ರಾಯಚೂರು: ಕ್ರಿಕೆಟ್ ಆಟದಲ್ಲಿ ರಾಯಚೂರು ಜಿಲ್ಲೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರಿಗೆ ಅಗತ್ಯ ಪ್ರೋತ್ಸಾಹ ನೀಡಬೇಕಿದೆ ಎಂದು ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ತಿಳಿಸಿದರು.
ನಗರದ ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯದಲ್ಲಿ ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ವಿಜಯರೆಡ್ಡಿ ಪ್ರಥಮ ವಾರ್ಷಿಕ ಪುಣ್ಯಸ್ಮರಣೆ ನಿಮಿತ್ತ ರವಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್‌ನಲ್ಲಿ ರಾಯಚೂರು ರಾಜ್ಯದಲ್ಲಿ ಅತ್ಯಂತ ಅತ್ಯುತ್ತಮ ಖ್ಯಾತಿ ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರಿಕೆಟ್ ಎಂದರೆ ರಾಯಚೂರು ಎನ್ನುವ ಪ್ರತೀತಿ ಇದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಗುರುತಿಸುವಂಥ ಪ್ರತಿಭೆಗಳು ಇಲ್ಲಿವೆ ಎಂದು ಶ್ಲಾಘಿಸಿದರು.
ವಿಜಯರೆಡ್ಡಿ ಅವರ ಅತ್ಯುತ್ತಮ ಕ್ರಿಕೆಟ್ ಕ್ರೀಡಾಪಟುವಾಗಿದ್ದರು. ಆಟಗಾರರೊಂದಿಗೆ ಅವರು ನಡೆದುಕೊಳ್ಳುತ್ತಿದ್ದ ರೀತಿ ನಾನು ನೋಡಿದ್ದೇನೆ. ಜಿಲ್ಲೆಯಲ್ಲಿ ಸಿದ್ಧಗೊಳ್ಳುತ್ತಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ವಿಜಯರೆಡ್ಡಿ ಹೆಸರಿಡುವುದು ಸೂಕ್ತ. ಬ್ರಿಜೇಶ್ ಪಾಟೀಲ್ ಅವರು ಜಿಲ್ಲೆಗೆ ಆಗಮಿಸಿ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋಟಿ ನೀಡುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲಾಗಿದೆ ಎಂದರು.
ಅನ್ನದಾನ, ವಿದ್ಯಾದಾನಕ್ಕಿಂತ, ರಕ್ತದಾನ ಶ್ರೇಷ್ಠ. ರಕ್ತದಾನದಿಂದ ಮತ್ತೂಬ್ಬರ ಜೀವ ಕಾಪಾಡಿದ ಪುಣ್ಯ ಸಿಗಲಿದೆ. ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಕ್ರೀಡಾಂಗಣಕ್ಕೆ ವಿಜಯರೆಡ್ಡಿ ಹೆಸರು ಇಡಲು ನಮ್ಮ ಸಹಮತವಿದೆ. ರಕ್ತದಾನ ಶಿಬಿರ ಅತ್ಯಂತ ಸಮಯೋಚಿತ ಕಾರ್ಯಕ್ರಮವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಮಾತನಾಡಿ, ವಿಜಯರೆಡ್ಡಿ ಅವರು ಬಿಟ್ಟು ಹೋದ ಕಾರ್ಯವನ್ನು ನೀವೆಲ್ಲ ಮುಂದುವರಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ವಿಜಯರೆಡ್ಡಿ ಈ ರೀತಿ ಅಮರವಾಗಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.