Advertisement

ಚುನಾವಣೆಗೆ ಸ್ಪರ್ಧಿಸುವ ವಯೋಮಿತಿ ಇಳಿಕೆಗೆ ಸಲಹೆ

10:47 PM Aug 04, 2023 | Team Udayavani |

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಇರುವ ಕನಿಷ್ಠ ವಯೋಮಿತಿಯನ್ನು ಇನ್ನಷ್ಟು ಇಳಿಸಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.

Advertisement

ಪ್ರಸ್ತುತ ನಿಯಮದ ಪ್ರಕಾರ ಚುನಾವಣಾ ಕಣಕ್ಕಿಳಿಯಬೇಕೆಂದರೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್‌ ಸದಸ್ಯರಾಗಬೇಕೆಂದರೆ 30 ವರ್ಷ ವಯಸ್ಸಾಗಿರಬೇಕು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇರುವ ಈ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಿದರೆ, ಯುವ ಜನರಿಗೂ ಸಮಾನ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅಲ್ಲದೇ, ಕೆನಡಾ, ಯುಕೆ, ಆಸ್ಟ್ರೇಲಿಯಾದಂಥ ಹಲವು ದೇಶಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಅಭ್ಯಸಿಸಿ ಈ ಶಿಫಾರಸು ಮಾಡಲಾಗಿದೆ ಎಂದೂ ಬಿಜೆಪಿ ನಾಯಕ ಸುಶೀಲ್‌ ಮೋದಿ ನೇತೃತ್ವದ ಸಮಿತಿ ತಿಳಿಸಿದೆ.

ಸುರಕ್ಷತಾ ಮಾನದಂಡ ಪಾಲಿಸಿಲ್ಲ
ಈ ನಡುವೆ, ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪೌಷ್ಟಿಕ ಔಷಧಾಹಾರ ಮತ್ತು ಆರೋಗ್ಯ ಪೂರಕ ಉತ್ಪನ್ನಗಳ ಸುಮಾರು 200 ಮಾದರಿಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂಬುವುದು ತಿಳಿದುಬಂದಿದೆ. ಹೀಗಾಗಿ, ಅಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಸಭೆಗೆ ಸರ್ಕಾರ ಮಾಹಿತಿ ನೀಡಿದೆ.

ವಿಧೇಯಕಗಳ ಅಂಗೀಕಾರ:
ಸಶಸ್ತ್ರ ಪಡೆಗಳನ್ನು ಬಲಿಷ್ಠಗೊಳಿಸುವಂಥ ಇಂಟರ್‌ ಸರ್ವಿಸಸ್‌ ಆರ್ಗನೈಸೇಷನ್‌(ಕಮಾಂಡ್‌, ಕಂಟ್ರೋಲ್‌ ಆ್ಯಂಡ್‌ ಡಿಸಿಪ್ಲಿನ್‌) ವಿಧೇಯಕ ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಇದೇ ವೇಳೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌(ತಿದ್ದುಪಡಿ) ವಿಧೇಯಕವೂ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.
ಇದೇ ವೇಳೆ, ರಾಜಸ್ಥಾನದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಯಾಗಬೇಕು ಎಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿ, ಗದ್ದಲವೆಬ್ಬಿಸಿದ ಕಾರಣ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಸುಮ್ಮನಿರಿ, ಇಲ್ಲಾಂದ್ರೆ ಇ.ಡಿ. ದಾಳಿಯಾಗುತ್ತೆ!
ಲೋಕಸಭೆಯಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ. ತಾವು ಮಾತನಾಡುವ ವೇಳೆ ಮಧ್ಯೆ ಮೂಗು ತೂರಿಸಿದ ಪ್ರತಿಪಕ್ಷ ನಾಯಕರೊಬ್ಬರನ್ನು ಸುಮ್ಮನಾಗಿಸುವ ಭರದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ. “ಸುಮ್ಮನಿರಬೇಕು, ಇಲ್ಲ ಅಂದರೆ ನಿಮ್ಮ ಮನೆಗೂ ಇ.ಡಿ. ಪ್ರವೇಶಿಸಬೇಕಾಗುತ್ತದೆ’ ಎಂದು ಲೇಖೀ ಎಚ್ಚರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು, “ಸದನದಲ್ಲೇ ಸಂಸದರಿಗೆ ಬಿಜೆಪಿ ನಾಯಕಿ ಬೆದರಿಕೆ ಹಾಕಿದ್ದಾರೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಲೇಖೀಯವರ ಹೇಳಿಕೆಯೇ ಸಾಕ್ಷಿ’ ಎಂದು ಕಿಡಿಕಾರಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next