ಹರಿಹರ: ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಶ್ರೀ ಬೀರದೇವರ ಸೇವಾ ಸಮಿತಿಯಿಂದ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಲೋಕಾರ್ಪಣೆ ಮಾಡಿದರು.
ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನ ಅವರ ಪುತ್ಥಳಿ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ರಾಜ್ಯ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ರಾಯಣ್ಣ ಮಾಡಿದ ಹೋರಾಟ ಸ್ಮರಣೀಯವಾಗಿದೆ. ಯುವಕರು ರಾಯಣ್ಣನಂತೆ ದೇಶಾಭಿಮಾನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ರಾಯಣ್ಣ, ಮದಕರಿ ನಾಯಕ, ಟಿಪ್ಪುಸುಲ್ತಾನ್ ಸೇರಿದಂತೆ ಇನ್ನೂ ಅನೇಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅಂತಹವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ದೇವರಬೆಳೆಕೆರೆ ಪಿಕ್‌ಅಪ್ ಕಾಲುವೆಗಳು ಸೇರಿದಂತೆ ಹೂಳು ತುಂಬಿರುವ ಎಲ್ಲಾ ಕಾಲುವೆಗಳ ಸ್ವಚ್ಛತೆಗೆ ನೀರಾವರಿ ಇಲಾಖೆಯಿಂದ ಅನುದಾನ ಬರುವುದು ತಡವಾಗಬಹುದು. ಆದ್ದರಿಂದ ನನ್ನ ಅನುದಾನದಲ್ಲೇ ಕಾಲುವೆಗಳ ಹೂಳು ತೆಗೆಸಲು ಡಿಸಿಯವರಿಗೆ ಪತ್ರ ನೀಡುತ್ತೇನೆ. ರೈತರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಬನ್ನಿಕೋಡು ಕೆರೆ ಅಭಿವೃದ್ಧಿಗೊಳಿಸಿ ಈ ಭಾಗದ ರೈತರಿಗೆ ನೀರಿನ ಅನುಕೂಲವಾಗುವಂತೆ ಮಾಡಲಾಗುವುದೆಂದು ಶಾಸಕರು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ತಾಪಂ ಸದಸ್ಯ ಬಸವಲಿಂಗಪ್ಪ, ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್ ಡಿ., ಗ್ರಾಪಂ ಅಧ್ಯಕ್ಷ ಹೊರಟ್ಟಿ ಚನ್ನಬಸಪ್ಪ, ಸಿ.ಎನ್. ಹುಲಿಗೇಶ್, ಕೆ.ಬೇವಿನಹಳ್ಳಿ ಅಂಗಡಿ ಬಸಟೆಪ್ಪ, ಬೆಳ್ಳೂಡಿ ದುಂಡಿ ಸಿದ್ದೇಶ್, ಎಚ್. ಮೈಲಾರಪ್ಪ, ಕುಣಿಬೆಳೆಗೆರೆ ರುದ್ರಪ್ಪ, ಬೆಳ್ಳೂಡಿ ಗಂಗಾಧರಪ್ಪ ಎ., ಪೈ.ಅಣ್ಣಪ್ಪ, ಮತ್ತೆಪ್ಪ ರೆಡ್ಡಿ, ಬೀರೇಶ್, ಶಿವಕುಮಾರ್, ಗುಡ್ಡಪ್ಪಜ್ಜ, ಗ್ವಾರಪ್ಪ, ಬನ್ನಿಕೋಡು ಈರಪ್ಪ, ಶಿವು, ರಾಜು, ಪ್ರವೀಣ್ ಕುಮಾರ್ ಇತರರಿದ್ದರು.