Advertisement

ಸುಗ್ಗಿ ಸಂಭ್ರಮ : ತುಳು ಚಿತ್ರರಂಗದಲ್ಲೊಂದು ಹೊಸ ಪ್ರಯೋಗ

08:38 PM May 19, 2017 | Team Udayavani |

‘ಸುಗ್ಗಿ’ ಎಂಬ ತುಳು ಸಿನಿಮಾವೊಂದು ತಯಾರಾಗಿರುವ ವಿಷಯ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಆದರೆ, ಬಿಡುಗಡೆಗೆ ಮುನ್ನವೇ ‘ಸುಗ್ಗಿ’ ತಂಡ ಖುಷಿಯಾಗಿದೆ. ಆ ಖುಷಿಗೆ ಕಾರಣ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ‘ಸುಗ್ಗಿ’ ಚಿತ್ರಕ್ಕೆ ಕೆಲವು ಪ್ರಶಸ್ತಿಗಳಿಗೂ ಭಾಜನವಾಗಿದೆ. ಈ ಚಿತ್ರವನ್ನು ಡಾ.ಎಸ್‌.ರಾಜ್‌ಕಮಲ್‌ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಆದರೆ, ಸಿನಿಮಾ ರಂಗ ಇವರಿಗೆ ಹೊಸದಲ್ಲ. ಈಗಾಗಲೇ ಬಿಡುಗಡೆಯಾಗಿರುವ ‘ಬಬ್ಲುಷ’ದಲ್ಲಿ ನಟಿಸಿರುವ ರಾಜ್‌ ಕಮಲ್‌, ಬಿಡುಗಡೆಯಾಗಬೇಕಿರುವ ಮೂರ್‍ನಾಲ್ಕು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ‘ಸುಗ್ಗಿ’ಯ ಪ್ರಮುಖ ಪಾತ್ರದಲ್ಲೂ ರಾಜ್‌ಕಮಲ್‌ ನಟಿಸಿದ್ದಾರೆ.

Advertisement

ಕೊಲ್ಕತ್ತ ಇಂಟರ್‌ನ್ಯಾಷನಲ್‌ ಕಲ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಬೆಸ್ಟ್‌ ಡೆಬ್ಯೂ ಫಿಲ್ಮ್ ಮೇಕರ್‌’, ಲಾಸ್‌ಎಂಜೆಲಿಸ್‌ ಸ್ವತಂತ್ರ ಚಿತ್ರೋತ್ಸವದಲ್ಲಿ ‘ಅತ್ಯುತ್ತಮ ವಿದೇಶಿ ಚಿತ್ರ’, ಹಾಲಿವುಡ್‌ ಇಂಟರ್‌ನ್ಯಾಷನಲ್‌ ಮೂವಿಂಗ್‌ ಪಿಕ್ಚರ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಚೊಚ್ಚಲ ನಿರ್ದೇಶನದ ಚಿತ್ರ’ ಹಾಗೂ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಜ್ಯೂರಿ ಅವಾರ್ಡ್‌’ ಪ್ರಶಸ್ತಿಗಳನ್ನು ‘ಸುಗ್ಗಿ’ ತನ್ನದಾಗಿಸಿಕೊಂಡಿದೆ. ಜೊತೆಗೆ ಫೈವ್‌ ಕಾಂಟಿನೆಂಟ್ಸ್‌ ಇಂಟರ್‌ನ್ಯಾಷನಲ್‌ ಫಿಲ್ಮ್ಫೆ ಸ್ಟಿವಲ್‌ಗೆ ‘ಅಧಿಕೃತ ಆಯ್ಕೆ’ಗೊಂಡ ಚಿತ್ರ ಎಂಬ ಹೆಗ್ಗಳಿಕೆಯೂ ‘ಸುಗ್ಗಿ’ಯದ್ದು.

‘ಈ ಚಿತ್ರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಮುಖ್ಯವಾಗಿ ಪ್ರೀತಿಯಿಂದಲೇ ಎಲ್ಲವನ್ನು ಗೆಲ್ಲುತ್ತೇನೆ ಎಂದು ಹೊರಟಿರುವ ಆಯುರ್ವೇದ ಪಂಡಿತನ ಸುತ್ತ ಈ ಸಿನಿಮಾ ಸುತ್ತುತ್ತದೆ’ ಎನ್ನುವುದು ರಾಜ್‌ ಕಮಲ್‌ ಮಾತು. ಈ ಚಿತ್ರದಲ್ಲಿ ಆಧುನಿಕ ಸೌಲಭ್ಯಗಳಿಂದ ದೂರವಿರುವ ಹಳ್ಳಿಯೊಂದರಲ್ಲಿರುವ ಆಯುರ್ವೇದ ಪಂಡಿತರೊಬ್ಬರ ಜೀವನ ಶೈಲಿ ಹಾಗೂ ಎಲ್ಲವನ್ನು ಪ್ರೀತಿಯಿಂದಲೇ ಗೆಲ್ಲುತ್ತಾ ಹೋಗುವ ಅವರ ಮನಸ್ಥಿತಿಯ ಕುರಿತು ಹೇಳಲಾಗಿದೆ. ಚಿತ್ರಕ್ಕೆ ‘ಮೋಕೆದ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. ಜೊತೆಗೆ ಜಾತಿ ವ್ಯವಸ್ಥೆ, ಮರ್ಯಾದಾ ಹತ್ಯೆ ಸೇರಿದಂತೆ ಅನೇಕ ವಿಷಯಗಳ ಸುತ್ತವೂ ‘ಸುಗ್ಗಿ’ ಸುತ್ತಲಿದೆ. ಮಂಗಳೂರಿನ ಸಖತ್‌ ರಗಡ್‌ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎ.ಬಿ. ಷಾ ಮತ್ತು ವಿ. ಕೃಷ್ಣಮೂರ್ತಿ ‘ಸುಗ್ಗಿ’ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಭೂಮಿಕಾ ನಾಯಕಿ. ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next