಸಕ